ADVERTISEMENT

ಹೊಸದುರ್ಗ: ಬಲ್ಲಾಳಸಮುದ್ರ ಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:15 IST
Last Updated 17 ನವೆಂಬರ್ 2025, 7:15 IST
ಹೊಸದುರ್ಗದ ಬಲ್ಲಾಳಸಮುದ್ರ ಕೆರೆಯಲ್ಲಿ ಆಯೋಜಿಸಿದ್ದ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ದೇವರುಗಳು
ಹೊಸದುರ್ಗದ ಬಲ್ಲಾಳಸಮುದ್ರ ಕೆರೆಯಲ್ಲಿ ಆಯೋಜಿಸಿದ್ದ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ದೇವರುಗಳು   

ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಬಲ್ಲಾಳಸಮುದ್ರ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಕಾರಣ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ತೆಪ್ಪೋತ್ಸವ ನಡೆಯಿತು. ತೆಪ್ಪೋತ್ಸವಕ್ಕೂ ಮುನ್ನ ಶಾಸಕ ಬಿ‌.ಜಿ. ಗೋವಿಂದಪ್ಪ ಬಾಗಿನ ಅರ್ಪಿಸಿದರು.

ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪರಿಣಾಮ ನೀರು ಹರಿವು ಹೆಚ್ಚಾಗಿ ಕೆರೆ ಕೋಡಿ ಬಿದ್ದಿದೆ. ಮೈದುಂಬಿರುವ ಬಲ್ಲಾಳಸಮುದ್ರ ಗ್ರಾಮದ ಕೆರೆ ಜನರನ್ನು ಆಕರ್ಷಿಸುತ್ತಿದೆ.

ಸುತ್ತಮುತ್ತಲಿನ ಆಲಘಟ್ಟ, ಮತ್ತೂರು, ಮಲ್ಲಿಹಳ್ಳಿ, ಕಲ್ಕೆರೆ, ಮಾರುತಿ ನಗರ, ಗೊಲ್ಲರಹಟ್ಟಿ, ಲಂಬಾಣಿಹಟ್ಟಿ ಸೇರಿದಂತೆ ವಿವಿಧೆಡೆಯಿಂದ 14ಕ್ಕೂ ಹೆಚ್ಚು ಗ್ರಾಮ ದೇವತೆಗಳನ್ನು ಕೆರೆಯ ಪಕ್ಕದಲ್ಲಿ ಕೂರಿಸಿ, ವಿಶೇಷ ಅಲಂಕಾರ ಮಾಡಿ ಪೂಜೆ ಮತ್ತು ಮಹಾಮಂಗಳಾರತಿಯನ್ನು ನಡೆಸಲಾಯಿತು.

ADVERTISEMENT

ಬಾಳೆದಿಂಡಿನ ಸಹಾಯದಿಂದ ಆಕರ್ಷಕವಾಗಿ ರಥದ ರೀತಿಯಲ್ಲಿ ಮಂಟಪ ನಿರ್ಮಿಸಲಾಗಿತ್ತು. ಅಲಂಕೃತವಾದ ಮಂಟಪದಲ್ಲಿ ಗ್ರಾಮದೇವತೆಗಳಾದ ಕರಿಯಮ್ಮ ಹಾಗೂ ಕೊಲ್ಲಾಪುರದಮ್ಮನನ್ನು ಗಂಗಾದೀಪ ನೈವೇದ್ಯ, ಎಡೆಯೊಂದಿಗೆ ತೆಪ್ಪದಲ್ಲಿ ಕೂರಿಸಿ ಕೆರೆಯಲ್ಲಿ ಪ್ರದಕ್ಷಿಣೆ ಮಾಡಿಸಲಾಯಿತು.

ಬಲ್ಲಾಳಸಮುದ್ರದ ಕರಿಯಮ್ಮ ದೇವಿ, ಆಂಕಾಲಾ ಪರಮೇಶ್ವರಿ, ಆಂಜನೇಯ ಸ್ವಾಮಿ, ಕೊಲ್ಲಾಪುರದಮ್ಮ, ಕಲ್ಕೆರೆ ಆಂಜನೇಯ ಸ್ವಾಮಿ, ರಾಮ ದೇವರು, ವೆಂಕಟೇಶ್ವರ ಸ್ವಾಮಿಯನ್ನು ಕೆರೆಯ ಪ್ರಾಂಗಣಕ್ಕೆ ಕರೆತಂದು ರಾತ್ರಿ ಇಡಿ ಹೋಮ–ಹವನದ ಮೂಲಕ ಪೂಜೆ ನೆರವೇರಿಸಿದರು.

‘ವಿಜಯನಗರದ ಸಾಮಂತ ದೊರೆ ಬಲ್ಲಾಳರಾಯ ಈ ಪ್ರಾಂತ್ಯವನ್ನು ಆಳ್ವಿಕೆ ನಡೆಸುತ್ತಿರುವಾಗ ಇಲ್ಲಿನವರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆರೆಯ ಕೆಳಭಾಗದಲ್ಲಿರುವ ಜಮೀನುಗಳಿಗೆ ಚಾನಲ್‌ಗಳ ಮೂಲಕ ನೀರು ಹರಿಸಿ ಭತ್ತವನ್ನು ಬೆಳೆದು ರೈತರ ಆರ್ಥಿಕ ಸುಧಾರಣೆಗೆ ಕಾರಣರಾಗಿದ್ದರು. ವೀರ ಬಲ್ಲಾಳರಾಯರು ಕಟ್ಟಿಸಿದ ಕೆರೆಗೆ ಯಾವುದೇ ವಿಜ್ಞಬಾರದೆಂದು ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳ ಮೂಲಕ ಪೂಜೆ ನಡೆಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮಸ್ಥರಾದ ತಾರನಾಥ್ ರಮೇಶ್ ಬಾಬು, ಲಕ್ಷ್ಮಿಪತಿನಾಯ್ಡು, ರಂಗಸ್ವಾಮಿ ನಾಯ್ಡು, ಸೀತಾರಾಮು, ನಾರಾಯಣಸ್ವಾಮಿ, ಹರೀಶ್ ಬಾಬು, ಜ್ಯೋತಿಶ್ ಚೌದರಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸೇರಿದ್ದರು.

ಹೊಸದುರ್ಗದ ಶ್ರೀರಾಂಪುರ ಹೋಬಳಿಯ ಬಲ್ಲಾಳಸಮುದ್ರ ಕೆರೆಯಲ್ಲಿ ಭಾನುವಾರ ಅದ್ದೂರಿ ತೆಪ್ಪೋತ್ಸವ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.