ADVERTISEMENT

ಸೃಜನಶೀಲ ಲೇಖಕರಿಗೆ ಭಾಷಾಂತರ ಬಲು ಮುಖ್ಯ: ಚನ್ನಪ್ಪ ಕಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:29 IST
Last Updated 15 ಅಕ್ಟೋಬರ್ 2025, 6:29 IST
ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ನಡೆದ ವಿಚಾಋ ಸಂಕಿರಣವನ್ನುಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಉದ್ಘಾಟಿಸಿದರು
ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ನಡೆದ ವಿಚಾಋ ಸಂಕಿರಣವನ್ನುಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಉದ್ಘಾಟಿಸಿದರು   

ಚಿತ್ರದುರ್ಗ: ‘ಸೃಜನಶೀಲ ಲೇಖಕರಿಗೆ ಭಾಷಾಂತರ ಬಲು ಮುಖ್ಯವಾಗಿದ್ದು ಪ್ರಾದೇಶಿಕ ತಿಳಿವಳಿಕೆಯನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುತ್ತದೆ. ಹೀಗಾಗಿ ಯುವ ಲೇಖಕರು ಅನುವಾದವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ನಡೆದ ‘ಭಾಷಾಂತರ ಪ್ರಸ್ತುತತೆ’ ಕುರಿತ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರನ್ನೂ ಒಂದೆಡೆ ಸೇರಿಸುವ ಶಕ್ತಿ ಅನುವಾದಕ್ಕಿದೆ. ಹಲವು ಸಂಸ್ಕೃತಿ, ಭಾಷೆ, ನಂಬಿಕೆ, ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯುವ ಶಕ್ತಿಯನ್ನು ಅನುವಾದ ನೀಡುತ್ತದೆ. ಶಬ್ದಗಳಿಗೆ ರೆಕ್ಕೆಗಳಿವೆ, ಹಾರುವ ಸಾಮರ್ಥ್ಯವೂ ಇದೆ. ಅನುವಾದಕರು ಮತ್ತು ಮೂಲಪಠ್ಯ ಎರಡೂ ಸೇರಿಕೊಂಡು ಜಗತ್ತಿನಾದ್ಯಂತ ಸಂಚಾರ ಮಾಡಲು ಸಾಧ್ಯವಿದೆ. ಕೇವಲ ಶಾಬ್ಧಿಕ ಅನುವಾದಗಳು ಅಷ್ಟೇ ಅಲ್ಲದೇ ಭಾಷಾಂತರ ವಿಶಾಲಾರ್ಥದಲ್ಲಿ ಮನುಷ್ಯನ ಎಲ್ಲ ಚಟುವಟಿಕೆಗಳು ಅನುವಾದಗಳೇ ಆಗಿವೆ’ ಎಂದರು.

ADVERTISEMENT

ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ, ಪ್ರಾಧಿಕಾರದ ಸದಸ್ಯ ಸಂಚಾಲಕ ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ‘ಭಾಷಾಂತರದ ವ್ಯಾಪ್ತಿ ಹಿರಿದು. ನಿತ್ಯ, ಪ್ರತಿಕ್ಷಣ ಅನುವಾದ ಆಗುತ್ತಲೇ ಇದೆ. ಎಲ್ಲರ ಗ್ರಹಿಕೆಗಳು ಒಂದು ರೀತಿಯಲ್ಲಿ ಅನುವಾದವೇ ಆಗಿವೆ. ಓದುವುದರಲ್ಲಿ, ಕೇಳುವುದರಲ್ಲಿ, ಮಾತಾಡುವುದರಲ್ಲಿಯೂ ಅನುವಾದವಿದೆ’ ಎಂದರು.

‘ಮೂಲಭಾಷೆಯ ಪಠ್ಯವನ್ನಾಧರಿಸಿ ರೂಪಿಸಿದ ಅನುವಾದಗಳು, ಮೂಲ ಪಠ್ಯವನ್ನು ಅನುಸರಿಸಿ, ಅಗತ್ಯಕ್ಕೆ ತಕ್ಕಂತೆ ಅನುಸೃಷ್ಟಿ ಮಾಡಲು ಸಾಧ್ಯವಿದೆ. ಮೂಲ ಪಠ್ಯದ ಹೂರಣವನ್ನು ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಪೂರಕವಾಗಿ ಬದಲಾಯಿಸಿಕೊಂಡ ರೂಪಾಂತರಗಳು ಯಾವ ಭಾಷಾಂತರದಲ್ಲೂ ಶ್ರೇಷ್ಠ ಕನಿಷ್ಠ ಎಂಬ ತಾರತಮ್ಯ ಇರುವುದಿಲ್ಲ’ ಎಂದರು.

ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯುಎಸಿ ಸಂಚಾಲಕಿ ಆರ್.ತಾರಿಣಿ ಶುಭದಾಯಿನಿ ಮಾತನಾಡಿ ‘ಪ್ರತಿ ಭಾಷೆಗೂ ತನ್ನದೇಯಾದ ಅನನ್ಯತೆ ಇದೆ. ಭಾಷಾಂತರ ಮಾಡಿದ ಸಂದರ್ಭದಲ್ಲಿ ಭಾಷೆಯ ಯಾವ ಗುಣವನ್ನಿಟ್ಟುಕೊಂಡು ಭಾಷಾಂತರಕ್ಕೆ ತೊಡಗುತ್ತದೆ ಎಂಬುವುದು ತುಂಬಾ ಮುಖ್ಯ. ಭಾಷಾಂತರ ಮಾಡುತ್ತಾ ಮಾಡುತ್ತಾ ಹೋದಂತೆ ನಾವು ನಮ್ಮದೇಯಾದ ಪ್ರತಿ ಸೃಷ್ಟಿ, ಸೃಜನಶೀಲವಾದ ಸಾಧ್ಯತೆ ಒಳಗೊಂಡಿರುತ್ತದೆ’ ಎಂದರು.

ವಿಮರ್ಶಕ ಕೆ.ಕೇಶವ ಶರ್ಮ ವಿಷಯ ಮಂಡನೆ ಮಾಡಿ ‘ಭಾಷಾಂತರ ಎಂದರೆ ಭಯಪಡುವ ಅಗತ್ಯವಿಲ್ಲ. ಸಾಂಸ್ಕೃತಿಕ ಗ್ರಹಿಕೆಯಿಲ್ಲದೆ ಪ್ರತಿ ಪದವನ್ನು, ವಾಕ್ಯವನ್ನು ಅನುವಾದ ಮಾಡುವ ಜಡತ್ವವನ್ನು ಕೆಲವರು ಸೃಷ್ಟಿಸಿದ್ದಾರೆ. ಒಂದಿಷ್ಟು ಕೌಶಲ, ಸೂಕ್ಷ್ಮಗಳನ್ನು ಅರಿತು ಆನಂದಿಸುತ್ತಾ ಅದನ್ನು ಓದುಗನಿಗೆ ಸರಳವಾಗಿ ತಲುಪಿಸುವ ಕಾರ್ಯವನ್ನು ಭಾಷಾಂತರದಲ್ಲಿ ಮಾಡಬಹುದು’ ಎಂದರು.

‘ಸಾಮಾಜಿಕ, ಭಾಷಿಕ ಒತ್ತಡದಿಂದ ರೂಪುಗೊಳ್ಳುವ ಅನುವಾದ ಒತ್ತಡ ಸೂಚಕವಾಗಿ ಬಲವಂತದ ಹೇರಿಕೆ ಆಗಿರುತ್ತದೆ. ಒಂದು ಕಥೆ ಓದಿದ ಮೇಲೆ ನಿಮ್ಮಲ್ಲಿ ಮೂಡುವ ಭಾವಕ್ಕೆ ಒಂದು ಭಾಷೆ ಇರುತ್ತದೆ. ಅದನ್ನೇ ನೀವು ಅಂದುಕೊಂಡ ಭಾಷೆಗೆ ಸಾಂಸ್ಕೃತಿಕ ಗ್ರಹಿಕೆ ಮೂಲಕ ಬದಲಾಯಿಸುವ ಕೆಲಸ ಮಾಡಬೇಕು’ ಎಂದರು.

ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಜಿ.ಎಚ್. ನಾಗವರ್ಮ, ಪರೀಕ್ಷಾ ನಿಯಂತ್ರಕ ಬಿ.ಸುರೇಶ್, ಸಹಾಯಕ ಪ್ರಾಧ್ಯಾಪಕ ಕೆ.ಮಂಜುನಾಥ್, ರಾಮಲಿಂಗಪ್ಪ ಟಿ.ಬೇಗೂರು, ಎಸ್.ಗಂಗಾಧರಯ್ಯ, ಕೆ.ಚಿತ್ತಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.