ADVERTISEMENT

ಹೊಳಲ್ಕೆರೆ | ನೆಲದಿಂದ 6 ಅಡಿ ಮೇಲಕ್ಕೇರಿದ ಬೃಹತ್ ಕಟ್ಟಡ, 2 ತಿಂಗಳ ಕಾರ್ಯಾಚರಣೆ

ಸಾಂತೇನಹಳ್ಳಿ ಸಂದೇಶ ಗೌಡ
Published 21 ಜುಲೈ 2025, 4:03 IST
Last Updated 21 ಜುಲೈ 2025, 4:03 IST
ಹೊಳಲ್ಕೆರೆಯ ಹೊಸದುರ್ಗ ರಸ್ತೆಯಲ್ಲಿರುವ ಬೃಹತ್ ಕಟ್ಟಡವನ್ನು 6 ಅಡಿ ಎತ್ತರಿಸಿರುವುದು
ಹೊಳಲ್ಕೆರೆಯ ಹೊಸದುರ್ಗ ರಸ್ತೆಯಲ್ಲಿರುವ ಬೃಹತ್ ಕಟ್ಟಡವನ್ನು 6 ಅಡಿ ಎತ್ತರಿಸಿರುವುದು   

ಹೊಳಲ್ಕೆರೆ: ಪಟ್ಟಣದಲ್ಲಿ ನಿರ್ಮಿಸಿದ್ದ ಬೃಹತ್ ಗಾತ್ರದ ಕಟ್ಟಡವೊಂದನ್ನು ಕಾರ್ಮಿಕರು ನೆಲದಿಂದ 6 ಅಡಿ ಎತ್ತರಕ್ಕೆ ಏರಿಸುವ ಮೂಲಕ ಅಚ್ಚರಿ ಮೂಡಿದ್ದಾರೆ. 

ಹೊಸದುರ್ಗ ರಸ್ತೆಯ ಶಂಕ್ರಪ್ಪ ಮೆಮೋರಿಯಲ್ ಆಸ್ಪತ್ರೆ ಪಕ್ಕದಲ್ಲಿರುವ ಬಸ್ ಏಜೆಂಟ್ ಶ್ರೀನಿವಾಸ್ ಎಂಬುವರಿಗೆ ಸೇರಿದ ಈ ಕಟ್ಟಡ 40x100 ಅಡಿ ವಿಸ್ತೀರ್ಣದಲ್ಲಿದ್ದು, ನೆಲಮಟ್ಟದಿಂದ 6 ಅಡಿ ಎತ್ತರಿಸಲಾಗಿದೆ. ಹರಿಯಾಣ ಮೂಲಕ ಕಂಪನಿಯೊಂದು ಈ ಕಟ್ಟಡ ಎತ್ತರಿಸುವ ಕೆಲಸ ಮಾಡಿದ್ದು, ಸತತ 2 ತಿಂಗಳ ಕಾರ್ಯಾಚರಣೆಯ ನಂತರ ಯಶಸ್ಸು ದೊರೆತಿದೆ. ನೂರಾರು ಕಾರ್ಮಿಕರು ಜಾಕ್‌ಗಳನ್ನು ಬಳಸಿ ಕಟ್ಟಡ ಮೇಲೆತ್ತಿದ್ದಾರೆ. 

ಕಟ್ಟಡ ಎತ್ತರಿಸಲು ಜಾಕ್ ಗಳನ್ನು ಅಳವಡಿಸಿರುವುದು.

‘ರಸ್ತೆ ಪಕ್ಕ ದೊಡ್ಡ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಿಸಿದ್ದೆವು. ಆದರೆ, ನಮ್ಮ ಕಟ್ಟಡಕ್ಕೆ ಸಮನಾಗಿ ರಸ್ತೆ ಇದ್ದುದರಿಂದ ಕಟ್ಟಡ ಚೆನ್ನಾಗಿ ಕಾಣುತ್ತಿರಲಿಲ್ಲ. ಮುಂದೆ ರಸ್ತೆ ಇನ್ನೂ ಎತ್ತರ ಆದರೆ ನಮ್ಮ ಕಟ್ಟಡ ಮತ್ತಷ್ಟು ಕೆಳಗೆ ಹೋಗುವ ಆತಂಕ ಇತ್ತು. ಮೊದಲು ಹೊಸ ಕಟ್ಟಡವನ್ನೇ ಹೊಡೆದು ಹಾಕಿ ಹೊಸದಾಗಿ ಕಟ್ಟಡ ನಿರ್ಮಿಸುವ ಚಿಂತನೆ ಮಾಡಿದ್ದೆವು. ಆದರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಕಟ್ಟಡ ನಿರ್ಮಿಸಿದ್ದು, ಕಟ್ಟಡ ಹೊಡೆಯಲು ಮನಸ್ಸಾಗಲಿಲ್ಲ. ಹೀಗಾಗಿ ಕಂಪನಿಯ ಮೂಲಕ ಕಟ್ಟಡ ಎತ್ತರಿಸಿದೆವು. ಇದಕ್ಕಾಗಿ ₹30 ಲಕ್ಷ ವೆಚ್ಚವಾಗಿದೆ’ ಎಂದು ಕಟ್ಟಡದ ಮಾಲೀಕ ಶ್ರೀನಿವಾಸ್ ಮಾಹಿತಿ ನೀಡಿದರು. 

ADVERTISEMENT

‘ಹರಿಯಾಣದ ಕಂಪನಿಯವರು ₹13.5 ಲಕ್ಷಕ್ಕೆ ಕಟ್ಟಡವನ್ನು 6 ಅಡಿ ಎತ್ತರ ಮಾಡಿಕೊಡಲು ಒಪ್ಪಿದರು. ಉತ್ತರ ಭಾರತದ ಕಾರ್ಮಿಕರು 250 ರಿಂದ 300 ಜಾಕ್ ಬಳಸಿ ಕಟ್ಟಡ ಮೇಲಕ್ಕೆ ಎತ್ತಿದ್ದಾರೆ. ಕಟ್ಟಡದ ಕೆಳಗಿನ ಬೀಮ್‌ಗೆ ಜಾಕ್‌ಗಳನ್ನು ಅಳವಡಿಸಲಾಗಿದೆ. ಮೊದಲ ಮಹಡಿಯ ಬೀಮ್‌ಗಳಿಗೂ ಜಾಕ್ ಅಳವಡಿಸಲಾಗಿದೆ’ ಎಂದು ಶ್ರೀನಿವಾಸ್ ಅವರ ಪುತ್ರ ರೀತೇಶ್ ಹೇಳಿದರು. 

‘ಇಟ್ಟಿಗೆಗಳಿಂದಲೂ ಕಟ್ಟಡ ಅಲುಗಾಡದಂತೆ ಆಧಾರ ನೀಡಲಾಗಿದೆ. ಒಂದೇ ಸಮಯಕ್ಕೆ 20 ಕಾರ್ಮಿಕರು 6 ಜಾಕ್‌ಗಳನ್ನು ಎತ್ತರಿಸುತ್ತಾರೆ. ದಿನಕ್ಕೆ 8 ಇಂಚು ಮಾತ್ರ ಕಟ್ಟಡ ಮೇಲಕ್ಕೆ ಎತ್ತುತ್ತಾರೆ. ಕಟ್ಟಡವನ್ನು ಒಂದಿಷ್ಟೂ ಅಲುಗಾಡಿಸದೆ ಮೇಲೆ ಎತ್ತಿದ್ದಾರೆ. ಈಗ ಕಟ್ಟಡ ಎತ್ತರಿಸುವ ಕಾರ್ಯಾಚರಣೆ ಮುಗಿದಿದ್ದು, ಕಟ್ಟಡದ ಕೆಳಗೆ ಪಿಲ್ಲರ್ ಅಳವಡಿಸಿ ಗೋಡೆ ನಿರ್ಮಿಸಲಾಗುತ್ತಿದೆ. ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವುದಕ್ಕಿಂತ ಈ ಕಾರ್ಯಾಚರಣೆಗೆ ಕಡಿಮೆ ವೆಚ್ಚ ತಗುಲಿದೆ’ ಎಂದು ಅವರು ತಿಳಿಸಿದರು. 

ಕಟ್ಟಡ ಎತ್ತರಿಸಲು ಜಾಕ್ ಗಳನ್ನು ಅಳವಡಿಸಿರುವುದು.

‘6 ಅಡಿ ಕಟ್ಟಡ ಮೇಲೆ ಹೋಗಿರುವುದರಿಂದ ನಮಗೆ ಹೊಸದಾಗಿ ಒಂದು ನೆಲಮಹಡಿ ಲಭಿಸಿದೆ. ಇದರಲ್ಲಿ ವಾಹನ ಪಾರ್ಕಿಂಗ್‌ಗೆ ಸೆಲ್ಲರ್ ಮಾಡಬಹುದು. ಮಳಿಗೆಗಳನ್ನೂ ನಿರ್ಮಿಸಬಹುದು. ಹಾಕಿದ ಬಂಡವಾಳಕ್ಕೆ ಮೋಸ ಆಗಿಲ್ಲ. ಹಿರಿಯೂರಿನಲ್ಲಿ ರಸ್ತೆ ವಿಸ್ತರಣೆಗಾಗಿ ಎರಡು ಮನೆಗಳನ್ನು ಹಿಂದಕ್ಕೆ ಸರಿಸಲಾಗಿತ್ತು. ನಮಗೆ ರಸ್ತೆ ವಿಸ್ತರಣೆಯ ಸಮಸ್ಯೆ ಇಲ್ಲ. ಕಟ್ಟಡ ಕೆಳಗಿದೆ ಎಂದು ಎತ್ತರ ಮಾಡಿದ್ದೇವೆ. ಜಿಲ್ಲೆಯಲ್ಲೇ ಇದು ಹೊಸ ಪ್ರಕರಣ’ ಎಂದು ಅವರು ಹೇಳಿದರು.

ಸರಿಯಾಗಿ ಯೋಜಿಸದೇ ಕೆಳಮಟ್ಟದಲ್ಲಿ ಕಟ್ಟಡ ನಿರ್ಮಿಸಿದ್ದೆವು. ಕಟ್ಟಡ ತಗ್ಗು ಪ್ರದೇಶದಲ್ಲಿ ಇದ್ದರೆ ವ್ಯಾಪಾರಿಗಳು ಗ್ರಾಹಕರು ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಕಟ್ಟಡ ಮೇಲೆತ್ತಲಾಗಿದೆ
-ಶ್ರೀನಿವಾಸ್ ಕಟ್ಟಡದ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.