ADVERTISEMENT

ಚಿತ್ರದುರ್ಗ | ನಮ್ಮಲ್ಲಿರುವ ಅರಿವನ್ನು ಜಾಗೃತಗೊಳಿಸೋಣ: ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:46 IST
Last Updated 17 ಫೆಬ್ರುವರಿ 2026, 5:46 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ಶಿವರಾತ್ರಿ ಚಿಂತನಾ ಕಾರ್ಯಕ್ರಮ
ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದ ಶಿವರಾತ್ರಿ ಚಿಂತನಾ ಕಾರ್ಯಕ್ರಮ   

ಚಿತ್ರದುರ್ಗ: ‘ಶಿವರಾತ್ರಿ ಎಂದರೆ ಸದಾ ಎಚ್ಚರದಿಂದಿದ್ದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ, ನಮ್ಮಲ್ಲಿರುವ ಅರಿವನ್ನು ಜಾಗೃತ ಮತ್ತು ಆತ್ಮನಿವೇದನೆ ಮಾಡಿಕೊಳ್ಳುವ ರಾತ್ರಿಯಾಗಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಮುರುಘಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ನಡೆದ ಶಿವರಾತ್ರಿ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಹವೆಂಬ ತುಂಬಿದ ಬಂಡಿಯನ್ನು ನಡೆಸುವುದು ಪಂಚೇಂದ್ರಿಯಗಳು. ಅವುಗಳನ್ನು ನಮ್ಮ ಹಿಡಿತದಲ್ಲಿಟ್ಟಕೊಳ್ಳಬೇಕು. ಇದನ್ನೇ ನಮ್ಮ ಶರಣರು ಅವಧಾನ ಭಕ್ತಿ ಎಂದಿದ್ದಾರೆ. ಆಧ್ಯಾತ್ಮ ದೃಷ್ಟಿಯಲ್ಲಿ ಆಸೆ ಪಡುವುದು ತಪ್ಪಲ್ಲ, ಆದರೆ ಸಿಕ್ಕಿರುವುದರಲ್ಲೇ ತೃಪ್ತಿ ಪಡುವಂತೆ ಇರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಮಾತನಾಡುವ ದೇವರು ನಡೆದಾಡುವ ದೇವಾಲಯ ಯಾರು ಅಂದರೆ ಅದುವೇ ಮಾನವ. ಆದ್ದರಿಂದಲೇ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನನ್ನು ಮಹಾದೇವನನ್ನಾಗಿ ಮಾಡಿದವರು ನಮ್ಮ ಶರಣರು’ ಎಂದು ತಿಳಿಸಿದರು.

‘ಪ್ರಸ್ತುತ ದಿನಗಳಲ್ಲಿ ಶಿವತತ್ವದ ಅನಿವಾರ್ಯತೆ ಇದೆ. ಸಮಾಜದಲ್ಲಿ ಬದುಕುವ ಮನುಷ್ಯನಿಗೆ ಶಾಂತಿ ಮತ್ತು ಧ್ಯಾನದ ಅವಶ್ಯಕತೆಯಿದೆ. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಆಚರಣೆಗೂ ಧಾರ್ಮಿಕ ಹಿನ್ನಲೆ ಜೊತೆಗೆ ವೈಚಾರಿಕ ಸ್ಪರ್ಶವಿದೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು.

‘ಉಪವಾಸ, ಜಾಗರಣೆ, ಅಭಿಷೇಕ ಮತ್ತು ಬಿಲ್ವಾರ್ಚನೆ ಇವು ಶಿವನನ್ನು ಪೂಜಿಸುವ ನೆಪದಲ್ಲಿ ಮನುಷ್ಯನ ಅರೋಗ್ಯದ ಗುಟ್ಟನ್ನು ಒಳಗೊಂಡಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವ ಶಿವರಾತ್ರಿ ಸಮಾಜದಲ್ಲಿ ಸಮಾನತೆ ಸಂದೇಶವನ್ನು ಸಾರುವುದಾಗಿದೆ’ ಎಂದರು.

ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ, ತೇಜೋಮಯಾನಂದ ಸ್ವಾಮೀಜಿ, ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.