
ಚಳ್ಳಕೆರೆ: ನಗರದ ವಿವಿಧ ವಾರ್ಡ್‍ಗಳ ಒಳಚರಂಡಿ ನಿರ್ಮಾಣಕ್ಕೆ ₹198 ಕೋಟಿ ಮೊತ್ತದ ಯೋಜನೆಗೆ ಡಿ.4 ರಂದು ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಶಾಸಕ ಟಿ.ರಘುಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದಾಜು ₹72,000 ಜನಸಂಖ್ಯೆ ಹೊಂದಿರುವ ನಗರ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಜನರು ಮನೆಗೆ ಪಿಟ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲವರು ತ್ಯಾಜ್ಯ ನೀರನ್ನು ತೆರೆದ ಚರಂಡಿಗೆ ಬಿಡುತ್ತಿದ್ದು, ಇದರಿಂದ ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ದೊಡ್ಡ ಸವಾಲಾಗಿದೆ. ಈ ಕಾರಣಕ್ಕೆ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಹೊಸ ತಂತ್ರಜ್ಞಾನ ಅಳವಡಿಕೆ ಯೋಜನೆಯೊಂದಿಗೆ ₹226 ಕೋಟಿ ವೆಚ್ಚದ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ನೀರು ನಿರ್ವಹಣಾ ಘಟಕ ಸ್ಥಾಪಿಸಲು ಜೂ.25ರಂದು ₹15.16 ಕೋಟಿ ಮೊತ್ತದ ಯೋಜನೆಗೆ ಅನುಮತಿ ನೀಡಿತ್ತು. ಇನ್ನುಳಿದ ಕಾಮಗಾರಿ ಸೇರಿ ನಗರದ ಅಭಿವೃದ್ಧಿಗೆ ಒಟ್ಟು ₹213.16 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ಸಿಕ್ಕಿದೆ. ನಗರ ಪ್ರದೇಶದಲ್ಲಿ 170 ಕಿ.ಮೀ. ಸುತ್ತಳತೆಯಲ್ಲಿ ಒಳ ಚರಂಡಿ ನಿರ್ಮಿಸುವ ಮೂಲಕ 12,307 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಕೊಳವೆಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಅಗೆದ ರಸ್ತೆಯನ್ನು ದುರಸ್ತಿ ಮಾಡಿಸಲಾಗುವುದು. ಇಲ್ಲಿನ ರಹೀಂ ನಗರದ ಬಳಿ 12 ಮೀಟರ್ ವ್ಯಾಸ, ನಗರಂಗೆರೆ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ 6.5, ಪಾವಗಡ ರಸ್ತೆಯ ರೈಲ್ವೆ ನಿಲ್ದಾಣದಲ್ಲಿ 10 ಮತ್ತು ಬಳ್ಳಾರಿ ರಸ್ತೆಯ ವೆಂಕಟೇಶ್ವರ ನಗರದ ಬಳಿ 6 ಮೀಟರ್ ವ್ಯಾಸದ ಒಟ್ಟು 4 ವೆಟ್‍ವೆಲ್ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ವೆಟ್‍ವೆಲ್‍ಗಳಿಂದ ಮಲಿನ ನೀರು ಶುದ್ಧೀಕರಣ ಘಟಕದವರೆಗೂ 9.45 ಮೀಟರ್ ಉದ್ದದ ಡಿ.ಐ. ಏರು ಕೊಳವೆ ಮಾರ್ಗ ನಿರ್ಮಿಸಲಾಗುವುದು. 10 ಎಂಎಲ್‍ಡಿ ಸಾಮರ್ಥ್ಯದ ಎಸ್‍ಬಿಆರ್ ತಂತ್ರಜ್ಞಾನದಿಂದ ಕೊಳಚೆನೀರು ಶುದ್ಧೀಕರಣ ಘಟಕ ಸ್ಥಾಪನೆ ಮತ್ತು ನೀರನ್ನು ಪಂಪ್‍ಮಾಡಲು ಯಂತ್ರೋಪಕರಣ ಅಳವಡಿಸಲಾಗುತ್ತದೆ. ನಿರಂತರ ವಿದ್ಯುತ್ ಸಂಪರ್ಕಕ್ಕೆ 11.ಕೆ.ವಿ. ಸಾಮರ್ಥ್ಯದ ಪರಿವರ್ತಕ ಅಳವಡಿಸಲಾಗುವುದು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿದ್ದಾಗ ಒಳಚರಂಡಿ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ರಾಜ್ಯದಲ್ಲಿ ಬರ ಇದ್ದುದ್ದರಿಂದ ಸಾಧ್ಯವಾಗಲಿಲ್ಲ ಎಂದು ರಘುಮೂರ್ತಿ ತಿಳಿಸಿದರು.
ನಂತರ ಬಂದ ಬಿಜೆಪಿ ಸರ್ಕಾರ ಯೋಜನೆಗೆ ಅನುಮತಿ ನೀಡಲಿಲ್ಲ. ಗ್ಯಾರಂಟಿ ಯೋಜನೆಗಳ ನಡುವೆಯೂ ₹198 ಕೋಟಿ ವೆಚ್ಚದ ಒಳ ಚರಂಡಿ ಯೋಜನೆಗೆ ಒಪ್ಪಿಗೆ ನೀಡಿರುವುದಕ್ಕೆ ಕ್ಷೇತ್ರದ ಜನತೆಯ ಪರವಾಗಿ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದರು.
ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ತಾಂತ್ರಿಕ ಅನುಮತಿ ಬಳಿಕ ಕಾಮಗಾರಿ ನಡೆಸಲು ಟೆಂಡರ್ ಕರೆಯಲಾಗುವುದು ಎಂದು ಒಳ ಚರಂಡಿ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.