
ಚಳ್ಳಕೆರೆ: ಇಲ್ಲಿನ ಪಾವಗಡ ರಸ್ತೆ ರೈಲ್ವೆ ಗೇಟ್ ಬಳಿ ಮರವಾಯಿ ಬೆಡಗಿನ ಕಾಡುಗೊಲ್ಲ ಸಮುದಾಯದ ಮುಖಂಡ ಮರವಾಯಿ ವೆಂಕಟೇಶ್, ಅಜ್ಜಪ್ಪ, ಮಹಾಲಿಂಗ, ಶ್ರೀನಿವಾಸ್, ವೀರೇಶ್ ಅವರು ಮನೆ ಮುಂದೆ ಬೆಳೆಸಿದ್ದ ದೇವರ ಪೂಜೆ (ಅತ್ತಿ) ಮರವನ್ನು ಗಂಡುಗೊಡಲಿಯಿಂದ ಕಡಿಯುವ ಮೂಲಕ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಜಾತ್ರಾ ಆಚರಣೆಗೆ ಗುರುವಾರ ಚಾಲನೆ ನೀಡಿದರು.
ನಂತರ ಕರಿ ಕಂಬಳಿ ಗದ್ದಿಗೆ ಹಾಸಿ ವಿಶೇಷ ಪೂಜೆ ಸಲ್ಲಿಸಿದರು. ಆಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ಅತ್ತಿ ಮರದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಬುಡಕ್ಕೆ ಕೈ ಮುಗಿದರು. ಸಾಮೂಹಿಕ ಅನ್ನ ಸಂತರ್ಪಣೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು.
ಕೋಣನ ಮತ್ತು ಬೊಮ್ಮನಗೌಡರ ಗುಂಪಿನವರು ಕಡಿದ ಪೂಜೆ ಮರ ನೆಲಕ್ಕೆ ತಾಕದಂತೆ ಹೆಗಲ ಮೇಲೆ ಹೊತ್ತು ಉರುಮೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಜಾತ್ರೆ ನಡೆಯುವ ಪುರ್ಲೆಹಳ್ಳಿ ಗ್ರಾಮದ ಬಳಿ ವಸಲು ದಿನ್ನೆಗೆ ಸಾಗಿಸಿದರು.
ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಯಾದವ ಮಹಾ ಸಂಸ್ಥಾನದ ಯಾದವ ಬಸವಾನಂದ ಸ್ವಾಮೀಜಿ, ಮರವಾಯಿ ಬೆಡಗಿನ ಮುಖಂಡ ಮರವಾಯಿ ಅಜ್ಜಪ್ಪ, ವೆಂಕಟೇಶ್, ಶ್ರೀನಿವಾಸ್, ಮಹಾಲಿಂಗಪ್ಪ, ಅಜ್ಜಯ್ಯ, ಈರಣ್ಣ, ವೀರೇಶ್, ಪೂಜಾರಿ ಚಂದ್ರಣ್ಣ, ತಿಪ್ಪೇಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲ್ಲೂಕು ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಪರಶುರಾಂಪುರ ಹೋಬಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಟಿ.ಶಶಿಧರ್, ಕರಿಯಣ್ಣ, ಗೌಡ ಕ್ಯಾತಣ್ಣ, ರಾಮಣ್ಣ ಮತ್ತು ಚನ್ನಮ್ಮನಾಗತಿಹಳ್ಳಿ ಕಟ್ಟೆಮನೆ ವ್ಯಾಪ್ತಿಯ ಭಕ್ತರು, ಹದಿಮೂರು ಗುಡಿಕಟ್ಟಿನ ಗೌಡರು, ಹಿರಿಯ ಮುಖಂಡರು, ಮತ್ತು ದೇವರ ಒಕ್ಕಲಿನವರು ಮರ ಕಡಿಯುವ ಆಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.