ADVERTISEMENT

ಹಿರಿಯೂರು: ಜೇನುಕೃಷಿಯಿಂದ ರೈತರಿಗೆ ಉತ್ತಮ ಆದಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:42 IST
Last Updated 21 ಮೇ 2025, 13:42 IST
ಹಿರಿಯೂರು ತಾಲ್ಲೂಕಿನ ಬಬ್ಬೂರು ಸಮೀಪದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜೇನುಕೃಷಿ ದಿನಾಚರಣೆ ಹಾಗೂ ಕಾರ್ಯಾಗಾರವನ್ನು ಹಿರಿಯ ಜೇನು ಕೃಷಿಕ ಶಾಂತವೀರಯ್ಯ ಉದ್ಘಾಟಿಸಿದರು
ಹಿರಿಯೂರು ತಾಲ್ಲೂಕಿನ ಬಬ್ಬೂರು ಸಮೀಪದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜೇನುಕೃಷಿ ದಿನಾಚರಣೆ ಹಾಗೂ ಕಾರ್ಯಾಗಾರವನ್ನು ಹಿರಿಯ ಜೇನು ಕೃಷಿಕ ಶಾಂತವೀರಯ್ಯ ಉದ್ಘಾಟಿಸಿದರು    

ಹಿರಿಯೂರು: ರೈತರು ಕೃಷಿಯ ಜೊತೆಗೆ ಉಪ ಕಸುಬಾಗಿ ಜೇನು ಸಾಕಣೆ ಮಾಡುವುದರಿಂದ ಕೃಷಿಗೆ ಚೇತನ ನೀಡುವ ಜೊತೆಗೆ ಕುಟುಂಬ ನಿರ್ವಹಣೆಗೆ ಸಾಕೆನಿಸುವಷ್ಟು ಆದಾಯ ಗಳಿಸಬಹುದು ಎಂದು ಮೇಟಿಕುರ್ಕೆ ಗ್ರಾಮದ ಚಂದನ ಮಧುವನ ಸಂಸ್ಥೆಯ ಸ್ಥಾಪಕ ಜೇನು ಕೃಷಿಕ ಶಾಂತವೀರಯ್ಯ ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ, ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ, ಗ್ಲೋಬಲ್ ಗ್ರೀನ್ ಗ್ರೋಥ್, ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞರ ಸಂಸ್ಥೆ ನೇತೃತ್ವದಲ್ಲಿ ತಾಲ್ಲೂಕಿನ ಬಬ್ಬೂರು ಸಮೀಪದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜೇನುಕೃಷಿ ದಿನಾಚರಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಉಪಕಸುಬು ಕೈಗೊಳ್ಳುವುದರಿಂದ ಉತ್ತಮ ಆದಾಯ ಗಳಿಸಬಹುದು. ಜೇನುಕೃಷಿಯಲ್ಲಿ ತೊಡಗಿಸಿಕೊಳ್ಳಲು ವಿಫುಲ ಅವಕಾಶಗಳಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ನಿರುದ್ಯೋಗಿ ಯುವಕರಿಗೆ ಜೇನುಕೃಷಿ ಆಶಾದಾಯಕ ಉದ್ಯೋಗವಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಜೊತೆಗೆ ಜೇನು ಸಾಕಾಣಿಕೆ ಮಾಡುವುದರಿಂದ ಕೃಷಿಯಲ್ಲಿನ ಇಳುವರಿಯೂ ಹೆಚ್ಚುತ್ತದೆ. ರಾಜ್ಯದ ಕೃಷಿ ಆಧಾರಿತ ಕಾಲೇಜುಗಳಲ್ಲಿ ಜೇನು ಕೃಷಿಯ ತರಬೇತಿ ಹಾಗೂ ಕಾರ್ಯಾಗಾರ ಆಯೋಜಿಸುವುದರಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಜೇನುಕೃಷಿ ಮಾನವ ಸಂಕುಲಕ್ಕೆ ಪ್ರಕೃತಿದತ್ತ ಕೊಡುಗೆ. ನಮ್ಮ ದೈನಂದಿನ ಜೀವನದಲ್ಲಿ ಜೇನಿನ ಬಳಕೆ ಮತ್ತು ಅದರ ಮಹತ್ವ ಹೆಚ್ಚಾಗುತ್ತಿದ್ದು, ಜೇನು ಕೃಷಿಯ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕಿದೆ. ಪ್ರಸ್ತುತ ನಗರ ಪ್ರದೇಶಗಳಲ್ಲಿ ಜೇನು ಬೆಳೆವಣಿಗೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಮಣ್ಣು ಆರೋಗ್ಯಕರವಾಗಿದ್ದರೆ ಉತ್ತಮ ಬೆಳೆ ಬೆಳೆಯಬಹುದು. ಇದರಿಂದ ಪೌಷ್ಟಿಕ ಅಹಾರ ಸಿಗುತ್ತದೆ. ಉತ್ತಮ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ನಾಂದಿ’ ಎಂದು ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ ತಿಳಿಸಿದರು.

‘ಜೇನು ಕೃಷಿಯಲ್ಲಿ ಬೆರಳಣಿಕೆಯಷ್ಟು ಜನರು ತೊಡಗಿಸಿಕೊಂಡಿದ್ದಾರೆ. ರೈತರು ಜೇನುಕೃಷಿ ಮಾಡಲು ಮುಂದೆ ಬರಬೇಕು. ಭೂಮಿಯ ಮೇಲೆ ಜೇನಿನ ಸಂತತಿ ಇಲ್ಲದೇ ಹೋದರೆ ಇಡೀ ಮನುಕುಲ ನಾಶವಾಗುತ್ತದೆ. ನಿಸರ್ಗದ ಮಡಿಲಿನಲ್ಲಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ರೈತರೂ ಒಳಗೊಂಡು ಎಲ್ಲ ವರ್ಗದ ಜನರ ಬದುಕು ಹಸನಾಗುತ್ತದೆ’ ಎಂದು ಕೃಷಿ ಅರಣ್ಯ ರೈತರ ಹಾಗೂ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಎಸ್.ರಮೇಶ್ ತಿಳಿಸಿದರು.

ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಸುರೇಶ್ ಏಕಬೋಟೆ, ಜಿಜಿಜಿಸಿ ಸಿಎಂಡಿ ಪ್ರೊ.ಚಂದ್ರಶೇಖರ್ ಬಿರಾದಾರ್, ಕೃಷಿ ಇಲಾಖೆ ಚಿತ್ರದುರ್ಗ ಜಿಲ್ಲೆಯ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೃಷಿವನ ಮಾಸಪತ್ರಿಕೆ ಬಿಡುಗಡೆ ಮಾಡಲಾಯಿತು.

ರೈನ್‌ಫಾರೆಸ್ಟ್ ಅಲೈನ್ಸ್ ಸಂಸ್ಥೆಯ ಸುಬ್ಬರೆಡ್ಡಿ, ಬೀ ಹೂ ಉದ್ಯಮಿ ಅಪೂರ್ವ, ಹಿರಿಯ ವಿಜ್ಞಾನಿ ಪವಿತ್ರ ನಾಯ್ಕ, ಓಂಕಾರಪ್ಪ, ರಜನೀಕಾಂತ್, ಕುಮಾರ್, ಕೆಂಚರೆಡ್ಡಿ. ಪ್ರಮೋದ್, ಬಸವರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.