ADVERTISEMENT

ಬಸವ ಜಯಂತಿಯಂದು ಬೇರೆಯವರ ಜಯಂತಿ ಆಚರಣೆ ಬೇಡ: ಸಾಣೇಹಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.   

ಹೊಸದುರ್ಗ: ‘ಬಸವ ಜಯಂತಿಯಂದು ಬೇರೆಯವರ ಜಯಂತಿ ಆಚರಣೆ ಮಾಡುವುದು ಬೇಡ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೋರಿದ್ದಾರೆ.

ಬಸವ ಜಯಂತಿ ಮತ್ತು ರೇಣುಕ ಜಯಂತಿಯನ್ನು ಒಂದೇ ದಿನ ಆಚರಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅವರು ಆದೇಶ ಹೊರಡಿಸಿದ್ದಕ್ಕೆ ಪತ್ರಿಕ್ರಿಯಿಸಿದ ಪಂಡಿತಾರಾಧ್ಯ ಶ್ರೀ, ‘ರೇಣುಕ ಜಯಂತಿ ಮಾಡುವ ಉದ್ದೇಶವೇನು? ಬಸವಣ್ಣ ಲಿಂಗಾಯತ ಧರ್ಮದ ಗುರು ಎಂದು ರೇಣುಕ ಪರಂಪರೆಯವರು ಒಪ್ಪುವರೇ? ಬಸವಣ್ಣ ಐತಿಹಾಸಿಕ ವ್ಯಕ್ತಿ. ರೇಣುಕರು? ಬಸವ ಜಯಂತಿಯಂದು ಬಸವಣ್ಣನವರ ವಿಚಾರಗಳು ಜನಮನಕ್ಕೆ ಮುಟ್ಟಬೇಕೇ ಹೊರತು ರೇಣುಕರು ಮತ್ತಿತರರ ವಿಚಾರಗಳಲ್ಲ’ ಎಂದು ಗುರುವಾರ ಪ್ರಕಟಣೆ ಮೂಲಕ ಹೇಳಿದ್ದಾರೆ.

‘ಬಸವಣ್ಣನವರ ತತ್ವ– ಸಿದ್ಧಾಂತಗಳು ಸಮಾಜಮುಖಿಯಷ್ಟೇ ಅಲ್ಲ, ಜೀವಪರವೂ ಹೌದು. ಅಲ್ಲಿ ಸಮಾನತೆ ಇದೆ. ಸಕಲ ಜೀವಾತ್ಮರ ಒಳಿತಿದೆ. ಆತ್ಮಕಲ್ಯಾಣದ ಜೊತೆ ಲೋಕಕಲ್ಯಾಣವೂ ಇದೆ. ಇಂತಹ ಸಾಂಸ್ಕೃತಿಕ ನಾಯಕ, ವಿಶ್ವಗುರು, ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರ ಆಶಯಗಳಿಗೆ ಮೆರುಗು ಬರಬೇಕಾದಲ್ಲಿ ಬಸವ ಜಯಂತಿಯಂದು ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಅವರ ಸಂದೇಶಗಳ ಚಿಂತನ ಮಂಥನ ನಾಡಿನಲ್ಲೆಲ್ಲ (ಏ. 30) ನಡೆಯುವುದು ಸ್ವಾಗತಾರ್ಹ. ಅಂದು ಬೇರೆ ಯಾರದೇ ಜಯಂತಿ ಖಂಡಿತಾ ಬೇಡ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.