
ಚಿತ್ರದುರ್ಗ: ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಕಡಲೆ ಕೆಲ ದಿನಗಳಿಂದ ಎಪಿಎಂಸಿಗೆ ಆವಕವಾಗುತ್ತಿದೆ. ಆದರೆ, ಕಳೆದ ಬಾರಿ ಕ್ವಿಂಟಲ್‌ಗೆ ಸರಾಸರಿ ₹ 7,556 ಬೆಲೆಗೆ ಮಾರಾಟವಾಗಿದ್ದ ಕಡಲೆ ದರ ಇದೀಗ ₹ 3,847ಕ್ಕೆ ಕುಸಿದಿದೆ.
‘ಮುಂಗಾರು ಬೆಳೆ ಕೈಕೊಟ್ಟರೂ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಕೈಹಿಡಿಯಬಹುದು’ ಎಂಬ ಕೃಷಿಕರ ನಿರೀಕ್ಷೆ ಹುಸಿಯಾಗಿದೆ.
ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಮಳೆ ಕೈಕೊಟ್ಟ ಕಾರಣ ಕಡಲೆ ಬೆಳೆ ತೀವ್ರ ಹಾನಿಗೊಳಗಾಗಿದೆ. ಜಿಲ್ಲೆಯಲ್ಲಿ ಅಂದಾಜು 55,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಕಡಲೆ ಬೆಳೆ ತೀವ್ರ ನಷ್ಟಕ್ಕೊಳಗಾಗಿ ಕೇವಲ 39,500 ಹೆಕ್ಟೇರ್ ಪ್ರದೇಶದಲ್ಲಿ ರೈತರ ಕೈಗೆಟುಕಿದೆ.
‘ಕಳೆದ ಹಂಗಾಮಿನಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆ ಅಡಿ ಪ್ರತಿ ಕ್ವಿಂಟಲ್ ಕಡಲೆಗೆ ₹ 5,400 ಬೆಲೆ ನಿಗದಿಯಾಗಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕಡಲೆಗೆ, ಕ್ವಿಂಟಲ್‌ಗೆ ಗರಿಷ್ಠ ₹ 8,800ರವರೆಗೂ ದರ ದೊರೆತಿತ್ತು. ಈ ಬಾರಿ ಅದಕ್ಕೆ ಹೋಲಿಸಿದರೆ ಅರ್ಧದಷ್ಟು ಬೆಲೆಯೂ ಇಲ್ಲದ ಕಾರಣ ನಮ್ಮ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ’ ಎಂದು ರೈತರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಈವರೆಗೆ 71,992 ಕ್ವಿಂಟಲ್ ಕಡಲೆ ಸ್ಥಳೀಯ ಎಪಿಎಂಸಿಗೆ ಆವಕವಾಗಿದೆ. ಆಂಧ್ರಪ್ರದೇಶದ ರಾಯದುರ್ಗ, ತುಮಕೂರು ಜಿಲ್ಲೆಯ ಪಾವಗಡ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ಕಡೆಯಿಂದಲೂ ರೈತರು ಇದೇ ಮಾರುಕಟ್ಟೆಗೆ ಕಡಲೆ ತರುತ್ತಿರುವ ಕಾರಣ ಆವಕದಲ್ಲಿ ಕೊರತೆಯಾಗಿಲ್ಲ.
ಜಿಲ್ಲೆಯಾದ್ಯಂತ 2024–25ನೇ ಸಾಲಿನಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿತ್ತು. ಬೆಲೆ ಕುಸಿತ ಹಿನ್ನಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಕ್ವಿಂಟಲ್‌ಗೆ ₹ 7,000 ನಿಗದಿ ಮಾಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ಈ ವರ್ಷ ಶೇ 50ರಷ್ಟು ಇಳುವರಿ ತಗ್ಗಿದೆ. ಇಳುವರಿ ಕಡಿಮೆಯಾದಾಗ ಬೆಲೆ ಹೆಚ್ಚಾಗುತ್ತದೆ. ಈ ಬಾರಿ ಬೆಲೆಯೂ ಕುಸಿದಿದೆ. ಸರ್ಕಾರ ಸಕಾಲಕ್ಕೆ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ನಷ್ಟ ಅನುಭವಿಸುವಂತಾಗಿದೆ’ ಎಂದು ತಾಲ್ಲೂಕಿನ ರೈತ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಕ್ವಿಂಟಲ್‌ಗೆ ₹ 5845 ಬೆಲೆ ನಿಗದಿ ಮಾಡಲಾಗಿದೆ. 12 ಕಡೆ ಖರೀದಿ ಕೇಂದ್ರ ತೆರೆದು ಕಡಲೆಕಾಳು ಖರೀದಿ ಮಾಡಲಾಗುವುದುಕೆ.ಚೈತ್ರಾ ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕಿ
ನೋಂದಣಿ ಪ್ರಕ್ರಿಯೆ ಪ್ರಾರಂಭ
ರಾಜ್ಯ ಸಹಕಾರ ಮಾರಾಟ ಮಂಡಳದಿಂದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು ಆಧಾರ್ ಕಾರ್ಡ್ ಬಳಸಿ ಬಯೋಮೆಟ್ರಿಕ್ ಮೂಲಕ ಹೆಸರು ನೋಂದಣಿ ಮಾಡಿಸಬೇಕು. ಸರ್ಕಾರದ ಆದೇಶದಂತೆ ಪ್ರತಿ ಕ್ವಿಂಟಾಲ್‍ಗೆ ₹ 5845ರಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ಗರಿಷ್ಟ 40 ಕ್ವಿಂಟಾಲ್ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಸಿಎಂಎಫ್ ಶಾಖಾ ವ್ಯವಸ್ಥಾಪಕ ಬಸವೇಶ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.