ADVERTISEMENT

ಚಿತ್ರದುರ್ಗ | ಕರಡಿ ದಾಳಿ: ಒಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 16:16 IST
Last Updated 25 ಏಪ್ರಿಲ್ 2020, 16:16 IST
ಕರಡಿಗಳನ್ನು ಓಡಿಸಿಕೊಂಡು ಹೋಗುತ್ತಿರುವ ಸಾರ್ವಜನಿಕರು.
ಕರಡಿಗಳನ್ನು ಓಡಿಸಿಕೊಂಡು ಹೋಗುತ್ತಿರುವ ಸಾರ್ವಜನಿಕರು.   

ನಾಯಕನಹಟ್ಟಿ: ಅಜ್ಜನಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ಕಟ್ಟಿಗೆ ತರಲು ಹಳ್ಳಕ್ಕೆ ಹೋಗಿದ್ದ ಅಜ್ಜನಹಳ್ಳಿಯ ಎ.ಕೆ.ತಿಪ್ಪೇಸ್ವಾಮಿ ಮೇಲೆ ಕರಡಿಗಳು ದಾಳಿ ಮಾಡಿವೆ. ಗಾಯಗೊಂಡ ಅವರನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ಕರಡಿಗಳು ಬರುವುದನ್ನು ಸಮೀಪದಲ್ಲೇ ಕುರಿ ಕಾಯುತ್ತಿದ್ದ ಯುವಕರಿಗೆ ಕಂಡಿದೆ. ಗಾಬರಿಗೊಂಡು ಕಿರುಚಾಡಿ ತಮ್ಮ ಕುರಿಗಳನ್ನು ಓಡಿಸಿಕೊಂಡು ಗ್ರಾಮದ ಕಡೆಗೆ ಹೋದರು. ಮೂರ‍್ನಾಲ್ಕು ಜನರೊಂದಿಗೆ ದೊಡ್ಡಹಳ್ಳಕ್ಕೆ ಕಟ್ಟಿಗೆ ತರಳು ಹೋಗಿದ್ದ ತಿಪ್ಪೇಸ್ವಾಮಿ ಕಟ್ಟಿಗೆ ಹೊರೆ ಹೊತ್ತುಕೊಂಡು ಆ ದಾರಿಯಲ್ಲಿ ಬರುತ್ತಿದ್ದರು. ಅವರ ಮೇಲೆ ದೊಡ್ಡಕರಡಿ ದಾಳಿ ನಡೆಸಿದೆ. ಸಮೀಪದಲ್ಲೇ ಇದ್ದ ಜನರ ಗುಂಪು ಜೋರಾಗಿ ಶಬ್ದ ಮಾಡಿದ್ದರಿಂದ ಕರಗಳು ಓಡಿದವು ಎಂದು ಪ್ರತ್ಯಕ್ಷದರ್ಶಿ ಅಜ್ಜನಹಳ್ಳಿ ರಂಗಸ್ವಾಮಿ ವಿವರಿಸಿದರು.

ಓಬಳಾಪುರದ ಗುಡ್ಡದಲ್ಲಿ ಕರಡಿಗಳಿದ್ದು, ಬೇಸಿಗೆಯಲ್ಲಿ ನೀರು, ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶಕ್ಕೆ ಬಂದಿವೆ. ಕರಡಿಗಳು ಜನರನ್ನು ನೋಡಿದಾಕ್ಷಣ ಗಾಬರಿಗೊಂಡು ದಾಳಿ ನಡೆಸುತ್ತವೆ. ಹಾಗಾಗಿ ಇಂದು ವಲಸೆ, ಅಜ್ಜನಹಳ್ಳಿ, ಚನ್ನಗಾನಹಳ್ಳಿ, ಬಂಜಿಗೆರೆ, ಘಟ್ಟಪರ್ತಿ ಗ್ರಾಮದ ಜನರಿಗೆ ರಾತ್ರಿವೇಳೆ ಹೊರಗಡೆ ಬಾರದಂತೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ರೂ ಆತಂಕ ಪಡಬಾರದು. ಕರಡಿಗಳನ್ನು ಸುರಕ್ಷಿತವಾಗಿ ಹಿಡಿಯಲು ಅಗತ್ಯ ಕ್ರಮಕೈಗೊಳ್ಳಲು ಸ್ಥಳದಲ್ಲೇ ಮೊಕಾಂ ಹೂಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್, ಅರಣ್ಯಾಧಿಕಾರಿ ವಸಂತ್‌ಕುಮಾರ್, ಅರಣ್ಯ ರಕ್ಷಕ ಇಮಾಮ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.