
ಮೊಳಕಾಲ್ಮುರು: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮಂಡಲ ಬಿಜೆಪಿ ನೇತೃತ್ವಲ್ಲಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
‘ಡಾ. ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಮಾಜದಲ್ಲಿ ಆಗುವ ಅನಾಹುತಗಳ ಬಗ್ಗೆ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವೂ ಇದರಲ್ಲಿ ಅಡಗಿದೆ’ ಎಂದು ಮಂಡಲಾಧ್ಯಕ್ಷ ಕೆ.ಟಿ. ಶ್ರೀರಾಮರೆಡ್ಡಿ ದೂರಿದರು.
‘ಪೊಲೀಸರು ಮತ್ತು ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿ ಎಂದು ಮುಂಚಿತವಾಗಿ ಬಂಧಿಸುವ ಸಾಧ್ಯತೆ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಅಂಶವು ಪ್ರತಿಭಟನೆ, ಸಮಾರಂಭ, ಸಮಾವೇಶಗಳನ್ನು ಹತ್ತಿಕ್ಕಲು ಒತ್ತು ನೀಡಿದೆ. ಅನ್ಯಾಯವಾದಾಗ ಹಾಗೂ ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಪ್ರತಿಭಟಿಸಲು ಹೋದಾಗ ಭಾವನಾತ್ಮಕ ಹಾನಿ ಎಂದು ಪ್ರಕರಣ ದಾಖಲಿಸಲು ಸಾಧ್ಯವಿದೆ. ಮಾಧ್ಯಮಗಳ ಸ್ವಾತಂತ್ರ್ಯವನ್ನೂ ಸಹ ಇದರಲ್ಲಿ ಕಡಿತ ಮಾಡಲಾಗಿದೆ’ ಎಂದು ದೂರಿದರು.
ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ರಾಜ್ಯಪಾಲರಿಗೆ ಕಳಿಸಲಾಗಿದೆ. ರಾಜ್ಯಪಾಲರು ಯಾವ ಕಾರಣಕ್ಕೂ ಅಂಗೀಕಾರ ನೀಡಬಾರದು ಎಂದು ಆಗ್ರಹಿಸಿ ತಹಶೀಲ್ದಾರ್ ಟಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಮುಖಂಡರಾದ ಟಿ.ಟಿ. ರವಿಕುಮಾರ್, ಕೆ. ತಿಪ್ಪೇಸ್ವಾಮಿ, ನೇರ್ಲಹಳ್ಳಿ ಪ್ರಭಾಕರ್, ಸಂಜೀವಪ್ಪ, ಸಿದ್ದಣ್ಣ, ಮಂಜಣ್ಣ, ಲೋಕೇಶ್ ರೆಡ್ಡಿ, ಶಿವಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.