
ಮೊಳಕಾಲ್ಮುರು: ಅಪ್ಪರ್ ಭದ್ರಾ ಯೋಜನೆಯಡಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ 55 ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದು, ಸಕರಾತ್ಮಕವಾಗಿ ಸಂದಿಸಿದ್ದಾರೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ನೆರೆಯ ಕೂಡ್ಲೀಗಿಯಲ್ಲಿ ಭಾನುವಾರ ನಡೆದ 74 ಕೆರೆಗಳಿಗೆ ನೀರುಣಿಸುವ ಕಾರ್ಯದ ಲೋಕಾರ್ಪಣೆ ವೇಳೆ ಮನವಿ ಮಾಡಲಾಗಿದೆ. ಕೂಡ್ಲೀಗಿಯಲ್ಲಿ 2021ರಲ್ಲಿ ಆರಂಭವಾದ ಯೋಜನೆ 4 ವರ್ಷದಲ್ಲಿ ಪೂರ್ಣವಾಗಿದೆ. ಆದರೆ 2002ರಲ್ಲಿ ಆರಂಭವಾದ ಅಪ್ಪರ್ ಭದ್ರಾ ಯೋಜನೆ 23 ವರ್ಷವಾದರೂ ಪೂರ್ಣವಾಗಿಲ್ಲ. ಭದ್ರಾ ಯೋಜನೆ ಹೋರಾಟಕ್ಕೆ ಮೊಳಕಾಲ್ಮುರಿನ ರಾಂಪುರದಲ್ಲಿ ಚಾಲನೆ ನೀಡಲಾಗಿತ್ತು, ತಾಲ್ಲೂಕು ಯೋಜನೆಯಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
₹ 3,000 ಕೋಟಿ ಅಂದಾಜು ವೆಚ್ಚದಲ್ಲಿ ಆರಂಭವಾದ ಭದ್ರಾ ಯೋಜನೆ ವಿಳಂಬವಾಗಿದ್ದು, ರೈತರ ತಾಳ್ಮೆ ಮುಗಿದಿದೆ, ಆದ್ದರಿಂದ ಯೋಜನೆ ಪೂರ್ಣಕ್ಕೆ ಒತ್ತು ನೀಡಿ ಶೀಘ್ರವೇ ಕೆರೆಗಳಿಗೆ ನೀರು ಹರಿಸುವ ಮೂಲಕ ನೆರವಿಗೆ ಬರಬೇಕು ಎಂದು ಮನವಿ ಮಾಡಲಾಯಿತು. ಡಿ.ಕೆ. ಶಿವಕುಮಾರ್ ಅವರು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮುಖ್ಯಮಂತ್ರಿಗಳು ಒತ್ತು ನೀಡುವ ಭರವಸೆ ನೀಡಿದ್ದಾರೆ ಎಂದರು.
2021ರಲ್ಲಿ ಕೂಡ್ಲೀಗಿಯಲ್ಲಿ ನಾನು ಶಾಸಕನಾಗಿದ್ದಾಗ ನಬಾರ್ಡ್ ನೆರವಿನಲ್ಲಿ ₹ 800 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೆ. ಅಲ್ಲಿ ಪಕ್ಷಾತೀತವಾಗಿ ಬೆಂಬಲ ನೀಡಿದ್ದು, ಭದ್ರಾ ಯೋಜನೆಗೂ ಪಕ್ಷಾತೀತ ಬೆಂಬಲದ ಅಗತ್ಯವಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.