ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಹಾಗೂ ಅವರ ಸಹೋದರರ ಮನೆಗಳು, ಕಚೇರಿ ಸೇರಿದಂತೆ ದೇಶದಾದ್ಯಂತ ಒಟ್ಟು 30 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದ್ದಾರೆ.
ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.
ಚಿತ್ರದುರ್ಗದ 6, ಬೆಂಗಳೂರಿನ 10, ಗೋವಾದ 5, ಹುಬ್ಬಳ್ಳಿ, ಮುಂಬೈ, ಜೋಧಪುರದ ತಲಾ ಒಂದು ಕಡೆ ಮತ್ತು ಸಿಕ್ಕಿಂನಲ್ಲಿ ಐದು ಕಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
'ಸ್ನಾನದ ಮನೆ ಗೋಡೆಯಲ್ಲಿ ಹಣ'
2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಆಗ ಚಾಲ್ತಿಯಲ್ಲಿದ ₹ 500, ₹ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿತ್ತು. ಬದಲಿಗೆ ₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.
ಅದೇ ವರ್ಷ ಡಿಸೆಂಬರ್ 16ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವೀರೇಂದ್ರ ಅವರ ಮನೆಯಲ್ಲಿ ಶೋಧ ನಡೆಸಿದ್ದರು. ಆಗ ಮನೆಯ ಸ್ನಾನಗೃಹದ ಗೋಡೆಯೊಳಗೆ ಅಡಗಿಸಿ ಇಟ್ಟಿದ್ದ ಕಪಾಟಿನಲ್ಲಿ ₹ 5 ಕೋಟಿ ನಗದು ಪತ್ತೆಯಾಗಿತ್ತು. ಅದರಲ್ಲಿ ₹ 2,000 ಮುಖಬೆಲೆಯ ನೋಟುಗಳೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದವು. ಜತೆಗೆ 30 ಕೆ.ಜಿಯಷ್ಟು ಚಿನ್ನ ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.