
ಚಿತ್ರದುರ್ಗ: ‘ಆಧುನಿಕ ಜಗತ್ತಿನಲ್ಲಿ ಭಾರತದ ಆರ್ಥಿಕ ಸ್ವಾತಂತ್ರ್ಯ, ಸಾರ್ವಭೌಮತ್ತ ಮತ್ತು ನಮ್ಮತನ ಉಳಿಸಿಕೊಳ್ಳಲು ಸ್ವದೇಶಿ ಆಂದೋಲನ ನಿರಂತರವಾಗಿ ನಡೆಯಬೇಕು’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಏರ್ಪಡಿಸಿರುವ ಸ್ವದೇಶಿ ಮೇಳವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
‘ಸ್ವದೇಶಿ ಮೇಳ ಎಲ್ಲಿ ಹೋದರೂ ಯಶಸ್ವಿಯಾಗುತ್ತದೆ. ಅದಕ್ಕೆ ಪ್ರತಿಯೊಬ್ಬ ಭಾರತೀಯನಲ್ಲಿ ಸ್ವದೇಶಿ ಭಾವನೆ ಇದೆ. ಅದಕ್ಕೆ ಪೂರಕವಾಗಿರುವ ವಾತಾವರಣ ನಿರ್ಮಾಣ ಮಾಡಬೇಕಿರುವುದು ಸರ್ಕಾರ, ಸಮಾಜದ ಕರ್ತವ್ಯ ನಮ್ಮ ದೇಶವನ್ನು ಸ್ವಾವಲಂಬನೆ ದೇಶವನ್ನು ಮಾಡಿದವರು ರೈತರು. ಒಂದು ಕಾಲದಲ್ಲಿ ಆಹಾರಕ್ಕಾಗಿ ನಾವು ವಿದೇಶದ ಮುಂದೆ ಕೈಯೊಡ್ಡಬೇಕಿತ್ತು. ಆದರೆ ಇಂದು ದೇಶ ಸ್ವಾವಲಂಬನೆ ಸಾಧಿಸಿದೆ’ ಎಂದು ಹೇಳಿದರು.
‘ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ನಡುವೆ ಅಂತಃಕರಣವನ್ನು ನಾವು ಮರೆತಿದ್ದೇವೆ. ನಮ್ಮ ಪ್ರತಿಯೊಂದು ಕ್ರಿಯಾಶೀಲ ಚಟುವಟಿಕೆಗಳು ಅಂತಃಕರಣದಿಂದ ಮಾನವೀಯತೆಯಿಂದ ಕೂಡಿದರೆ ಈ ದೇಶ ಜನರ ಬದುಕಿನ ಬಗ್ಗೆ ಚಿಂತನೆ ಮಾಡಲು ಸಾಧ್ಯ. ಕೇವಲ ವ್ಯಾಪಾರಕ್ಕಾಗಿ ಮಾಡಿದರೆ ಯಾವ ದೇಶವೂ ಉದ್ಧಾರ ಆಗುವುದಿಲ್ಲ. ಭಾರತದಲ್ಲಿ ಮೂಲದಲ್ಲಿ ಜ್ಞಾನ ಇದೆ’ ಎಂದರು.
ಸಿಗಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹಾಗೂ ಬಿ.ಎಂ. ಕುಮಾರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.