ADVERTISEMENT

ನಾಯಕನಹಟ್ಟಿ | ಬಸವ ಜಯಂತಿ ವೇಳೆಗೆ ಕ್ಷೇತ್ರದ ಕೆರೆಗಳಿಗೆ ನೀರು: ಶಾಸಕ ಗೋಪಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:50 IST
Last Updated 17 ಅಕ್ಟೋಬರ್ 2025, 6:50 IST
ನಾಯಕನಹಟ್ಟಿ ಪಟ್ಟಣದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಗುರುವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ನಾಯಕನಹಟ್ಟಿ ಪಟ್ಟಣದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಗುರುವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.   

ನಾಯಕನಹಟ್ಟಿ: ಮುಂದಿನ ವರ್ಷ ಬಸವ ಜಯಂತಿ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಚಳ್ಳಕೆರೆ ಮತ್ತು ಮೊಳಕಾಲ್ಮುರು ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಗುರುವಾರ ₹ 1.80 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಮತ್ತು ₹ 88 ಲಕ್ಷ ವೆಚ್ಚದ ವಾಹನಗಳಿಗೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

‘ಪ್ರಸ್ತುತ ಚಿತ್ರದುರ್ಗ ತಾಲ್ಲೂಕಿನ ಗೋನೂರು ಮತ್ತು ಬೆಳಗಟ್ಟಗಳ ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈಗಾಗಲೇ ನಾಯಕನಹಟ್ಟಿ ಹೋಬಳಿಯ ಹಲವು ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇನ್ನೂ ಹಲವು ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಗುತ್ತಿಗೆದಾರರು ಕೆಲಸಬಿಟ್ಟು ಹೋಗಿದ್ದಾರೆ. ಕಾಮಗಾರಿ ಮುಂದುವರಿಸಲು ವಿಶ್ವೇಶ್ವರಯ್ಯ ಜಲ ನಿಮಗದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಡಿ. 31ರಂದು ಮೊಳಕಾಲ್ಮುರು, ಚಳ್ಳಕೆರೆ, ಪಾವಗಡ ತಾಲ್ಲೂಕುಗಳ ಎಲ್ಲ ಕೆರೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಸಲು ಜಲ ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಹಾಗೇ ಮುಂದಿನ ವರ್ಷದ ಬಸವ ಜಯಂತಿಯ ವೇಳೆಗೆ ಎಲ್ಲ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಕೆರೆಗಳಿಗೆ ನೀರು ಹರಿಸಲಾಗುವುದು’ ಎಂದರು.

‘ಹಾಗೇ ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯ ಗುಡಿಹಳ್ಳಿ ಸಮೀಪ ಹಾದುಹೋಗುವ ವೇದಾವತಿ ನದಿಗೆ ಅಡ್ಡಲಾಗಿ ಗುರುಹಳ್ಳಿ ಬ್ರಿಡ್ಜ್ ಮತ್ತು ಬ್ಯಾರೇಜ್ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ ಎಲ್ಲ ತಾಂತ್ರಿಕ ಒಪ್ಪಿಗೆ ದೊರೆತು ₹ 35 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಈ ಕಾಮಗಾರಿ ಆರಂಭವಾಗಲಿದೆ. ಇದರಿಂದ ಆಂಧ್ರಪ್ರದೇಶಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ತಡೆದು ನಿಲ್ಲಿಸುವ ಕಾರ್ಯ ಯಶಸ್ವಿಯಾಗುತ್ತದೆ’ ಎಂದು ತಿಳಿಸಿದರು.

ಇದೇವೇಳೆ ₹ 90 ಲಕ್ಷ ವೆಚ್ಚದಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯ ಕೌನ್ಸಿಲ್ ಸಭಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ಮತ್ತು ಪಟ್ಟಣ ಪಂಚಾಯಿತಿಯು ₹ 88 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ಜೆಸಿಬಿ ಯಂತ್ರ, ಕಸ ವಿಲೇವಾರಿ ವಾಹನಗಳಿಗೆ ಚಾಲನೆ ನೀಡಿದರು. ₹ 50 ಲಕ್ಷ ಮುಖ್ಯಮಂತ್ರಿ ವಿಶೇಷ ಅನುದಾನ ಮತ್ತು ಪಟ್ಟಣ ಪಂಚಾಯಿತಿ ನಿಧಿಯ ₹ 45 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಪಾದಗಟ್ಟೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.

ಬ್ಲಾಕ್‌ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ. ನಾಗೇಶ್‌ರೆಡ್ಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಪಿ.ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್‌ ಅನ್ವರ್, ಮುಖ್ಯಾಧಿಕಾರಿ ಒ.ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.