ADVERTISEMENT

ಹಿರಿಯೂರು| ಭದ್ರಾ ಮೇಲ್ದಂಡೆ ಯೋಜನೆ; ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 6:11 IST
Last Updated 10 ನವೆಂಬರ್ 2025, 6:11 IST
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್ ಉಪ ವಿದ್ಯುತ್ ಕೇಂದ್ರವನ್ನು ಉದ್ಘಾಟಿಸಿದರು
ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ಡಿ. ಸುಧಾಕರ್ ಉಪ ವಿದ್ಯುತ್ ಕೇಂದ್ರವನ್ನು ಉದ್ಘಾಟಿಸಿದರು   

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಒಳಗೊಂಡಂತೆ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ತಿಳಿಸಿದರು.

ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪ ವಿದ್ಯುತ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

‘ಹತ್ತು ವರ್ಷದ ಹಿಂದೆ ಇದ್ದಷ್ಟು ವಿದ್ಯುತ್ ಅಭಾವ ಈಗಿಲ್ಲ. ಕಾರಣ 2013 ರಿಂದ 2018ರ ಅವಧಿಯಲ್ಲಿ ಸೌರವಿದ್ಯುತ್ ಉತ್ಪಾದನೆಗೆ ಕಾಂಗ್ರೆಸ್ ಸರ್ಕಾರ ಒತ್ತುಕೊಟ್ಟ ಪರಿಣಾಮ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ. 2017ರಲ್ಲಿಯೇ ಈ ಉಪ ಕೇಂದ್ರವನ್ನು ಮಂಜೂರು ಮಾಡಿಸಿದ್ದೆ. ಮತ್ತೆ ನನ್ನದೇ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಕೆಪಿಟಿಸಿಎಲ್ ಎಂಜಿನಿಯರ್ ಮಂಜುನಾಥಸ್ವಾಮಿ, ಸಚಿನ್ ಚಕ್ರವರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಹನುಮಂತಪ್ಪ, ಉಪಾಧ್ಯಕ್ಷೆ ಪವಿತ್ರ ಕೃಷ್ಣಪ್ಪ, ಮುಖಂಡರಾದ ಎಚ್.ಜೆ. ಶ್ರೀನಿವಾಸ್, ವಕೀಲ ಮಹೇಶ್, ರಂಗಸ್ವಾಮಿ ಹಾಜರಿದ್ದರು.

‘ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ’

ಕಾಂಗ್ರೆಸ್ ಪಕ್ಷ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಚಿವ ಡಿ. ಸುಧಾಕರ್ ಹೇಳಿದರು.

ತಾಲ್ಲೂಕಿನ ರಂಗನಾಥಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಸ್ಕಾಂ ಇಲಾಖೆ ಕಾರ್ಯ ಮತ್ತು ಪಾಲನಾ ಶಾಖಾ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕ ಸೇವಾ ವಲಯಗಳು ಮತ್ತಷ್ಟು ಸಮರ್ಥವಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಹಳ್ಳಿಗಳಲ್ಲಿರುವ ಮೂಲ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪೀರ್ ಸಾಬ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.