ADVERTISEMENT

ಚಿತ್ರದುರ್ಗ | ಭದ್ರಾ ಅನುದಾನ; ರಾಜ್ಯದ ಮನವಿಗೆ ಸ್ಪಂದಿಸದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:15 IST
Last Updated 18 ಜನವರಿ 2026, 6:15 IST
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮುಖಂಡರು ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವುದು
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಮುಖಂಡರು ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವುದು   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅನುಷ್ಠಾನಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತಿದೆ. ಆದರೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಒತ್ತಾಯಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಆರೋಪಿಸಿದರು.

‘ಭದ್ರ ಮೇಲ್ದಂಡೆ ಹೋರಾಟದಲ್ಲಿ ನಾನು ಬಂಧನಕ್ಕೀಡಾಗಿದ್ದೆ, ಹಲವು ವರ್ಷ ಕೋರ್ಟ್‌ಗೆ ಅಲೆದಾಡಿದ್ದೇನೆ. ಜೀವಿತಾವಧಿಯಲ್ಲಿ ಭದ್ರಾ ಕಾಲುವೆಗಳಲ್ಲಿ ನೀರು ನೋಡಬೇಕು ಎಂಬ ಇಚ್ಛೆ ಇತ್ತು. ಅದು ಈಗ ಸಾಕಾರಗೊಳ್ಳುವತ್ತ ಸಾಗಿದೆ. ಸಮಿತಿ ಸದಸ್ಯರೊಂದಿಗೆ ಜ. 17ರಂದು ಕಾಮಗಾರಿಯನ್ನು ಪರಿವೀಕ್ಷಣೆ ನಡೆಸಿದ್ದೇನೆ. ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕಾಮಗಾರಿಯನ್ನು ಚೆನ್ನಾಗಿಯೇ ಅನುಷ್ಠಾನ ಮಾಡುತ್ತಿದೆ. ಫೆಬ್ರುವರಿ ಅಂತ್ಯಕ್ಕೆ ಜಿಲ್ಲೆಗೆ ನೀರು ಬರಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಣಕಾಸು ಹಾಗೂ ವಿಸ್ತೀರ್ಣದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ದೇಶದಲ್ಲೇ ಅತ್ಯಂತ ಬೃಹತ್‌ ಯೋಜನೆಯಾಗಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ಯೋಜನೆಗೆ ₹ 5,300 ಕೋಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರೂ ಹಣ ನೀಡಲು ಸತಾಯಿಸುತ್ತಿದ್ದಾರೆ. ಬಜೆಟ್‌ನಲ್ಲಿ ಸೇರ್ಪಡೆಯಾಗಿದ್ದರೂ ಹಣ ಬಾರದಿರುವುದು ಯೋಜನೆ ಅನುಷ್ಠಾನಕ್ಕೆ ತೊಡಕಾಗಿದೆ. ರಾಜಕೀಯ ಕಾರಣಕ್ಕೆ ಭದ್ರಾ ಕಾಮಗಾರಿ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಿಲ್ಲ’ ಎಂದರು.

ADVERTISEMENT

‘ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವವರೇ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ. ಆದರೂ ನಮ್ಮ ಮಹತ್ವಾಕಾಂಕ್ಷಿ ಯೋಜನೆಗೆ ಹಣ ಬಂದಿಲ್ಲ. ರಾಜ್ಯ ಸರ್ಕಾರ ನಿರಂತರವಾಗಿ ಪತ್ರ ವ್ಯವಹಾರ ನಡೆಸುತ್ತಿದೆ. ಕೇಂದ್ರ ಸರ್ಕಾರ ಬೇರೆ ಬೇರೆ ಮಾಹಿತಿ ಕೇಳುತ್ತಾ ಕಾಲಹರಣ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುವುದಕ್ಕೆ, ಪತ್ರ ವ್ಯವಹಾರ ಮಾಡುವುದಕ್ಕಾಗಿಯೇ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಲಾಗಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಲೋಪ ಇಲ್ಲ’ ಎಂದು ಹೇಳಿದರು.

‘2026–27ರ ಬಜೆಟ್‌ನಲ್ಲಾದರೂ ಕೇಂದ್ರ ಸರ್ಕಾರ ಭದ್ರಾ ಯೋಜನೆಯನ್ನು ಸೇರ್ಪಡೆ ಮಾಡಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ನದಿ ಪಾತ್ರದಿಂದ ಇನ್ನೊಂದು ನದಿ ಪಾತ್ರಕ್ಕೆ ನೀರು ತಿರುಗಿಸುವ ಯೋಜನೆ ಸಂಬಂಧ ಸಾಕಷ್ಟು ಅನುಮಾನಗಳಿದ್ದವು. ಆದರೆ ತುಂಗಾ ನದಿ ನೀರನ್ನು ಭದ್ರಾ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಹರಿಸುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಈ ಕುರಿತು ನಾನು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೂ ಮಾಹಿತಿ ನೀಡುತ್ತೇನೆ’ ಎಂದು ತಿಳಿಸಿದರು.

‘ಗುತ್ತಿಗೆದಾರರು ಕೂಡ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ನೂರಾರು ಕೋಟಿ ಬಿಲ್‌ ನೀಡಬೇಕಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಆಗಸ್ಟ್‌ 15ರ ವೇಳೆಗೆ ಚಿತ್ರದುರ್ಗ ಶಾಖಾ ನಾಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರದ ಅನುದಾನ ಪಡೆಯಲು ರಾಜ್ಯ ಸರ್ಕಾರ ಮತ್ತಷ್ಟು ಒತ್ತಡ ಹಾಕಬೇಕು. ಜಿಲ್ಲೆಯ ಸಾರ್ವಜನಿಕರು ಕೂಡ ಹೋರಾಟ ಮುಂದುವರಿಸಬೇಕು. ಚಿತ್ರದುರ್ಗಕ್ಕೆ ನೇರ ರೈಲು ಬರಬೇಕು ಎಂಬದು ನನ್ನ ಮತ್ತೊಂದು ಆಸೆಯಾಗಿತ್ತು, ಅದೂ ಸಾಕಾರಗೊಳ್ಳುವತ್ತ ಸಾಗಿದೆ’ ಎಂದು ಹೇಳಿದರು.

ರಾಜ್ಯ ಸರ್ಕಾರದ ಮಾಜಿ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್ ಮಾತನಾಡಿ, ‘ಗುರುತ್ವಾಕರ್ಷಣ ಶಕ್ತಿಯಿಂದ ನಾಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಗುರುತ್ವಾಕರ್ಷಣೆ ಇಲ್ಲದ ಸ್ಥಳಗಳಲ್ಲಿ ನೀರನ್ನು ಪಂಪ್‌ ಮಾಡಿ ಕೆರೆಗಳಿಗೆ ಹರಿಸಲಾಗುತ್ತಿದೆ. ಅಜ್ಜಂಪುರ, ತರೀಕೆರೆ, ಕಡೂರು ಭಾಗದ ನಾಲೆಗಳಲ್ಲಿ ನೀರು ಹರಿಯುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಆದಷ್ಟು ಬೇಗ ಚಿತ್ರದುರ್ಗಕ್ಕೆ ನೀರು ಹರಿದುಬರುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಶಿವು ಯಾದವ್‌, ಸೋಮಗುದ್ದು ರಂಗಸ್ವಾಮಿ, ಬೇಡರಡ್ಡಿಹಳ್ಳಿ ಬಸವರೆಡ್ಡಿ, ಕೆ.ಸಿ.ಹೊರಕೇರಪ್ಪ, ಸಿ.ಟಿ.ಕೃಷ್ಣಮೂರ್ತಿ, ಉಜ್ಜೀನಪ್ಪ, ಶೇಷಣ್ಣ ಕುಮಾರ್‌, ಚಳ್ಳಕೆರೆ ಬಸವರಾಜ್‌, ನರೇನಹಳ್ಳಿ ಅರುಣ್‌ಕುಮಾರ್‌, ರಾಘವೇಂದ್ರ ನಾಯಕ್‌, ಕೂನಿಕೆರೆ ರಾಮಣ್ಣ, ಡಿ.ಶಫಿಉಲ್ಲಾ, ತಿಪ್ಪೀರಯ್ಯ, ವದ್ದಿಕೆರೆ ಕಾಂತರಾಜ್‌ ಇದ್ದರು.

ಪಿಐಎಲ್‌ ಸಲ್ಲಿಸುವ ಚಿಂತನೆ; ರವಿವರ್ಮಕುಮಾರ್‌ ‘ಸರ್ಕಾರದ ನೀತಿ ನಿಯಮಗಳ ವಿಷಯದಲ್ಲಿ ಕೋರ್ಟ್‌ ಮಧ್ಯಪ್ರವೇಶಿಸುವುದಿಲ್ಲ. ಭದ್ರಾ ಕಾಮಗಾರಿ ಅನುದಾನವನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ ಕೋರ್ಟ್‌ ಹಣ ಬಿಡುಗಡೆ ಸೂಚನೆ ನೀಡಲು ಸಾಧ್ಯವಿಲ್ಲ. ಕಾಮಗಾರಿ ಅನುಷ್ಠಾನ ವಿಷಯದಲ್ಲಿ ಕಾನೂನಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಬಹುದು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಬಹುದೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ರವಿವರ್ಮಕುಮಾರ್‌ ಹೇಳಿದರು. ‘ಕಾಮಗಾರಿ ಅನುಷ್ಠಾನ ಸಂಬಂಧ ರೈತರು ತೊಂದರೆ ನೀಡಬಾರದು. ಹೋರಾಟಗಾರರು ಸಂಘಟನೆಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಪರಿಹಾರ ತೆಗೆದುಕೊಂಡ ನಂತರವೂ ಕೆಲ ರೈತರು ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಇಂತಹ ತೊಂದರೆಗಳನ್ನು ರೈತರ ಹಂತದಲ್ಲೇ ಸರಿಪಡಿಸಬೇಕು’ ಎಂದರು.

ಐಮಂಗಲ; 91 ಕೆರೆಗಳಿಗೆ ನೀರು ‘ಯೋಜನಾ ವ್ಯಾಪ್ತಿಗೆ ಐಮಂಗಲ ಹೋಬಳಿ ವ್ಯಾಪ್ತಿಯ ಕೆರೆಗಳನ್ನು ಬಿಡಲಾಗಿದೆ ಎಂಬ ಆರೋಪಗಳಿವೆ. ಆದರೆ ನಾನು ಅಧಿಕಾರಿಗಳ ಬಳಿ ಈ ವಿಚಾರ ಚರ್ಚೆ ಮಾಡಿದ್ದೇನೆ. ಆ ಭಾಗದ 91 ಕೆರೆಗಳನ್ನು ಯೋಜನಾ ವ್ಯಾಪ್ತಿಯಲ್ಲಿವೆ’ ಎಂದು ರವಿವರ್ಮಕುಮಾರ್‌ ಸ್ಪಷ್ಟಪಡಿಸಿದರು. ‘ಯಾವುದೇ ಕೆರೆ ಬಿಟ್ಟು ಹೋಗಿದ್ದರೂ ಅದನ್ನು ಮತ್ತೆ ಸೇರ್ಪಡೆ ಮಾಡಲು ಅವಕಾಶಗಳಿವೆ. ರೈತರು ಈ ಬಗ್ಗೆ ಯಾವುದೇ ಅನುಮಾನ ಗೊಂದಲ ಮಾಡಿಕೊಳ್ಳಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.