ADVERTISEMENT

ಚಿತ್ರದುರ್ಗ | ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ಮುಖಂಡರು

ಗಣೇಶ ಪೆಂಡಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ; ಜಿಲ್ಲಾಡಳಿತದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:52 IST
Last Updated 11 ಸೆಪ್ಟೆಂಬರ್ 2025, 5:52 IST
ಗಣೇಶೋತ್ಸವ ಆಚರಣೆಗೆ ಸರ್ಕಾರ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ವಿಎಚ್‌ಪಿ, ಬಜರಂಗದಳ, ಬಿಜೆಪಿ ಮುಖಂಡರು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು
ಗಣೇಶೋತ್ಸವ ಆಚರಣೆಗೆ ಸರ್ಕಾರ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ವಿಎಚ್‌ಪಿ, ಬಜರಂಗದಳ, ಬಿಜೆಪಿ ಮುಖಂಡರು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ವತಿಯಿಂದ ಸೆ.13ರಂದು ನಡೆಯಲಿರುವ ಗಣೇಶೋತ್ಸವ ಶೋಭಾಯಾತ್ರೆಗೆ ಸರ್ಕಾರ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜೈನಧಾಮದ ಗಣೇಶ ಮಂಟಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ವಿಶ್ವಹಿಂದೂ ಪರಿಷತ್‌ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಖಂಡನೀಯ. ಶೋಭಾಯಾತ್ರೆಯಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳು ಎಲ್ಲರಿಗೂ ಕೇಳಲಿ ಎಂಬ ಉದ್ದೇಶದಿಂದ ಹೆಚ್ಚುವರಿಯಾಗಿ ಧ್ವನಿ ವರ್ಧಕ ಅಳವಡಿಸಲು ಅವಕಾಶ ಕೇಳಲಾಗುತ್ತಿದೆ. ಆದರೆ ಇದಕ್ಕೆ ಸಮ್ಮತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆ: ಇದಕ್ಕೂ ಮೊದಲು ಗಣೇಶೋತ್ಸವದ ಪೆಂಡಾಲ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಗಣೇಶೋತ್ಸವ ಆಚರಣೆಗೆ ಸರ್ಕಾರ ವಿನಾಕಾರಣ ತೊಂದರೆ ನೀಡುತ್ತಿದೆ. ಮದ್ದೂರು ಕಲ್ಲು ತೂರಾಟದ ಘಟನೆ ಓಲೈಕೆ ರಾಜಕಾರಣವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ’ ಎಂದರು.

ADVERTISEMENT

‘ಭಾರತೀಯ ಸಂವಿಧಾನದ ಅಡಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಪಕ್ಷದ ಗುಲಾಮರ ರೀತಿಯಲ್ಲಿ ವರ್ತಿಸಬಾರದು. ಭದ್ರಾವತಿ ಶಾಸಕ ಸಂಗಮೇಶ್‌ ಅವರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವೆ ಎಂದು ಹೇಳಿದ್ದಾರೆ. ಈಗಲೇ ಮತಾಂತರವಾದರೆ ಬಹಳ ಒಳ್ಳೆಯದು. ಹಿಂದುತ್ವದ ರಕ್ಷಣೆ ನಮ್ಮ ಬದ್ಧತೆಯಾಗಿದೆ’ ಎಂದರು.

‘ಕಳೆದ 18 ವರ್ಷಗಳಿಂದಲೂ ನಗರದಲ್ಲಿ ಮಹಾಗಣಪತಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದೆ. ಸಣ್ಣ ಅಹಿತಕರ ಘಟನೆಯಾಗಿಲ್ಲ. ರಾಜ್ಯದ ಇತರೆಡೆ ಡಿ.ಜೆಗೆ ಅನುಮತಿ ಕೊಡಲಾಗಿದೆ. ಇಲ್ಲಿ ಯಾಕಿಲ್ಲ? ಸೆ.12ರೊಳಗೆ ಅನುಮತಿ ಕೊಡಬೇಕು. ಶರಣ್‌ ಪಂಪ್‌ವೆಲ್ ಪ್ರವೇಶಕ್ಕೆ ಹೇರಿರುವ ನಿರ್ಬಂಧ ತೆರವುಗೊಳಿಸಬೇಕು’ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಒತ್ತಾಯಿಸಿದರು.

‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಎಫ್‌ಎಸ್‌ಎಲ್‌ ವರದಿ ಬಂದಿದ್ದರೂ ಕ್ರಮ ಜರುಗಿಸಿಲ್ಲ. ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಮುಖ್ಯಮಂತ್ರಿ ಹೊರಟಿದ್ದಾರೆ. ಕಾಂಗ್ರೆಸ್‌ ಸರ್ಕಾರಕ್ಕೆ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ, ಗಣಪತಿ, ಚಾಮುಂಡೇಶ್ವರಿ ತಾಯಿಯ ಶಾಪ ತಟ್ಟಲಿದೆ’ ಎಂದು ಮುಖಂಡ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ ‘ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ ಬಳಸಲು ಅವಕಾಶ ನೀಡಬೇಕು. ಒಂದು ಕೋಮಿನ ತುಷ್ಟೀಕರಣ ಮಾಡುವುದನ್ನೇ ಜಾತ್ಯತೀತ ಎಂದು ಕಾಂಗ್ರೆಸ್‌ ನಂಬಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ ‘ಡಿ.ಜೆಗೆ ನಿರ್ಬಂಧ ವಿಧಿಸಬಾರದು ಎಂದು ಹೈಕೋರ್ಟ್ ಆದೇಶವಿದೆ. ಕಾಂಗ್ರೆಸ್ ಸರ್ಕಾರ ಪಟಾಕಿ ಸಿಡಿಸುವವರ ವಿರುದ್ಧ ಕೇಸ್‌ ಮಾಡುತ್ತದೆ. ಬಾಂಬ್ ಹಾಕುವವರ ವಿರುದ್ಧ ಯಾವುದೇ ಪ್ರಕರಣ ಮಾಡುವುದಿಲ್ಲ’ ಎಂದರು.

ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌, ವಿಎಚ್‌ಪಿ ಮುಖಂಡರಾದ ದೀಪಕ್ ರಾಜ್, ಪ್ರಭಂಜನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡರಾದ ಡಾ.ಸಿದ್ದಾರ್ಥ ಗುಂಡಾರ್ಪಿ, ಬದ್ರಿನಾಥ್, ಉಮೇಶ್‌ ಕಾರಜೋಳ, ಶರಣ್, ಮೋಹನ್ ಇದ್ದರು.

ಮಹಾರಾಷ್ಟ್ರ ಮಾದರಿ ನಾಡಹಬ್ಬವಾಗಲಿ
‘ದೇಶದ ಉದ್ದಗಲಕ್ಕೂ ನಡೆಯುವಂಥ ಗಣೇಶೋತ್ಸವವನ್ನು ಮಹಾರಾಷ್ಟ್ರ ಮಾದರಿಯಲ್ಲಿ ನಾಡಹಬ್ಬವನ್ನಾಗಿ ಘೋಷಿಸಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು. ಹಿಂದೂಗಳ ಹಬ್ಬಕ್ಕೆ ತೊಂದರೆ ನೀಡುತ್ತಿರುವ ಸಿದ್ದರಾಮಯ್ಯ ಸರ್ಕಾರ ಶೀಘ್ರವೇ ಪತನವಾಗಲಿದೆ. ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಮುಂತಾದವರನ್ನು ಖುಷಿಪಡಿಸಲು ಹಿಂದೂಗಳ ಉತ್ಸವಕ್ಕೆ ಅಡ್ಡಿಪಡಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.