ADVERTISEMENT

ಹಿರಿಯೂರು | ಬಾಳೆ ಗೊನೆ ಕಳ್ಳತನ: ಖದೀಮರ ಬೆನ್ನಟ್ಟಿ ಹಿಡಿದ ರೈತರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:48 IST
Last Updated 21 ಆಗಸ್ಟ್ 2025, 6:48 IST
ಕಳ್ಳತನಕ್ಕೆ ಬಳಸಿದ್ದ ಆಟೋ
ಕಳ್ಳತನಕ್ಕೆ ಬಳಸಿದ್ದ ಆಟೋ   

ಹಿರಿಯೂರು: ತಾಲ್ಲೂಕಿನ ಕೋವೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ತೋಟದಲ್ಲಿನ ಬಾಳೆ ಗೊನೆಗಳನ್ನು ಕದ್ದು ಆಟೋಗೆ ತುಂಬುವಾಗ ಮಾಲೀಕರನ್ನು ಕಂಡು ವಾಹನದೊಂದಿಗೆ ತಪ್ಪಿಸಿಕೊಂಡು ಹೋಗುತ್ತಿದ್ದ ಕಳ್ಳರಿಬ್ಬರನ್ನು ರೈತರು ಬೆನ್ನಟ್ಟಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಳೆ ಗೊನೆಗಳನ್ನು ಕೊಯ್ದು ಆಟೋದಲ್ಲಿ ತುಂಬಿಕೊಂಡ ಕಳ್ಳರನ್ನು ನೋಡಿದ ತೋಟದ ಮಾಲೀಕ ದ್ಯಾಮೇಗೌಡ ಅವರು ಕಳ್ಳರನ್ನು ಹಿಡಿಯಲು ಹೋದಾಗ  ಚಾಕು ತೋರಿಸಿ ಪರಾರಿಯಾಗಿದ್ದಾರೆ. ತಕ್ಷಣ ಅವರು ಅಕ್ಕಪಕ್ಕದ ರೈತರು ಹಾಗೂ ಪರಿಚಯಸ್ಥರಿಗೆ ದೂರವಾಣಿ ಕರೆ ಮಾಡಿ ಕಳ್ಳರು ಹೋಗುವ ಮಾರ್ಗಕ್ಕೆ ಬರುವಂತೆ ತಿಳಿಸಿದ್ದಾರೆ. 1 ಕಿ.ಮೀ. ದೂರ ಅಟ್ಟಿಸಿಕೊಂಡು ಹೋಗುವ ವೇಳೆ ಇಬ್ಬರು ಕಳ್ಳರಲ್ಲಿ ಒಬ್ಬ ಚಾಕುವಿನಿಂದ ರತನ್ ಎಂಬ ಯುವಕನಿಗೆ ಇರಿದಿದ್ದಾನೆ. ಇದೇ ವೇಳೆ ಐಮಂಗಲ ಪೊಲೀಸರು ಸ್ಥಳಕ್ಕೆ ಬಂದಿದ್ದು, ಕಳ್ಳರು ಶರಣಾಗಿದ್ದಾರೆ. ಚಾಕುವಿನಿಂದ ಹಲ್ಲೆಗೊಳಗಾದ ರತನ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಚಿತ್ರದುರ್ಗದ ಖಲೀಲ್ ಮತ್ತು ಸಚಿನ್ ರೈತರ ಕೈಗೆ ಸಿಕ್ಕಿ ಬಿದ್ದಿರುವ ಕಳ್ಳರು.

ADVERTISEMENT

‘ನಮ್ಮ ತೋಟದಲ್ಲಿ ಇದು 2ನೇ ಬಾರಿ ನಡೆದಿರುವ ಕಳ್ಳತನ. ಕೆಲವು ದಿನಗಳ ಹಿಂದೆಯೂ ಕಳ್ಳರು 50 ಗೊನೆ ಕಡಿದುಕೊಂಡು ಹೋಗಿದ್ದರು. ಇಂದು ಕೂಡ 50 ಗೊನೆ ಕತ್ತರಿಸಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಏಲಕ್ಕಿ ಬಾಳೆಗೆ ಸಗಟು ದರ 90 ರೂಪಾಯಿ ಇದೆ. ಒಂದು ಗೊನೆ ಕನಿಷ್ಟ 10 ಕೆಜಿ ತೂಕ ಇರುತ್ತದೆ. ಒಮ್ಮೆ ಕಳ್ಳತನ ಮಾಡಿದಲ್ಲಿ ಕಳ್ಳರಿಗೆ ಕನಿಷ್ಟ 45 ಸಾವಿರ ಸಿಗುತ್ತದೆ’ ಎನ್ನುತ್ತಾರೆ ದ್ಯಾಮಣ್ಣ.

ದರ ಹೆಚ್ಚಿದ ಮೇಲೆ ಬಾಳೆಗೊನೆ ಕದಿಯುವ ಮೂರ್ನಾಲ್ಕು ತಂಡಗಳಿವೆ. ಮಳೆ–ಗಾಳಿ, ರೋಗ ಎಲ್ಲವನ್ನು ದಾಟಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ನಮ್ಮ ಊರೊಂದರಲ್ಲಿಯೇ ಐದಾರು ರೈತರ ತೋಟಗಳಲ್ಲಿ ಕಳ್ಳತನವಾಗಿದೆ. ತೋಟದಲ್ಲಿ ಯಾರೂ ಇಲ್ಲ ಎಂಬುದು ಅರಿವಿಗೆ ಬಂದರೆ ಕೇಬಲ್ ಹಾಗೂ ಕೃಷಿ ಉಪಕರಣಗಳನ್ನೂ ಬಿಡುವುದಿಲ್ಲ. ರೈತರು ಉಳಿಯುವುದೇ ಕಷ್ಟವಾಗಿದೆ. ಪೊಲೀಸರು ಇಂತಹ ಕಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದ್ಯಾಮಣ್ಣ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.