ADVERTISEMENT

ಮೈನಿಂಗ್‌ ಮಾಫಿಯಾಗಳ ಜೊತೆ ಮುಖ್ಯಮಂತ್ರಿ ಶಾಮೀಲು: ಚೇತನ್‌ ಅಹಿಂಸಾ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:00 IST
Last Updated 23 ಜನವರಿ 2026, 7:00 IST
ಭೀಮಸಮುದ್ರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು 
ಭೀಮಸಮುದ್ರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು    

ಸಿರಿಗೆರೆ: ‘ಗಣಿಗಾರಿಕೆ ವಿರುದ್ಧ ಸೆಡ್ಡುಹೊಡೆದು ಅಂದು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಅವರು ಇಂದು ಮೈನಿಂಗ್ ಮಾಫಿಯಾಗಳ ಜತೆ ಕೈಜೋಡಿಸಿರುವಂತೆ ಕಾಣುತ್ತಿದೆ’ ಎಂದು ಹೋರಾಟಗಾರ, ಚಿತ್ರನಟ ಚೇತನ್ ಅಹಿಂಸಾ ಆರೋಪಿಸಿದರು.

ಸಮೀಪದ ಭೀಮಸಮುದ್ರದ ತರಳಬಾಳು ಕಲ್ಯಾಣ ಮಂಟಪದಲ್ಲಿ ರೈತ ಸಂಘಟನೆ, ಗಣಿಬಾಧಿತ ಹೋರಾಟ ಸಮಿತಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಹೋರಾಟ ಸಮಿತಿ, ಮಹಿಳಾ ಹಕ್ಕುಗಳ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗಣಿಗಾರಿಕೆಯಿಂದ ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ. ಗಣಿಗಾರಿಕೆ ಕಂಪನಿಗೆ ಸಿಗುವ ಪರವಾನಗಿಗಳನ್ನು ಏಕಗವಾಕ್ಷೆ ಎಂದು ಮಾಡಿ ಅವರಿಗೆ ಎಲ್ಲವೂ ಒಂದೇ ಕಡೆ ಸುಲಭವಾಗಿ ಸಿಗುವ ಹಾಗೆ ಮಾಡಿದ್ದಾರೆ. ಭೀಮಸಮುದ್ರದಲ್ಲಿ ಗಣಿ ಲಾರಿಗಳು ಗ್ರಾಮದ ಒಳಗಡೆ ಓಡಾಡುವುದರಿಂದ ಇಲ್ಲಿನ ಜನರಿಗೆ ಬಹಳಷ್ಟು ಆರೋಗ್ಯ ಸಮಸ್ಯೆ ಕಂಡು ಬಂದಿದೆ’ ಎಂದು ದೂರಿದರು.

ADVERTISEMENT

ಇತಿಹಾಸ ಸಂಶೋಧಕ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ, ‘ಗಣಿ ಕಂಪನಿಗಳಿಂದ ಶಬ್ಧ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಆಗುತ್ತಿದೆ. ಪ್ರಾಣಿ–ಪಕ್ಷಿಗಳು ಜಾಗ ಹುಡುಕುವ ಪರಿಸ್ಥಿತಿ ಬಂದಿದೆ. ಭೀಮಸಮುದ್ರದಲ್ಲಿ ಗಣಿ ಲಾರಿಗಳ ದೂಳಿನಿಂದ ಜನರು ಬೇರೆ ಕಡೆ ಹೋಗುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, ‘ಲಾರಿಗಳನ್ನು ಗ್ರಾಮದ ಒಳಗಡೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಹಾಗೇನಾದರೂ ಲಾರಿಗಳು ಗ್ರಾಮದಲ್ಲಿ ಓಡಾಡಿದರೆ ನಾವು ಹೋರಾಟ ನಿಲ್ಲಿಸುವುದಿಲ್ಲ’ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಹಂಪಯ್ಯನಮಳಿಗೆ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ ಮಲ್ಲಾಪುರ, ಸಂಘಟನಾ ಕಾರ್ಯದರ್ಶಿ ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ಸರ್ವೋದಯ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ, ಕರ್ನಾಟಕ ಗಣಿಬಾಧಿತ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿದುರ್ಗ ರಮೇಶ್, ಭೀಮಸಮುದ್ರ ಗ್ರಾಮದ ರೈತ ಸಂಘಟನೆ ಅಧ್ಯಕ್ಷ ಶಂಕರಮೂರ್ತಿ, ಉಪಾಧ್ಯಕ್ಷ ಪೂರ್ಯನಾಯ್ಕ, ಸದಸ್ಯರಾದ ಕುಮಾರ್, ಶಿವಕುಮಾರ್, ಮಹೇಶ್ವರಪ್ಪ, ನಿರಂಜನ್, ನಾಗರಾಜ್ ನಾಯಕ, ಮತ್ತಿತತರು ಭಾಗವಹಿಸಿದ್ದರು.

ಇದಕ್ಕೂ ಮೊದಲು ಗ್ರಾಮದ ಈಶ್ವರ ದೇವಸ್ಥಾನದಿಂದ ರೈತರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಗಣಿ ಕಂಪನಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭೀಮಸಮುದ್ರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು
ಭೀಮಸಮುದ್ರದ ಈಶ್ವರ ದೇವಸ್ಥಾನದಿಂದ ರೈತರು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಗಣಿ ಕಂಪನಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.