ಮೊಳಕಾಲ್ಮುರು ತಾಲ್ಲೂಕಿನ ಕೊಮ್ಮನಪಟ್ಟಿ ಬಳಿ ಸೋಮವಾರ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರುವ ಕರಡಿ
ಮೊಳಕಾಲ್ಮುರು: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ (150 ‘ಎ’) ಕೊಮ್ಮನಪಟ್ಟಿ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕರಡಿಯೊಂದು ಸೋಮವಾರ ಮೃತಪಟ್ಟಿದೆ.
ಅಂದಾಜು 10 ವರ್ಷದ ಗಂಡು ಕರಡಿ ಸಾವಿನ ಮಾಹಿತಿಯನ್ನು ಹೆದ್ದಾರಿ ಗಸ್ತು ಸಿಬ್ಬಂದಿ ಅರಣ್ಯ ಇಲಾಖೆಗೆ ಗಮನಕ್ಕೆ ತಂದ ನಂತರ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ನಂತರ ಬಿ.ಜಿ.ಕೆರೆಯ ಸಸ್ಯಕ್ಷೇತ್ರ ಆವರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪಟ್ಟಣದ ರಾಯದುರ್ಗ ರಸ್ತೆಯಲ್ಲಿರುವ ಎಂ.ಡಿ. ಮಹದೇವಪ್ಪ ಸಸ್ಯಕ್ಷೇತ್ರ ಆವರಣದಲ್ಲಿ ಮೃತದೇಹವನ್ನು ದಹನ ಮಾಡಲಾಯಿತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.
ಈ ಭಾಗದಲ್ಲಿ ಗುಡ್ಡಗಾಡು ಪ್ರದೇಶವಿದ್ದು ಕರಡಿಗಳ ವಾಸ ಸ್ಥಳವಾಗಿದೆ. ಇಲ್ಲಿಂದ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಕರಡಿ ಧಾಮದವರೆಗೂ ಕರಡಿಗಳ ಸಂಚಾರವಿದೆ. ರಾತ್ರಿ ಸಮಯದಲ್ಲಿ ಆಹಾರ, ನೀರು ಹುಡುಕಿಕೊಂಡು ಬರುವ ಕರಡಿಗಳು ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕಿ ಮೃತಪಡುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.