
ಚಿತ್ರದುರ್ಗ (ತತ್ವಪದಕಾರ ಲಿಂಗಯ್ಯ ವೇದಿಕೆ): ‘ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸುವ ನಿರ್ಣಯಗಳನ್ನು ಸರ್ಕಾರ ಅಂಗೀಕರಿಸಿ ಜಾರಿಗೊಳಿಸಬೇಕು. ಈ ಮೂಲಕ ಸಮಾಜದ ಅಭ್ಯುದಯಕ್ಕೆ, ಭಾಷಾ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಆಗ್ರಹಿಸಿದರು.
ನಗರದ ಜಿ.ಜಿ. ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ನಡೆದ ಜಿಲ್ಲಾ ಮಟ್ಟದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಸಮಾರೋಪ ಭಾಷಣ ಮಾಡಿದರು.
‘ಬಹುತೇಕ ಸಂದರ್ಭದಲ್ಲಿ ನಿರ್ಣಯಗಳನ್ನು ಸರ್ಕಾರ ಅಂಗೀಕರಿಸುವುದಿಲ್ಲ. ಆದರೆ, ನಾಡಿನ ಅಭ್ಯುದಯಕ್ಕೆ ಶ್ರಮಿಸುವ ಸಾಹಿತಿಗಳು ಸಮಾಜದ ಕಣ್ಣುಗಳಿದ್ದಂತೆ. ಇಂತಹ ಮನಸಾಕ್ಷಿ ಹೊಂದಿರುವ ಸಮಾನ ಮನಸ್ಕರರು ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರಗಳು ಅಂಗೀಕರಿಸಿ ಜಾರಿಗೊಳಿಸಬೇಕು’ ಎಂದರು.
‘ಜಿಲ್ಲೆಯ ಜೀವಾಳವಾದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಜನಪ್ರತಿನಿಧಿಗಳು, ಚಿಂತಕರು, ಹೋರಾಟಗಾರರು, ಮಹಿಳೆಯರು ಪಕ್ಷಾತೀತವಾಗಿ ಹೋರಾಡಬೇಕು. ಕೇಂದ್ರ ಸರ್ಕಾರ ಹೇಳಿರುವಂತೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ಈಗಾಗಲೇ ಯೋಜನೆ ಒಂದು ಹಂತದಲ್ಲಿ ಅನುಷ್ಠಾನಗೊಂಡಿದೆ. ಇನ್ನೂ ಹೆಚ್ಚಿನ ಕಾಮಗಾರಿ ನಡೆಯಬೇಕು. ಬಜೆಟ್‌ನಲ್ಲಿ ಘೋಷಿಸಿದಂತೆ ಅನುದಾನ ನೀಡಬೇಕು. ಈ ಮೂಲಕ ಜಿಲ್ಲೆಯ ಕೂಗಿಗೆ ಸ್ಪಂದಿಸಬೇಕು’ ಎಂದರು.
‘ಕವಿ, ಸಾಹಿತಿಗಳು ಸಮಾಜದ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಆದ್ದರಿಂದ ಕಲ್ಪನಾ ವಿಲಾಸ ಸಾಹಿತ್ಯದ ಬದಲಿಗೆ ಜನಮುಖಿ ಸಾಹಿತ್ಯವನ್ನು ಸಾಹಿತಿಗಳು ಕಟ್ಟಬೇಕು. ಸಾಹಿತಿ ಸಮಸಮಾಜದ ಸದಸ್ಯ. ವಿವಿಧ ವರ್ಗ, ಜಾತಿ, ಸಮುದಾಯಗಳ ಪ್ರಾತಿನಿಧ್ಯ ವಂಚಿತರ ಬಗ್ಗೆ ಧ್ವನಿ ಎತ್ತಬೇಕು. ಅವಕಾಶಗಳು ಸಿಗುವಂತೆ ಪ್ರಭುತ್ವವನ್ನು ಎಚ್ಚರಿಸಬೇಕು’ ಎಂದು ತಿಳಿಸಿದರು.
‘ವಿಜ್ಞಾನ ವಾಣಿಜ್ಯ, ಸಂಶೋಧನಾ ಕ್ಷೇತ್ರದ ಅಭಿವೃದ್ಧಿ, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಬಗ್ಗೆ ಚಿಂತಿಸುವ ರಾಜಕೀಯ ನಾಯಕರಿಗೆ ಶಕ್ತಿ ತುಂಬುವ ಕೆಲಸವನ್ನು ಸಾಹಿತಿಗಳು ಮಾಡಬೇಕು. ಕುವೆಂಪು ಅವರು ಆಶಿಸಿದ ಅಧ್ಯಾತ್ಮದ ಪರಿಕಲ್ಪನೆಯಲ್ಲಿ ಸೌರ್ಹಾಧತೆ ಸಾರುವ ಸೋದರತ್ವದ ಧರ್ಮಗಳು, ಧಾರ್ಮಿಕ ಚಿಂತನೆಗಳನ್ನು ಸಾಹಿತಿಗಳು ಹುಟ್ಟುಹಾಕಬೇಕು’ ಎಂದರು.
‘ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಜಾಗೃತ ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ಕನ್ನಡ ಅವರು ನೀಡಿದಷ್ಟು ಪ್ರೋತ್ಸಾಹ ಯಾವುದೇ ಮುಖ್ಯಮಂತ್ರಿ ನೀಡಿಲ್ಲ. ಈ ಕಾರ್ಯ ಇಂದಿಗೂ ಮುಂದುವರೆಯುತ್ತಿದೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದರು.
ಸಮ್ಮೇಳನಾಧ್ಯಕ್ಷೆ ಕೆ.ಆರ್. ಸಂಧ್ಯಾರೆಡ್ಡಿ ಅವರಿಗೆ ಬಾಗಿನ ನೀಡುವ ಮೂಲಕ ಗೌರವಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಲ್. ಪ್ರಶಾಂತ್, ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ್, ನಿರ್ದೇಶಕರಾದ ಪ್ರತಾಪ್ ಜೋಗಿ, ರಜನಿ ಲೇಪಾಕ್ಷ ಇದ್ದರು.
ಕಲೆ, ಸಾಹಿತ್ಯಕ್ಕೆ ಮಠಗಳ ಕೊಡುಗೆ ಅಪಾರ: ‘ನಾಡಿನ ಮಠಗಳು ಆಧ್ಯಾತ್ಮ, ಶಿಕ್ಷಣ, ತ್ರಿವಿಧ ದಾಸೋಹ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿವೆ. ಒಂದೊಂದು ವಿಷಯಕ್ಕೂ ಒಂದೊಂದು ಮಠ ರಾಯಭಾರಿಯಾಗಿ ಗುರುತಿಸಿಕೊಂಡಿದೆ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
‘ಮಠ ಮಾನ್ಯಗಳ ಸಾಂಸ್ಕೃತಿಕ ಅನನ್ಯತೆ ಗೋಷ್ಠಿಯಲ್ಲಿ ‘ಕಲೆ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿ ಮಠಗಳು’ ವಿಷಯಾವಲೋಕನ ಮಾಡಿದ ಅವರು, ‘ಹಿಮಾಲಯ ಪರ್ವತ ಇಲ್ಲದ ಭೂಪಟ, ಮಠಗಳಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ನೆಲದ ಮಠಗಳು ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ’ ಎಂದರು.
‘ರಾಜ್ಯದ ಹೃದಯ ಭಾಗವಾಗಿರುವ ಚಿತ್ರದುರ್ಗ ಕಲೆ, ಸಾಹಿತ್ಯ, ಸಂಸ್ಕೃತಿಯ ತೊಟ್ಟಿಲಾಗಿದೆ. ಮಠಗಳು ನೆಲೆ ಗೊಂಡಿರುವ ಪ್ರದೇಶದಲ್ಲಿ ಪರಿಷತ್, ಸಂಸ್ಥೆಗಳಿಂತ ಒಂದು ಪಟ್ಟು ಹೆಚ್ಚಾಗಿ ನಾಡಿನ ಕನ್ನಡದ ಕೆಲಸ ಮಾಡಿವೆ. ಸಂಶೋಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿವೆ. ಜತೆಗೆ ಸರಣಿ ಮಾಲಿಕೆ ಪ್ರಕಟಿಸಿವೆ’ ಎಂದು ತಿಳಿಸಿದರು.
‘ಸಾಹಿತ್ಯ ಮತ್ತು ಜಿಲ್ಲೆಯ ಮಠ ಮಾನ್ಯಗಳು’ ವಿಷಯ ಕುರಿತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ಮಾತನಾಡಿದರು.
‘ಅನೇಕ ವರ್ಷಗಳಿಂದಲೂ ಕುವೆಂಪು, ಬೇಂದ್ರೆ ಅವರನ್ನೇ ಓದುತ್ತಿದ್ದೇವೆ. ಆದರೆ, ಹೊಸ ಕಾವ್ಯ ಸೃಷ್ಠಿಸುವಲ್ಲಿ ವಿಫಲರಾಗುತ್ತಿದ್ದೇವೆ. ಹೊಸ ತಲೆಮಾರು ಯಾರನ್ನೂ ಓದಬೇಕೆಂಬ ಪ್ರಶ್ನೆ ಎದುರಾಗಿದೆ’ ಎಂದರು. ‘ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಹೆಚ್ಚಾಗಬೇಕು. ಮೇರು ಕವಿ, ಸಾಹಿತಿಗಳ ಸಾಹಿತ್ಯದ ಹಾದಿಯಲ್ಲಿ ಹೆಜ್ಜೆ ಹಾಕುವಂತೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಕಾರ್ಯ ಆಗಬೇಕಿದೆ. ಈ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ತಿಳಿಸಿದರು.
‘ಬುದ್ಧನ ನಂತರ ಬಸವಣ್ಣ, ಬಳಿಕ ರಾಜ್ಯದ ಮಠಗಳು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿವೆ. ಸ್ವಾತಂತ್ರ್ಯ ಭಾರತಕ್ಕೂ ಮುಂಚಿತವಾಗಿಯೇ ಪ್ರಜಾಪ್ರಭುತ್ವದ ಆಶಯಗಳನ್ನು ಪಾಲಿಸಿಕೊಂಡು ಬಂದಿವೆ. ವೈಜ್ಞಾನಿಕ, ಆಧುನಿಕ ಚಿಂತನೆ ತಳಹದಿಯಲ್ಲಿ ನಾಡಿನ ಮಠಗಳು ಅಪಾರ ಸೇವೆ ಸಲ್ಲಿಸುತ್ತಿವೆ’ ಎಂದು ಚಿಂತಕ ವೇದಾಂತ ಏಳಂಜಿ ತಿಳಿಸಿದರು.
‘ಎಲ್ಲ ವರ್ಗದ ಜನರಿಗೆ ಅಕ್ಷರ, ಅನ್ನ, ಜ್ಞಾನ ದಾಸೋಹ ನೀಡುವ ಮೂಲಕ ಸಮಾಜದಲ್ಲಿ ಕ್ರಾಂತಿಯನ್ನೇ ಮಾಡಿದ್ದು, ಶೂದ್ರರಿಗೆ ಜೀವಕೋಶಕವನ್ನೇ ನೀಡಿವೆ. ಜ್ಞಾನದ ಅರಿವು-ಕಾಯಕ ತತ್ವಾದರ್ಶಗಳ ಮೂಲಕ ಸಾಮಾಜಿಕ ಪರಿವರ್ತನೆಗಳಲ್ಲಿ ಮಠಗಳ ಕೆಲಸ ಮಾದರಿ’ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್ ಇದ್ದರು.
ಜಿಲ್ಲೆಯ ಕನ್ನಡದ ಅಸ್ಮಿತೆಯಾಗಿರುವ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಹಾಗೇ ಕನ್ನಡ ಕಟ್ಟುವ ಕೆಲಸಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ಪೂರಕವಾಗಿ ಸ್ಪಂದಿಸಬೇಕು.ಬಂಜಗೆರೆ ಜಯಪ್ರಕಾಶ್ ಚಿಂತಕ
ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಪಕ್ಷಾತೀತವಾಗಿ ಹೋರಾಟ ನಡೆಸಲು ನಾವು ಸಿದ್ಧರಿದ್ದೇವೆ. ಈ ಕಾರ್ಯಕ್ಕೆ ಸಂಸದ ಗೋವಿಂದ ಕಾರಜೋಳ ಸಂಪೂರ್ಣವಾಗಿ ಕೈಜೋಡಿಸಲು ಜನರು ಒತ್ತಾಯಿಸಬೇಕು.ಎಚ್.ಆಂಜನೇಯ ಮಾಜಿ ಸಚಿವ
ಜಿಲ್ಲೆಯ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುದಾನ ಮಂಜೂರು ಮಾಡಿ ತ್ವರಿತವಾಗಿ ಪೂರ್ಣಗೊಳಿಸಬೇಕು.
ಸಾಹಿತ್ಯಾಸಕ್ತರ ದಶಕಗಳ ಬೇಡಿಕೆಯಾದ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾ ಸಚಿವರು 2 ಕೋಟಿ ಅನುದಾನದ ಭರವಸೆ ನೀಡಿದ್ದಕ್ಕೆ ಅಭಿನಂದನೆಗಳು. ತಕ್ಷಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಚಿತ್ರದುರ್ಗ ನಗರದಲ್ಲಿ ನಾಮಫಲಕಗಳ ನಿಯಮಾವಳಿಯಂತೆ 60:40 ಅನುಪಾತದ ಅನುಷ್ಠಾನಕ್ಕೆ ನಗರಸಭೆ ಕ್ರಮ ವಹಿಸಬೇಕು.
ಜಿಲ್ಲೆಯ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
ಬ್ಯಾಂಕ್ ರೈಲ್ವೆ ಸೇರಿದಂತೆ ರಾಜ್ಯ ಮತ್ತು ಕೇಂದ್ರದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು.
‘ಪ್ರಸ್ತುತ ವರ್ಷಕ್ಕೆ ಎಂಟು ಸಾವಿರ ಪುಸ್ತಕಗಳು ಹೊರಬರುತ್ತಿವೆ. ಆದರೆ ಓದುವ ಆಸಕ್ತಿ ಕ್ಷೀಣಿಸುತ್ತಿದೆ’ ಎಂದು ಕರ್ನಾಟಕ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಬೇಸರಿಸಿದರು. ಪುಸ್ತಕೋದ್ಯಮ ಮತ್ತು ಕನ್ನಡ ಭಾಷಾಭಿವೃದ್ಧಿ ಗೋಷ್ಠಿಯಲ್ಲಿ ಪುಸ್ತಕೋದ್ಯಮ ವಿಷಯ ಕುರಿತು ಮಾತನಾಡಿದರು. ‘ನಾಡು ನುಡಿ ಗಡಿ ಜನ ಭಾಷೆಯ ಮೇಲಿನ ಪ್ರೀತಿಯಂತೆ ಪ್ರತಿಯೊಬ್ಬರೂ ಪುಸ್ತಕದ ಮೇಲೆ ಅಭಿಮಾನವಿಡಬೇಕು. ಆಗ ಮಾತ್ರ ಪುಸ್ತಕದ ಜತೆ ಸಾಹಿತ್ಯದ ಉಳಿವು ಸಾಧ್ಯ’ ಎಂದರು.
‘ಮಾಧ್ಯಮ ಮತ್ತು ಜಾಲತಾಣಗಳ ಮೂಲಕ ಪುಸ್ತಕಗಳ ಬಗ್ಗೆ ಪರಿಚಯಾತ್ಮಕ ಮಾಹಿತಿ ಬಿತ್ತರಿಸಬೇಕು. ಕನ್ನಡ ಪುಸ್ತಕೋದ್ಯಮಕ್ಕೆ ಸಹಾಯಧನ ಲಭಿಸುತ್ತಿಲ್ಲ. ಕಾರಣ ಪುಸ್ತಕ ಪ್ರಕಾಶಕರಲ್ಲಿ ಒಗ್ಗಟ್ಟಿಲ್ಲ. ಇದು ಬದಲಾಗದಿದ್ದರೆ ಭವಿಷ್ಯ ಕರಾಳವಾಗಲಿದೆ’ ಎಂದು ಎಚ್ಚರಿಸಿದರು. ಓದುಗರ ಸಮಸ್ಯೆ ಮತ್ತು ಪರಿಹಾರ ಕುರಿತು ಮಾತನಾಡಿದ ಪ್ರಕಾಶಕ ಜಿ.ಬಿ.ಟಿ. ಮೋಹನ್ ‘ಬದಲಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರಗಳಿಂದ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಸಂಪ್ರಾದಾಯಿಕ ಓದುಗರು ಕಣ್ಮರೆಯಾಗುತ್ತಿದ್ದಾರೆ’ ಎಂದು ಬೇಸರಿಸಿದರು.
‘ಸರ್ಕಾರಗಳು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಓದುಗರಿಗೆ ಮಂಡಲ್ ಗ್ರಂಥಾಲಯಗಳನ್ನು ಪುನರ್ ಸ್ಥಾಪಿಸಬೇಕು. ಗ್ರಂಥಾಲಯಗಳಿಗೆ ಅನುದಾನ ನೀಡಿ ಓದುಗರ ಸಂಖ್ಯೆಯನ್ನು ಹೆಚ್ಚಿಸಬೇಕು. ಪುಸ್ತಕೋದ್ಯಮಕ್ಕೆ ಅಗತ್ಯ ನೆರವು ನೀಡಬೇಕು’ ಎಂದರು. ‘ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣ ವ್ಯಸನವಾಗಿದೆ. ಓದುಗರಿಗೆ ವಿನಯಶೀಲತೆ ಬೇಕು. ಪುಸ್ತಕ ಓದು ಗೌರವವನ್ನು ಹೆಚ್ಚಿಸುತ್ತದೆ’ ಎಂದು ಪತ್ರಕರ್ತ ಸದಾನಂದ ಹೆಗಡೆ ತಿಳಿಸಿದರು.
‘ಜಿಲ್ಲೆಯ ಇತಿಹಾಸದಲ್ಲಿ ಬೌದ್ಧ ಜೈನ ನಾಥ ಆರೂಢ ಅವಧೂತ ಸಂತ ಅಚಲ ಮೊದಲಾದ ಅನುಭಾವ ಪರಂಪರೆಯ ಕಾಲುದಾರಿಗಳು. ಮರೆತಿರುವ ಇಂಥ ಧಾರೆಗಳನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿ ಮಾಡಕೊಳ್ಳಬೇಕಿದೆ. ಇವೆಲ್ಲವೂ ಭಾವೈಕ್ಯತೆಯ ಮಾರ್ಗಗಳು’ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಜೆ. ಕರಿಯಪ್ಪ ಮಾಳಿಗೆ ತಿಳಿಸಿದರು. ಕನ್ನಡ ಸಾಹಿತ್ಯ ಸಂಸ್ಕೃತಿ ಗೋಷ್ಠಿಯಲ್ಲಿ ‘ಚಿತ್ರದುರ್ಗ ಜಿಲ್ಲೆ ಸಾಹಿತ್ಯ ಅಸ್ಮಿತೆ’ ವಿಷಯ ಕುರಿತು ಮಾತನಾಡಿದರ. ‘ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ ಅಸ್ಮಿತೆ ಆಧುನಿಕ ಸಾಹಿತ್ಯವನ್ನೂ ಒಳಗೊಂಡಂತೆ ಪ್ರಾಚೀನ ಮತ್ತು ಮಧ್ಯಕಾಲೀನ ಕಾಲಘಟ್ಟದಲ್ಲಿನ ಶೋಧನೆಗಳು ಅಗತ್ಯವಾಗಿದೆ’ ಎಂದರು. ‘ಶ್ರೇಷ್ಠ ವಿದ್ವಾಂಸರಾಗಿದ್ದ ಟಿ.ಎಸ್. ವೆಂಕಣ್ಣಯ್ಯ ಅವರು ಬೌದ್ಧ ಸಾಹಿತ್ಯ ಕುರಿತು ಅಧ್ಯಯನ ಮಾಡಿದ ಆಧಾರಗಳಿವೆ. ಸೌಹಾರ್ದತೆ ಸಮಾನತೆ ಬಿತ್ತುತ್ತಿರುವ ನೆಲೆಗಳಿವೆ. ಹೊಸ ತಲೆಮಾರಿನ ಬರಹಗಾರರು ಸಂಶೋಧಕರು ಈ ನಿಟ್ಟಿನಲ್ಲಿ ಅಧ್ಯಯನ ಕೈಗೊಳ್ಳಬೇಕಿದೆ’ ಎಂದು ಹೇಳಿದರು. ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲೆಯ ಸಾಹಿತ್ಯ ಕುರಿತು ಉಪನ್ಯಾಸಕ ಬಿ.ಎಂ. ಗುರುನಾಥ ಜನಪದ ಮತ್ತು ಬುಡಕಟ್ಟು ಸಂಸ್ಕೃತಿ ಕುರಿತು ಉಪನ್ಯಾಸಕಿ ಜಿ.ಕೆ. ಪ್ರೇಮ ವಿಷಯ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.