ಚಿತ್ರದುರ್ಗ: ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ಮಳೆಯಾದ ಬೆನ್ನಲ್ಲೇ ಡೆಂಗಿ ಪ್ರಕರಣ ಏರಿಕೆ ಆತಂಕ ಎದುರಾಗಿತ್ತು. ಆದರೆ, ನಿರಂತರ ಜಾಗೃತಿ, ಸ್ವಚ್ಛತಾ ಕಾರ್ಯಕ್ರಮಗಳು ‘ಸೊಳ್ಳೆ ಸಂತಾನೋತ್ಪತ್ತಿ’ಯ ಯಶಸ್ವೀ ತಡೆಗೆ ಕ್ರಮ ಕೈಗೊಂಡಿವೆ.
ಕಳೆದ ವರ್ಷದ ಆರಂಭದಲ್ಲೇ ಜಿಲ್ಲೆಯಾದ್ಯಂತ ಡೆಂಗಿ ಪ್ರಕರಣಗಳು ಊಹೆಗೂ ಮೀರಿ ಏರಿಕೆ ಕಂಡಿದ್ದವು. 2024ರ ಜನವರಿಯಿಂದ ಜೂನ್ ಅಂತ್ಯಕ್ಕೆ ಬರೋಬ್ಬರಿ 265 ಜನ ಡೆಂಗಿಯಿಂದ ಬಳಲಿದ್ದರು. ಆದರೆ ಈ ಬಾರಿ ಜೂನ್ 6ರವರೆಗೆ ಈ ಪ್ರಕರಣಗಳು ಕೇವಲ ಅರ್ಧ ಶತಕದ ಗಡಿ ದಾಟಿವೆ.
ಜಿಲ್ಲೆಯಲ್ಲಿ 57 ಪ್ರಕರಣ ಕಂಡುಬಂದಿದ್ದು, ಚಿತ್ರದುರ್ಗ ತಾಲ್ಲೂಕಿನಲ್ಲಿ 34 ಜನರಲ್ಲಿ ಡೆಂಗಿ ಪತ್ತೆಯಾಗಿದೆ. ನಗರ ವ್ಯಾಪ್ತಿಯಲ್ಲಿ 18 ಪ್ರಕರಣ ದಾಖಲಾಗಿವೆ. ಆದರೆ, ಕಳೆದ ಬಾರಿ ಇದೇ ವೇಳೆಗೆ 188 ಜನರು ಡೆಂಗಿಯಿಂದ ಬಳಲಿದ್ದರು.
ಡೆಂಗಿ ಮುಂಗಾರು ಸಂದರ್ಭದಲ್ಲಿ ಹೆಚ್ಚುವುದು ಸಾಮಾನ್ಯ. ಆದರೆ ಬೇಸಿಗೆ ಅಂತ್ಯದ ವೇಳೆಗೆ ಮಳೆ ಪ್ರವೇಶಿಸಿದ ಕಾರಣ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು. ಕಳೆದ ವರ್ಷ ಮಾಡಿದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದ ಆರೋಗ್ಯ ಇಲಾಖೆ ನಿರಂತರವಾಗಿ ಲಾರ್ವಾ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಂಡಿತ್ತು. ಸಿಬ್ಬಂದಿ ನಗರದ ಮನೆಮನೆಗೆ ಭೇಟಿ ನೀಡಿ ನೀರು ಸಂಗ್ರಹಗಾರಗಳನ್ನು ಪರಿಶೀಲಿಸಿ ಅರಿವು ಮೂಡಿಸಿದ್ದರು. ಜತೆಗೆ ಶಾಲೆ– ಕಾಲೇಜುಗಳಿಗೆ ಭೇಟಿ ನೀಡಿ ‘ಏಡಿಸ್ ಮುಕ್ತ ಶಾಲೆ, ಸುರಕ್ಷಿತ ನಾಳೆ’ ಅರಿವು ಕಾರ್ಯಕ್ರಮ ನಡೆಸಿದ್ದು, ಸಂಖ್ಯೆ ಇಳಿಮುಖಕ್ಕೆ ಕಾರಣವಾಗಿದೆ.
‘ತೊಟ್ಟಿ, ಬಿಂದಿಗೆಗಳ ಮುಚ್ಚಳ ಮುಚ್ಚದಿದ್ದಾಗ, ಡೆಂಗಿ ಹರಡುವ ಏಡಿಸ್ ಈಜಿಪ್ಟೈ ಸೊಳ್ಳೆ ಅಲ್ಲಿನ ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಎರಡು ದಿನಕೊಮ್ಮೆ ನೀರನ್ನು ತೆರವುಗೊಳಿಸದಿದ್ದರೆ ಸೊಳ್ಳೆಗಳ ಉತ್ಪತ್ತಿ ಆಗಿ ಸಮಸ್ಯೆ ಉಂಟಾಗುತ್ತದೆ ಎಂದು ಅರಿವು ಮೂಡಿಸಲಾಗಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ.
ಮಳೆ ಹೆಚ್ಚಾಗುತ್ತಿರುವುದನ್ನು ಗಮನಿಸಿರುವ ಆರೋಗ್ಯ ಇಲಾಖೆ, ರೋಗ ಹರಡುವಿಕೆ ಹಾಗೂ ಅದರ ಲಕ್ಷಣಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ನಗರದ ಸ್ವಾಮಿ ವಿವೇಕಾನಂದ ನಗರ, ಜೋಗಿಮಟ್ಟಿ ರಸ್ತೆ, ಸ್ಟೇಡಿಯಂ ರಸ್ತೆ, ದರ್ಜಿ ಕಾಲೊನಿ, ಗೋಪಾಲಪುರ ರಸ್ತೆ, ಹಿಮ್ಮತ್ ನಗರ, ರಾಮ್‌ದಾಸ್ ಕಾಂಪೌಂಡ್, ನೆಹರೂ ನಗರ, ಬುರುಜನಹಟ್ಟಿ, ಕುಂಬಾರ ಬೀದಿ, ಕಾಮನಬಾವಿ ಸೇರಿದಂತೆ ಸೋಂಕು ಹೆಚ್ಚಳದ ಸಾಧ್ಯತೆ ಇರುವ ಪ್ರದೇಶಗಳತ್ತ ಹೆಚ್ಚಿನ ಗಮನ ಹರಿಸಿದೆ.
‘ಶೇಖರಿಸಿಟ್ಟ ನೀರನ್ನು ಒಂದು ವಾರದ ನಂತರ ಉಪಯೋಗಿಸಬಾರದು. ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿಕೊಳ್ಳಬೇಕು. ಸೊಳ್ಳೆ ಪರದೆಗಳನ್ನು ತಪ್ಪದೆ ಬಳಸಬೇಕು, ಮೈತುಂಬಾ ಬಟ್ಟೆ ಧರಿಸಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜತೆಗೆ ಟೈರ್, ಚಿಪ್ಪು, ಖಾಲಿ ಬಾಟಲಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು’ ಎನ್ನುತ್ತಾರೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ.
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗಿ ಲಕ್ಷಣಗಳಾಗಿವೆ ಎನ್ನುತ್ತಾರೆ ವೈದ್ಯರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಗಿಂತ ಚಿತ್ರದುರ್ಗದಲ್ಲಿ ರೋಗಿಗಳ ಸಂಖ್ಯೆ ಕೊಂಚ ಏರಿಕೆಯಿದೆ. ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹಾಗೂ ಮೊಳಕಾಲ್ಮುರು ಭಾಗದಲ್ಲಿ ಒಂದಂಕಿ ಪ್ರಕರಣಗಳಿವೆ. ಆದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ವಹಿಸುವಂತಿಲ್ಲ ಎಂಬ ಎಚ್ಚರಿಕೆ ಸಂದೇಶ ಸಿಬ್ಬಂದಿಗೆ ರವಾನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.