ADVERTISEMENT

ಬಗರ್‌ಹುಕುಂ: ಭೂಮಿ ಮಂಜೂರಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 3:20 IST
Last Updated 28 ಅಕ್ಟೋಬರ್ 2025, 3:20 IST
ಹಿರಿಯೂರಿನಲ್ಲಿ ಸೋಮವಾರ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು 
ಹಿರಿಯೂರಿನಲ್ಲಿ ಸೋಮವಾರ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು    

ಹಿರಿಯೂರು: ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ, ಗೋಮಾಳ, ಹುಲ್ಲುಬನ್ನಿ, ಅರಣ್ಯ ಇನ್ನಿತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಕಾರರು, ಬಿಇಒ ವೃತ್ತ, ಗಾಂಧಿ ವೃತ್ತದ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

‘ತಾಲ್ಲೂಕಿನಲ್ಲಿ ಬಗರ್‌ಹುಕುಂ ಸಾಗುವಳಿದಾರರು ಫಾರಂ ನಂ. 50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿ ಹಲವು ದಶಕಗಳಿಂದ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರಗಳು ಖಾಸಗಿ ಕಂಪನಿ, ಬಂಡವಾಳ ಶಾಹಿಗಳ ಪರವಾಗಿ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡುತ್ತಿಲ್ಲ. ಕಾನೂನು ನೆಪ ಹೇಳಿ ನಿರಾಕರಿಸಲಾಗುತ್ತಿದೆ. ಆದರೆ ಬಡವರಿಗೆ ಸರ್ಕಾರ ಹೇಳುವ ಕಾನೂನು ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಅನ್ವಯವಾಗುತ್ತಿಲ್ಲ. ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ತೊಡಕಾಗಿರುವ ಕಂದಾಯ ನಿಯಮಗಳನ್ನು ಸಡಿಲಿಸಿ ಭೂಮಿ ಮಂಜೂರಾತಿ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ರಾಜ್ಯದ ಬಗರ್‌ಹುಕುಂ ಸಮಸ್ಯೆಯನ್ನು ಬಗೆಹರಿಸುವ ಭಾಗವಾಗಿ ‘ಒನ್ ಟೈಮ್ ಸೆಟಲ್ ಮೆಂಟ್’ ಜಾರಿ ಮಾಡಬೇಕು. ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ನೀಡಬೇಕು. ಅರ್ಜಿಗಳನ್ನು ತಿರಸ್ಕರಿಸಬಾರದು. ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್ ಪರಿಶಿಲಿಸಬೇಕು. ನಿವೇಶನ ರಹಿತರಿಗೆ ನಿವೇಶನ– ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಬೇಕು’ ಎಂದು ಪ್ರತಿಭಟನಕಾರರು ಮನವಿ ಮಾಡಿದರು.

ಮುಖಂಡರಾದ ಕೆ.ಸಿ. ಹೊರಕೇರಪ್ಪ, ಸತ್ಯಪ್ಪ ಮಲ್ಲಾಪುರ, ಬಿ.ಒ. ಶಿವಕುಮಾರ್, ಎನ್. ಮಹಲಿಂಗಪ್ಪ, ಹನುಮಂತರಾಯಪ್ಪ, ರಂಗಸ್ವಾಮಿ, ಇಂತಿಯಾಜ್, ವಿಜಯಕುಮಾರ್, ಸಿ. ತಿಮ್ಮಣ್ಣ, ಗೋನೂರು, ರಾಜಪ್ಪ, ಅಂಜನಪ್ಪ, ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಮಹೇಶ್, ಎಂ. ಕೃಷ್ಣ, ನೂರುಲ್ಲಾ, ಎಚ್.ನರಸಿಂಹಮೂರ್ತಿ, ಕೆ. ತಿಪ್ಪೇಸ್ವಾಮಿ, ಕೆ.ಕಾಂತರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.