
ಹಿರಿಯೂರು: ರಾಜ್ಯದಲ್ಲಿ ದಲಿತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ತರ್ಕಬದ್ಧ ಹೋರಾಟ ನಡೆಸುವ ಮೂಲಕ ಆಳುವವರನ್ನು ಎಚ್ಚರಿಸಿದ, ದಲಿತರಿಗೆ ದನಿಯಾದ ಕೀರ್ತಿ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ ಎಂದು ಜನತಂತ್ರ ಉಳಿಸಿ ಆಂದೋಲನದ ರಾಜ್ಯ ಘಟಕದ ಸಂಚಾಲಕ ಪ್ರೊ.ಸಿ. ಕೆ. ಮಹೇಶ್ ಹೇಳಿದರು.
ನಗರದ ನೆಹರು ಮೈದಾನದಲ್ಲಿರುವ ರೋಟರಿ ಸಭಾಂಗಣದಲ್ಲಿ ಜನತಂತ್ರ ಉಳಿಸಿ ಆಂದೋಲನ– ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ಜನತಂತ್ರದ ಸವಾಲು ಮತ್ತು ಪರಿಹಾರ ವಿಷಯ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ದಲಿತ ಸಂಘಟನೆಗಳಿಗೆ ಹೋರಾಟದ ಸರಿಯಾದ ದಿಕ್ಕು ತೋರಿಸಿದ ಬಿ.ಕೃಷ್ಣಪ್ಪ ಅವರ ಚಿಂತನೆಗಳು, ಹೋರಾಟದ ಮಾದರಿ ಪ್ರಸ್ತುತ ಕಾಲಘಟ್ಟದಲ್ಲೂ ಅಗತ್ಯವಿದೆ. ಅವರ ತತ್ವ ಮತ್ತು ಆದರ್ಶಗಳನ್ನು ಹೋರಾಟಗಾರರು ಉಳಿಸಿಕೊಳ್ಳಬೇಕಿದೆ’ ಎಂದರು.
‘ಜನತಂತ್ರವನ್ನು ಸರಿದಾರಿಗೆ ತರಲು ಆಮಿಷಗಳಿಗೆ ಒಳಗಾಗದೆ ತಮ್ಮ ಮತಗಳಿಗೆ ಮೌಲ್ಯವನ್ನು ತಂದುಕೊಂಡಾಗ ನಿಸ್ಸಂದೇಹವಾಗಿ ಜನತಂತ್ರವನ್ನು ಉಳಿಸುವ ಕಾರ್ಯವಾಗುತ್ತದೆ’ ಎಂದು ಮಹೇಶ್ ಹೇಳಿದರು.
ನಿರ್ಣಯ ಮತ್ತು ಕ್ರಿಯಾ ಯೋಜನೆಗಳನ್ನು ಮಂಡಿಸಿದ ಹಿರೇಹಳ್ಳಿ ಮಲ್ಲಿಕಾರ್ಜುನ್, ‘ಸಂವಿಧಾನವೇ ಪ್ರಜಾಸತ್ತೆಗೆ ಜೀವಾಳವಾಗಿದೆ. ಬಂಡವಾಳಶಾಹಿಗಳು, ಕೋಮುವಾದಿಗಳು ವ್ಯವಸ್ಥೆಯನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಹಿಂದುಳಿದ, ದಲಿತ ಮತ್ತು ಮಹಿಳಾ ವರ್ಗಗಳಿಗೆ ಜನತಂತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ’ ಎಂದರು.
‘ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಮತಗಳು ಹಣಕ್ಕಾಗಿ ಬಿಕರಿಯಾಗುತ್ತಿರುವ ಈ ಕಾಲದಲ್ಲಿ ಸೋಲು ಗೆಲುವುಗಳಾಚೆ ಒಂದು ಮೇಲ್ಪಂಕ್ತಿಯ ಮಾದರಿಯನ್ನು ರೂಪಿಸಿಕೊಡುವ ಜವಾಬ್ದಾರಿ ಅಂಬೇಡ್ಕರ್ ಅನುಯಾಯಿಗಳ ಹೆಗಲ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.
ಟಿ. ಶಂಕರ್, ಕೆ.ರುದ್ರಪ್ಪ, ಟಿ. ರಾಮು, ಬಾಲೇನಹಳ್ಳಿ ರಾಮಣ್ಣ, ರುದ್ರಮುನಿ, ಹುಚ್ಚವ್ವನಹಳ್ಳಿ ವೆಂಕಟೇಶ್, ತಿಪ್ಪೇಸ್ವಾಮಿ ಗೊಲ್ಲಹಳ್ಳಿ, ಎಸ್. ಜಿ. ರಂಗಸ್ವಾಮಿ ಸಕ್ಕರ, ಶಿವಣ್ಣ ರಂಗೇನಹಳ್ಳಿ, ಆರ್. ಶಿವಶಂಕರ್, ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.