ಬಂಧನ
(ಪ್ರಾತಿನಿಧಿಕ ಚಿತ್ರ)
ಚಿತ್ರದುರ್ಗ: ತಾಲ್ಲೂಕಿನ ಈರಜ್ಜನಹಟ್ಟಿ ಬಳಿ ನಡೆದ ಆಟೊ ಚಾಲಕ ರವಿಕುಮಾರ್ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ರವಿಕುಮಾರ್ ಪತ್ನಿ ಸುನೀತಾ, ಪುತ್ರ ವಿಷ್ಣು ಹಾಗೂ ಸುನೀತಾಳ ಪ್ರಿಯಕರ ರಜತ್ (ಗಣೇಶ್)ನನ್ನು ಬಂಧಿಸಿದ್ದಾರೆ.
ನಗರದ ಕೆಳಗೋಟೆಯಲ್ಲಿ ವಾಸವಿದ್ದ ರವಿಕುಮಾರ್ ಆಟೊ ಚಾಲನೆ ಮಾಡಿಕೊಂಡಿದ್ದರು. ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರಜತ್ ಬೆಂಗಳೂರಿನಿಂದ ಬಂದು ಕೆಳಗೋಟೆಯಲ್ಲೇ ವಾಸಿಸುತ್ತಿದ್ದ. ರವಿಕುಮಾರ್ ಪತ್ನಿ ಸುನೀತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ರವಿಕುಮಾರ್‌ಗೆ ತಿಳಿದು ಹಲವು ಬಾರಿ ಗಲಾಟೆ ನಡೆದಿತ್ತು.
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ರವಿಕುಮಾರ್ ಅವರನ್ನು ಕೊಲೆ ಮಾಡಲು ಸುನೀತಾ, ರಜತ್ ಸಂಚು ರೂಪಿಸಿದ್ದರು. ಸುನೀತಾ– ರವಿಕುಮಾರ್ ಪುತ್ರ ವಿಷ್ಣುಗೆ ಹಣದಾಸೆ ತೋರಿಸಿ ಕೃತ್ಯಕ್ಕೆ ಆತನ ಸಹಾಯವನ್ನೂ ಪಡೆದಿದ್ದರು. ಜುಲೈ 20ರಂದು ರವಿಕುಮಾರ್ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಚೀಲದಲ್ಲಿ ತುಂಬಿ ಬಿಸಾಡಿದ್ದರು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪತಿಯನ್ನು ಕೊಂದಿರುವ ವಿಷಯ ಬೆಳಕಿಗೆ ಬಂದಿದೆ. ಡಿವೈಎಸ್‌ಪಿ ಪಿ.ದಿನಕರ್, ಸರ್ಕಲ್ ಇನ್‌ಸ್ಪೆಕ್ಟರ್ ಮುದ್ದುರಾಜ್, ಸಬ್ ಇನ್‌ಸ್ಪೆಕ್ಟರ್ ಸುರೇಶ್ ತನಿಖೆಯ ಜವಾಬ್ದಾರಿ ಹೊತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.