ADVERTISEMENT

ಬಿಜೆಪಿ ಬೇರು ಇನ್ನಷ್ಟು ಆಳಕ್ಕೆ ಇಳಿದಿದೆ: ಬೊಮ್ಮಾಯಿ

ಜನಸೇವಕ ಸಮಾವೇಶದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 13:28 IST
Last Updated 12 ಜನವರಿ 2021, 13:28 IST
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸೇವಕ ಸಮಾವೇಶವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಬಿಜೆಪಿ ಮುಖಂಡ ಜಿ.ಎಂ.ಸುರೇಶ್‌, ಶಾಸಕರಾದ ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ಸಂಸದ ಶಿವಕುಮಾರ ಉದಾಸಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಲಿಂಗಮೂರ್ತಿ, ಟಿ.ಜಿ.ನರೇಂದ್ರ ನಾಥ್ ಇದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸೇವಕ ಸಮಾವೇಶವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಬಿಜೆಪಿ ಮುಖಂಡ ಜಿ.ಎಂ.ಸುರೇಶ್‌, ಶಾಸಕರಾದ ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ಸಂಸದ ಶಿವಕುಮಾರ ಉದಾಸಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಲಿಂಗಮೂರ್ತಿ, ಟಿ.ಜಿ.ನರೇಂದ್ರ ನಾಥ್ ಇದ್ದಾರೆ.   

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಬೇರುಗಳು ಇನ್ನಷ್ಟು ಆಳಕ್ಕೆ ಇಳಿದಿವೆ. ಇನ್ನು ಮುಂದೆ ಬಿಜೆಪಿಯನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಪಕ್ಷದ ಬೆಂಬಲಿತ ಸದಸ್ಯರನ್ನು ಅಭಿನಂದಿಸಲು ಇಲ್ಲಿನ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರಾಮ ರಾಜ್ಯ, ಗ್ರಾಮ ರಾಜ್ಯದ ಪರಿಕಲ್ಪನೆಯನ್ನು ಮಹಾತ್ಮ ಗಾಂಧೀಜಿ ನೀಡಿದ್ದರು. ಸ್ವಾತಂತ್ರ್ಯಾನಂತರವೂ ಗ್ರಾಮೀಣ ಪರಿಸ್ಥಿತಿ ಬದಲಾಗಲಿಲ್ಲ. ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಯೊಂದಿಗೆ ಅಟಲ್‌ ಬಿಹಾರಿ ವಾಜಪೇಯಿ ಆಡಳಿತ ನಡೆಸಿದರು. ಶಾಲೆಗಳಿಗೆ ಸುಣ್ಣ–ಬಣ್ಣ ಬಳಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಸರ್ವ ಶಿಕ್ಷಣ ಅಭಿಯಾನ ನಡೆಸಿದರು. ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಗ್ರಾಮ ಸಡಕ್‌ ಯೋಜನೆ ಅನುಷ್ಠಾನಗೊಳಿಸಿದರು’ ಎಂದು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಉಜ್ವಲ ಯೋಜನೆಯಿಂದ ಗ್ರಾಮೀಣ ಬಡ ಮಹಿಳೆಯರಿಗೆ ಅನುಕೂಲವಾಗಿದೆ. ದೀನದಯಾಳ್‌ ಉಪಾಧ್ಯಾಯ ವಿದ್ಯುತ್‌ ಯೋಜನೆ 19 ಸಾವಿರ ಹಳ್ಳಿಗಳನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆತಂದಿದೆ. ಫಸಲ್‌ ಬಿಮಾ ಯೋಜನೆ, ಕೃಷಿ ಸಮ್ಮಾನ್‌ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ಬಿ.ಎಸ್‌.ಯಡಿಯೂರಪ್ಪ ಅವರ ಆಡಳಿತ ಕೂಡ ಜನರನ್ನು ತಲುಪಿದೆ’ ಎಂದರು.

‘ಒಂಟಿ ಕಾಲಿನಲ್ಲಿ ನಿಂತಿರುವ ಕಾಂಗ್ರೆಸ್‌ ಕುಸಿದು ಬೀಳುವ ಕಾಲ ಸನ್ನಿಹಿತವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಿದೆ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಆಸರೆಯಾಗುತ್ತಿಲ್ಲ. ಅಧಿಕಾರದಲ್ಲಿದ್ದ ಅವಧಿಯಲ್ಲಿ ‘ಭಾಗ್ಯ’ಗಳನ್ನು ಘೋಷಣೆ ಮಾಡಿ ಸುಳ್ಳಿನ ಸರಮಾಲೆ ಹೆಣೆದರು’ ಎಂದು ಆರೋಪಿಸಿದರು.

‘ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸುವರ್ಣ ಗ್ರಾಮ ಯೋಜನೆ ಜಾರಿಗೆ ತರಲಾಗಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಗ್ರಾಮ ವಿಕಾಸ ಯೋಜನೆ ಎಂದು ಹೆಸರು ಬದಲಿಸಿತು. ಆದರೆ, ಅಭಿವೃದ್ಧಿ ಮಾತ್ರ ಮಾಡಲಿಲ್ಲ. ಸುವರ್ಣ ಗ್ರಾಮ ಯೋಜನೆಯನ್ನು ಪುನಾ ಆರಂಭಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಕೃಷಿ ಜಮೀನುಗಳಿಗೆ ನೀರು ಹರಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ನಜೀರ್‌ಸಾಬ್‌ ಸ್ಮರಿಸಿದ ಸಚಿವ
ಪಂಚಾಯತ್‌ ರಾಜ್‌ ವ್ಯವಸ್ಥೆ ರೂಪುಗೊಳ್ಳಲು ಕಾರಣರಾದ ಅಬ್ದುಲ್‌ ನಜೀರ್‌ಸಾಬ್‌ ಹಾಗೂ ರಾಮಕೃಷ್ಣ ಹೆಗಡೆ ಅವರನ್ನು ಸಚಿವ ಬಸವರಾಜ ಬೊಮ್ಮಾಯಿ ಸ್ಮರಿಸಿದರು.

‘ಗ್ರಾಮ ಪಂಚಾಯಿತಿ ತಳ ಹಂತದ ಆಡಳಿತ ವ್ಯವಸ್ಥೆ. ಹಳ್ಳಿಯ ಆಡಳಿತವನ್ನು ಹಳ್ಳಿಯ ಜನರೇ ನಡೆಸಬೇಕು ಎಂಬ ಪರಿಕಲ್ಪನೆ ಹುಟ್ಟಿದ್ದು ಕರ್ನಾಟಕದಲ್ಲಿ. 1980ರ ದಶಕದಲ್ಲಿ ಅಬ್ದುಲ್‌ ನಜೀರ್‌ ಸಾಬ್‌ ಹಾಗೂ ರಾಮಕೃಷ್ಣ ಹೆಗಡೆ ಅವರು ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಜಾರಿಗೆ ತಂದರು. ಇದೇ ವ್ಯವಸ್ಥೆ ದೇಶದ ಎಲ್ಲೆಡೆ ಅನುಷ್ಠಾನಕ್ಕೆ ಬಂದಿತು. ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಿಸುವ ಭರವಸೆ ಮೂಡಿಸಿತು’ ಎಂದರು.

‘ಕಾಂಗ್ರೆಸ್‌ ಮುಳುಗುವ ಹಡಗು’
ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಾಗಿ ಕಾಂಗ್ರೆಸ್‌ ಹಡಗು ಮುಳುಗುತ್ತಿದೆ. ದೇಶದ ಎಲ್ಲೆಡೆ ಕಾಂಗ್ರೆಸ್‌ ಧೂಳಿಪಟವಾಗುತ್ತಿದೆ. ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಚಿತ್ರದುರ್ಗವನ್ನು ಕಾಂಗ್ರೆಸ್‌ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕರೆ ನೀಡಿದರು.

‘ಮುಂದಿನ 25 ವರ್ಷ ದೇಶವನ್ನು ಬಿಜೆಪಿ ಆಳಲಿದೆ. ಪಕ್ಷ ನಿಷ್ಠೆ ಇದ್ದರೆ ಬಿಜೆಪಿ ಕಾರ್ಯಕರ್ತರನ್ನು ಗುರುತಿಸಲಿದೆ. ಆಶ್ರಯ ಮನೆ, ಬೀದಿ ದೀಪ, ನೀರು ಸೇರಿದಂತೆ ಇತರ ಸೌಲಭ್ಯ ಒದಗಿಸುವ ಅಧಿಕಾರ ಹೊಂದಿದ ಗ್ರಾಮ ಪಂಚಾಯಿತಿ ಸದಸ್ಯರು ಪ್ರಾಮಾಣಿಕ, ಪಾರದರ್ಶಕ ಹಾಗೂ ಸ್ವಚ್ಛ ಆಡಳಿತ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಬಿಜೆಪಿ ಬೆಂಬಲಿತರ ಪ್ರಾಬಲ್ಯ’
ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರಲ್ಲಿ ಬಿಜೆಪಿ ಬೆಂಬಲಿತರ ಸಂಖ್ಯೆ ಶೇ 70ರಷ್ಟಿದೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿಯಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

‘ಯುವ ಸಮೂಹ ರಾಜಕೀಯದತ್ತ ಹೆಚ್ಚು ಆಕರ್ಷಿತವಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ವಿಜೇತರಾಗಿದ್ದಾರೆ. ನಿಮ್ಮೆಲ್ಲರ ರಾಜಕೀಯ ಜೀವನ ಯಶಸ್ವಿಯಾಗಲಿ. ತೋರಿಕೆಗೆ ಕೆಲಸ ಮಾಡುವ ಬದಲಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ. ಮುಂಬರುವ ದಿನಗಳಲ್ಲಿ ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತ ಮಾಡೋಣ’ ಎಂದರು.

ಸಂಸದ ಶಿವಕುಮಾರ ಉದಾಸಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಗೀತಾ ವಿವೇಕಾನಂದ, ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷೆ ಶ್ವೇತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್ ಯಾದವ, ತುಮಕೂರು ವಿಭಾಗದ ಉಸ್ತುವಾರಿ ಟಿ.ಜಿ.ನರೇಂದ್ರ ನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರುಳಿ, ಡಾ.ಸಿದ್ದಾರ್ಥ ಇದ್ದರು.

***

ಚೆಕ್‌ಗೆ ಸಹಿ ಹಾಕುವ ಅಧಿಕಾರ ಪ್ರಧಾನಿ ಹಾಗೂ ಮುಖ್ಯಮಂತ್ರಿಗೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈ ಅಧಿಕಾರ ಹೊಂದಿದ್ದಾರೆ. ಇದನ್ನು ಸರಿಯಾಗಿ ಬಳಸಿಕೊಳ್ಳಿ.
–ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

***

ಬಿಜೆಪಿಯಲ್ಲಿ ನಾಯಕರು ಮತ್ತು ಕಾರ್ಯಕರ್ತರು ಸಮಾನರು. ಗ್ರಾಮ ಪಂಚಾಯಿತಿಯಂತೆ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲ್ಲುವುದು ನಮ್ಮ ಗುರಿ.
–ಎಂ.ಚಂದ್ರಪ್ಪ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ

***

ಇತರೆ ಪಕ್ಷಕ್ಕಿಂತ ಬಿಜೆಪಿ ಭಿನ್ನವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉತ್ತಮ ಕೆಲಸ ಮಾಡಿ. ಜನರ ನಿರೀಕ್ಷೆ ಈಡೇರಿಸಿ. ಮುಂದಿನ ಚುನಾವಣೆಯಲ್ಲಿಯೂ ಜಿಲ್ಲೆ ಕೇಸರಿಮಯ ಆಗಲಿ.
–ಕೆ.ಪೂರ್ಣಿಮಾ,ಶಾಸಕಿ, ಹಿರಿಯೂರು

***

ಗ್ರಾಮ ಪಂಚಾಯಿತಿಗೆ ಹೆಚ್ಚು ಅನುದಾನ ಸಿಗುತ್ತಿದೆ. ಇಷ್ಟು ಅನುದಾನ ವಿಧಾನಪರಿಷತ್ ಸದಸ್ಯರಿಗೂ ಇರುವುದಿಲ್ಲ. ಆಸೆ, ಆಮಿಷಕ್ಕೆ ಬಲಿಯಾಗದೆ ಕೆಲಸ ಮಾಡಿ. ಪಕ್ಷನಿಷ್ಠೆ ಉಳಿಸಿಕೊಳ್ಳಿ.
-ಗೂಳಿಹಟ್ಟಿ ಡಿ.ಶೇಖರ್,ಶಾಸಕ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.