ADVERTISEMENT

ಆದಾಯ ಮಿತಿ ಮೀರಿದವರ ಬಿಪಿಎಲ್‌ ಕಾರ್ಡ್‌ ರದ್ದು ಸಾಧ್ಯತೆ: ಗೀತಾಂಜನೇಯ

ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:44 IST
Last Updated 25 ಡಿಸೆಂಬರ್ 2025, 7:44 IST
ಮೊಳಕಾಲ್ಮುರಿನಲ್ಲಿ ಮಂಗಳವಾರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು.
ಮೊಳಕಾಲ್ಮುರಿನಲ್ಲಿ ಮಂಗಳವಾರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು.   

ಮೊಳಕಾಲ್ಮುರು: ‘ಬ್ಯಾಂಕ್‌ ಖಾತೆಯಲ್ಲಿ ವಾರ್ಷಿಕ ಕನಿಷ್ಠ ಆದಾಯ ಮಿತಿ ಮೀರಿ ವಹಿವಾಟು ನಡೆಸಿರುವ ವ್ಯಕ್ತಿಯ ಬಿಪಿಎಲ್‌ ಕಾರ್ಡ್ ರದ್ದು ಆಗುವ ಸಾಧ್ಯತೆಯಿದೆ’ ಎಂದು ತಾಲ್ಲೂಕು ಆಹಾರ ನಿರೀಕ್ಷಕ ಗೀತಾಂಜನೇಯ ಹೇಳಿದರು.

ಮಂಗಳವಾರ ಇಲ್ಲಿ ಗ್ಯಾರಂಟಿ ಯೋಜನೆಗಳ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

‘ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಆಗಿರುವ ಕಾರಣ ಬ್ಯಾಂಕ್‌ ಖಾತೆಯಲ್ಲಿ ಹಣ ವರ್ಗಾವಣೆ ಮಾಹಿತಿ ತೆರಿಗೆ ಇಲಾಖೆಗೆ ಸಿಗುತ್ತಿದೆ. ಇದರಿಂದ ಹೆಚ್ಚು ಹಣ ವರ್ಗಾವಣೆಯಾಗುವ ಖಾತೆಯ ಕುಟುಂಬದ ಬಿಪಿಎಲ್‌ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ. ತಾಲ್ಲೂಕಿನಲ್ಲಿ ಇಂತಹ 104 ಪ್ರಕರಣ ಗುರುತಿಸಲಾಗಿದೆ. ಇದಕ್ಕೂ ಮುನ್ನ 645 ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ ಆಗಿ ಮಾರ್ಪಾಡು ಮಾಡಲಾಗಿದೆ. ರದ್ದು ತಡೆಯುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿಲ್ಲ’ ಎಂದರು.

ADVERTISEMENT

‘ಬೇರೆ, ಬೇರೆ ಕಾರಣಕ್ಕಾಗಿ ಇಂದು ಮಹಿಳೆಯರು ಸೇರಿದಂತೆ ಬಹುತೇಕರು ಖಾತೆಗಳಲ್ಲಿ ಹಣ ಇಟ್ಟುಕೊಂಡಿರುತ್ತಾರೆ. ಸರ್ಕಾರದ ಈ ಆದೇಶ ಇಂಥವರಿಗೆ ತೊಂದರೆ ಮಾಡಲಿದೆ. ಈ ಬಗ್ಗೆ ಪರಾಮರ್ಶೆ ಮಾಡುವ ಅಗತ್ಯವಿದೆ’ ಎಂದು ಸಮಿತಿ ಸದಸ್ಯರು ಮನವಿ ಮಾಡಿದರು.

‘ತಾಲ್ಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಬಹುತೇಕ ಎಲ್ಲಾ ಸರ್ಕಾರಿ ಬಸ್‌ಗಳು ಸಂಚರಿಸುತ್ತಿವೆ, ಪಟ್ಟಣ ಸೇರಿದಂತೆ ಹಳ್ಳಿಗಳ ಜನರಿಗೆ ಶಕ್ತಿ ಯೋಜನೆ ಲಾಭ ಹೆಚ್ಚಾಗಿ ಸಿಗುತ್ತಿಲ್ಲ. ಕೆಲವು ಬಸ್‌ಗಳಾದರೂ ಪಟ್ಟಣ ಒಳಗಡೆ ಬಂದು ಹೋಗುವಂತೆ ಮಾಡಬೇಕು’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ರಂಟಿ ಯೋಜನೆಗಳ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎನ್.ವೈ.ಪಿ. ಚೇತನ್‌ ಹೇಳಿದರು.

‘ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನ ಮಹಿಳೆಯರು ಈವರೆಗೆ ಶಕ್ತಿ ಯೋಜನೆಯಲ್ಲಿ ₹ 48 ಕೋಟಿ ವೆಚ್ಚದಷ್ಟು ಉಚಿತ ಟಿಕೆಟ್‌ ಬಳಸಿದ್ದಾರೆ’ ಎಂದು ಚಳ್ಳಕೆರೆ ವಿಭಾಗೀಯ ಸಾರಿಗೆ ಅಧಿಕಾರಿ ತಿಳಿಸಿದರು.

‘ಗೃಹಲಕ್ಷ್ಮೀ ಯೋಜನೆಯಡಿ ತಾಲ್ಲೂಕಿನಲ್ಲಿ 36,005 ಜನರು ನೋಂದಣಿ ಮಾಡಿಕೊಂಡಿದ್ದು 35,080 ಮಹಿಳೆಯರು ಸೌಲಭ್ಯ ಪಡೆಯುತ್ತಿದ್ದಾರೆ. ತಾಂತ್ರಿಕ ಕಾರಣದಿಂದ 925 ಜನರಿಗೆ ಹಣ ಸಂದಾಯವಾಗುತ್ತಿಲ್ಲ’ ಎಂದು ಸಿಡಿಪಿಒ ನವೀನ್‌ ಕುಮಾರ್‌ ಹೇಳಿದರು.

ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಜಿಲ್ಲಾ ಸಮಿತಿ ಸದಸ್ಯ ಜಿ.ಪಿ. ಸುರೇಶ್‌ ಹಾಗೂ ತಾಲ್ಲೂಕು ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.