ADVERTISEMENT

ಚಿತ್ರದುರ್ಗ: ಭರಮಸಾಗರ ಏತ ನೀರಾವರಿ ಯೋಜನೆಗೆ ಬಂದಿಳಿದ ಪೈಪ್‌ಗಳು

43 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ₹ 560 ಕೋಟಿ ಅನುದಾನ ಮುಂಜೂರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 19:30 IST
Last Updated 20 ಮಾರ್ಚ್ 2020, 19:30 IST
ಭರಮಸಾಗರ ಏತನೀರಾವರಿ ಯೋಜನೆಗೆ ಬಂದಿಳಿದ ಎಂ.ಎಸ್ ಸ್ಟೀಲ್ ಪೈಪ್‌ಗಳು
ಭರಮಸಾಗರ ಏತನೀರಾವರಿ ಯೋಜನೆಗೆ ಬಂದಿಳಿದ ಎಂ.ಎಸ್ ಸ್ಟೀಲ್ ಪೈಪ್‌ಗಳು   

ಭರಮಸಾಗರ: ಭರಮಸಾಗರ ಏತನೀರಾವರಿ ಯೋಜನೆಗೆ ₹ 560 ಕೋಟಿ ಅನುದಾನ ಮುಂಜೂರಾಗಿದ್ದು, 43 ಕೆರೆಗಳಿಗೆ ತುಂಗಭದ್ರಾ ನದಿ ನೀರನ್ನು ತುಂಬಿಸುವ ಉದ್ದೇಶ ಈ ಯೋಜನೆಯದ್ದು. ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಈ ಭಾಗದ ಕೆರೆಗಳಿಗೆಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸರ್ಕಾರದ ಕಾಳಜಿಯಿಂದ ಇದೀಗ ನೀರು ಹರಿಸುವ ಕಾಲ ಒದಗಿ ಬಂದಿದೆ.

ಶಂಕರ್ ನಾರಾಯಣ್ ಕನ್ಸ್‌ಟ್ರಕ್ಷನ್ಸ್‌ ಯೋಜನೆಯ ಗುತ್ತಿಗೆ ಪಡೆದಿದ್ದು, ಕಸವನಹಳ್ಳಿ ಗ್ರಾಮದ 18 ಎಕರೆ ಕೃಷಿ ಭೂಮಿಯನ್ನು ಎರಡು ವರ್ಷಗಳ ಅವಧಿಗೆ ಏತ ನೀರಾವರಿ ಯೋಜನೆಯ ಕೆಲಸಕ್ಕಾಗಿ ಗುತ್ತಿಗೆ ಪಡೆದಿದ್ದಾರೆ. ಯೋಜನೆಗೆ ಬೇಕಾದ ಬೃಹತ್ ಪೈಪ್‌ಗಳು ಈಗಾಗಲೇ ಬಂದಿಳಿಯುತ್ತಿವೆ. ಈ ಜಾಗದ ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದೆ.

ಸುಮಾರು ಒಂದು ಸಾವಿರ ಎಕರೆ ಇರುವ ಭರಮಸಾಗರ ದೊಡ್ಡಕೆರೆಗೆ ಪೈಪ್‌ಲೈನ್ ಮುಗಿದ 23 ದಿನಕ್ಕೆ 295.22 ಎಂಸಿಎಫ್‌ಟಿ ನೀರು ಬಂದು ಸೇರುತ್ತದೆ. 2020ರ ಆಗಸ್ಟ್ 15ರ ವೇಳೆಗೆ ನೀರು ಬಂದು ಸೇರುವ ನಿರೀಕ್ಷೆ ಇದೆ.

ADVERTISEMENT

ಇಲ್ಲಿಂದ ಜಾಕ್‌ವೆಲ್ ಮೂಲಕ ಹೋಬಳಿಯ ಉಳಿದ ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಕೊರತೆ ನೀಗಲಿದೆ. ಎಲ್ಲ ಕೆರೆಗಳೂ ಸೇರಿ ಒಟ್ಟು 1,339.92 ಎಂಸಿಎಫ್‌ಟಿ ನೀರು ಸಂಗ್ರಹವಾಗುತ್ತದೆ.

‘ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಈಗಾಗಲೇ ಪೈಪ್ ಅಳವಡಿಸುವ ಕಾಮಗಾರಿಯ ಅಂತಿಮ ನಕ್ಷೆ ಪ್ರಕಾರ ಹರಿಹರದಿಂದ ಕಾಮಗಾರಿ ಆರಂಭಿಸಿದ್ದಾರೆ. ಕಾಮಗಾರಿಗೆ ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗುತ್ತಿದೆ. ಅವರಿಗೆ ವಸತಿ, ಕ್ಯಾಂಟಿನ್, ಶೌಚಾಲಯ, ನೀರು, ಹಾಗೂ ವೈದ್ಯಕೀಯ ಸೌಲಭ್ಯವನ್ನು ಪ್ಲಾಂಟ್‌ನಲ್ಲಿಯೇ ವ್ಯವಸ್ಥೆ ಮಾಡಲಾಗುವುದು’ ಎಂದು ಸೈಟ್ ಎಂಜಿನಿಯರ್ ನಾರಾಯಣ್ ಹೇಳಿದರು.

ಕಾಮಗಾರಿಯನ್ನು ಮುಕ್ತಾಯಗೊಳಿಸಲು ರಾಜ್ಯ ಸರ್ಕಾರ 24 ತಿಂಗಳ ಕಾಲಾವಧಿ ನೀಡಿದೆ. ಆದರೆ ಇನ್ನೂ ಮುಂಚಿತವಾಗಿಯೇ ಈ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆ ದಾರ ಶಂಕರ್ ನಾರಾಯಣ್‌ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಕಾಮಗಾರಿ ಎಲ್ಲ ಹಂತವನ್ನೂ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ವೀಕ್ಷಿಸಿದ್ದಾರೆ. ಕಾಮಗಾರಿಯು ವೇಗ ಪಡೆದಿದ್ದು, ಕೆರೆಗಳಿಗೆ ನೀರು ಹರಿದು ಬರುವ ದಿನಗಳನ್ನು ಹೋಬಳಿಯ ರೈತರು, ಜನಪ್ರತಿನಿಧಿಗಳು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.