ADVERTISEMENT

ಹೊಸದುರ್ಗ: ಕರಡಿಗಳು ಪ್ರತ್ಯಕ್ಷ

ಆರು ತಿಂಗಳಿನಿಂದ ಓಡಾಟ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 15:51 IST
Last Updated 24 ಜೂನ್ 2023, 15:51 IST
ಹೊಸದುರ್ಗ ಪಟ್ಟಣದಲ್ಲಿ ಕಾಣಿಸಿಕೊಂಡ ಕರಡಿ
ಹೊಸದುರ್ಗ ಪಟ್ಟಣದಲ್ಲಿ ಕಾಣಿಸಿಕೊಂಡ ಕರಡಿ   

ಹೊಸದುರ್ಗ: ಪಟ್ಟಣದ ಗೌಸಿಯಾ ನಗರ ಬಡಾವಣೆಗೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೂರು ಕರಡಿಗಳು ಪ್ರತ್ಯಕ್ಷವಾಗಿವೆ. ಸ್ಥಳೀಯರು ಜೋರಾಗಿ ಕೇಕೆ ಹಾಕಿದ್ದರಿಂದ ಅವು ಭೈರಪ್ಪನ ಬೆಟ್ಟ ಹತ್ತಿವೆ. ಕರಡಿಗಳ ಓಡಾಟದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ 6 ತಿಂಗಳಿಂದ ಪಟ್ಟಣದ ಹುಳಿಯಾರ್ ವೃತ್ತ, ಗೌಸಿಯಾ ನಗರ, ಭೈರಪ್ಪನ ಬೆಟ್ಟ, ಕೋಟೆ ಬಡಾವಣೆ, ಚನ್ನಸಮುದ್ರದ ಬೆಟ್ಟ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿವೆ. 

ಕರಡಿಗಳು ಓಡಾಟದಿಂದ ಜನರು ಭಯಭೀತರಾಗಿದ್ದಾರೆ. ಜಮೀನುಗಳಿಗೆ ಹೋಗುವವರು ಹೆದರುವಂತಗಿದೆ. ವಾಯುವಿಹಾರಕ್ಕೆ, ಶಾಲಾ ಕಾಲೇಜುಗಳಿಗೆ ಹೋಗುವವರೂ ಆತಂಕಕ್ಕೀಡಾಗಿದ್ದಾರೆ. 

ADVERTISEMENT

‘ಕರಡಿಗಳ ಹಾವಳಿಗೆ ಆತಂಕದಲ್ಲಿ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರಡಿಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಬೋನ್ ಇರಿಸಿ ಕರಡಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಇಮ್ರಾನ್

‘ಕೊಳೆತಿರುವ ಹಲಸಿನ ಹಣ್ಣುಗಳನ್ನು ಗುಡ್ಡದ ಮೇಲೆ ಹಾಕಿರುವ ಪರಿಣಾಮ ಕರಡಿಗಳು ಬರುತ್ತಿವೆ. ವಿಷಯ ತಿಳಿದ ಕೂಡಲೇ, ಕರಡಿಗಳನ್ನು ಬೆಟ್ಟದ ದಿಕ್ಕಿನತ್ತ ಓಡಿಸಲಾಗಿದೆ. ಗುಡ್ಡದ ಮೇಲೆ ಬೋನ್ ತೆಗೆದುಕೊಂಡು ಹೋಗಿ ಇರಿಸುವುದು ಕಷ್ಟಸಾಧ್ಯ. ಹಾಗಾಗಿ ಕರಡಿಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಮತ್ತೆ ಕಾಣಿಸಕೊಂಡರೆ, ಮತ್ತು ಬರಿಸುವ ಇಂಜೆಕ್ಷನ್ ನೀಡಿ, ಬೇರೆ ಕಡೆ ಸ್ಥಳಾಂತರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಸುಜಾತ ಕೆ. ತಿಳಿಸಿದ್ದಾರೆ. 

ಹೊಸದುರ್ಗ ಪಟ್ಟಣದಲ್ಲಿ ಸಂಚರಿಸುತ್ತಿರುವ ಕರಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.