ADVERTISEMENT

ಚಿತ್ರದುರ್ಗ | ಬಾಲ್ಯವಿವಾಹ ಹೆಚ್ಚಾದರೆ ಕಠಿಣ ಕಾನೂನು ಕ್ರಮ: ಡಿ.ಸುಧಾಕರ್‌

ಎಂ.ಎನ್.ಯೋಗೇಶ್‌
Published 25 ಜನವರಿ 2026, 7:45 IST
Last Updated 25 ಜನವರಿ 2026, 7:45 IST
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಶನಿವಾರ ಬಾಲ್ಯವಿವಾಹ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿದರು
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ಶನಿವಾರ ಬಾಲ್ಯವಿವಾಹ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿದರು   

ಚಿತ್ರದುರ್ಗ: ‘ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಕೆ ನೀಡಿದರು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಆಶ್ರಿತ ಸಂಸ್ಥೆ ವತಿಯಿಂದ ಶನಿವಾರ ಆರಂಭವಾದ ಬಾಲ್ಯವಿವಾಹ ನಿಷೇಧ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಾಲ್ಯವಿವಾಹ ಪದ್ಧತಿ ಸಮಾಜಕ್ಕೆ ಮಾರಕವಾಗಿದೆ. ಇದನ್ನು ತೊಡೆದು ಹಾಕಲು ವಿವಿಧ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಸ್ಥೆಗಳ ಕಾರ್ಯಕ್ಕೆ ಇಲಾಖೆಗಳು ಸಹಕಾರ ನೀಡಬೇಕಿದೆ. ಅಧಿಕಾರಿಗಳು, ಪೊಲೀಸರು ಕೂಡ ಇಂತಹ ಕಾರ್ಯಕ್ರಮಗಳಿಗೆ ಸಹಾಯ ಮಾಡಬೇಕು. ಮಕ್ಕಳನ್ನು ಬಾಲ್ಯವಿವಾಹದಿಂದ ಸಂರಕ್ಷಿಸಲು ಜಾಗೃತಿ ಅತ್ಯಾವಶ್ಯಕವಾಗಿದೆ’ ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ ‘ಬಾಲ್ಯವಿವಾಹ ಅನಿಷ್ಟ ಪದ್ಧತಿ ಕೇಂದ್ರ ಸರ್ಕಾರ ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದೆ. ರಾಜ್ಯ ಸರ್ಕಾರವು ಈ ಕಾರ್ಯದಲ್ಲಿ ಸ್ಪಂದಿಸುತ್ತಿದೆ. ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳ ಜನರು ಮಕ್ಕಳಿಗೆ ಮದುವೆ ಮಾಡುವ ಕೆಲಸ ಮಾಡುತ್ತಾರೆ. ಅವರಿಗೆ ಸರಿಯಾಗಿ ಬುದ್ಧಿ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಬಾಲ್ಯವಿವಾಹ ತಡೆಯಬೇಕು’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿ ಬಾಲ್ಯವಿವಾಹ ನಿಲ್ಲಬೇಕಾದರೆ ತಳಮಟ್ಟದ ಅಧಿಕಾರಿಗಳು ಜಾಗೃತರಾಗಿರಬೇಕು. ಶಾಲಾ ಶಿಕ್ಷಕರು ಈ ಬಗ್ಗೆ ನಿಗಾ ವಹಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಲಾ ಶಿಕ್ಷಕರು ಎಚ್ಚರ ವಹಿಸಬೇಕು. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯರ ಮದುವೆಯನ್ನು ತಡೆಯಬೇಕು’ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾಂಗ್ರೆಸ್ ಮುಖಂಡ ಡಿ.ಎನ್.ಮೈಲಾರಪ್ಪ, ಆಶ್ರಿತ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕ ಪರ್ವತಾಲು, ಕೋಶಾಧಿಕಾರಿ ಎಸ್.ತಾತರಾಜ್, ಲಲಿತಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ, ಸಾಹಿತಿ ಆನಂದ್ ಕುಮಾರ್, ಪರಿವರ್ತನಾ ಸಂಸ್ಥೆ ಕಲ್ಲೇಶ್, ಪೀಪಲ್ ಸಂಸ್ಥೆ ಎಲ್. ಮಂಜುನಾಥ್ ಇದ್ದರು.

ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪಣ ಗ್ರಾಮೀಣ ಭಾಗದಲ್ಲಿ ಜಾಗೃತಿ ಕಾರ್ಯಕ್ರಮ ಬಾಲ್ಯವಿವಾಹದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.