
ಚಿತ್ರದುರ್ಗ: ‘ಬಿಹಾರ ಜನರು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ರಾಜಕಾರಣವನ್ನು ಗೆಲ್ಲಿಸಿದ್ದಾರೆ. ಮತ್ತೊಮ್ಮೆ ಅಲ್ಲಿ ಎನ್‌ಡಿಎ ಅಧಿಕಾರ ಹಿಡಿಯುತ್ತಿರುವುದು ಮುಂದಿನ ಎಲ್ಲಾ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್ ನಾಯಕರ ಎಲ್ಲಾ ಷಡ್ಯಂತ್ರಗಳು ಬಿಹಾರದಲ್ಲಿ ಸೋತು ಹೋಗಿವೆ. ಜನರು ಹಗರಣ ರಹಿತ ಸರ್ಕಾರಕ್ಕೆ ಮತ್ತೆ ಮಣೆ ಹಾಕಿದ್ದಾರೆ. ಪ್ರಧಾನಿ ಮೇಲೆ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಎಷ್ಟೇ ಆರೋಪ ಮಾಡಿದರೂ ಜನರ ನಿರ್ಣಯವನ್ನು ತಪ್ಪಿಸಲು ಸಾಧ್ಯವಾಗಿಲ್ಲ’ ಎಂದರು.
‘ಸುಳ್ಳು ಆಪಾದನೆ ಮಾಡುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಬಿಹಾರ ಜನರು ತಕ್ಕ ಉತ್ತರ ಕೊಟ್ಟಿದ್ಧಾರೆ. ಶೀಘ್ರ ಇಡೀ ದೇಶ ಕಾಂಗ್ರೆಸ್ ಮುಕ್ತವಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷವಾದರೂ ಕಾಂಗ್ರೆಸ್‌ನಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಇದನ್ನು ಅರಿತಿರುವ ಜನರು ಅಭಿವೃದ್ಧಿ ಪರವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮತ ಹಾಕುತ್ತಿದ್ದಾರೆ’ ಎಂದರು.
ವಿಜಯೋತ್ಸವ: ಬಿಹಾರದಲ್ಲಿ ಎನ್‌ಡಿಎ ಗೆಲುವು ಸಂಭ್ರಮಿಸಿ ಬಿಜೆಪಿ ಮುಖಂಡರು ನಗರದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು. ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮುಖಂಡರಾದ ಬಿ.ಸಿ.ಹನುಮಂತೇಗೌಡ, ಅನಿತ್ ಕುಮಾರ್, ಸೌಭಾಗ್ಯ ಬಸವರಾಜನ್, ನಾಗರಾಜ್, ಸಂಪತ್ ಕುಮಾರ್, ಶೈಲೇಶ್, ಚಾಲುಕ್ಯ ನವೀನ್, ರಜಿನಿ, ರೇಖಾ, ಬಸಮ್ಮ, ಲೀಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.