
ಚಿತ್ರದುರ್ಗ: ಸಾರ್ಜನಿಕರು, ವಿವಿಧ ಸಂಘಟನೆಗಳ ಸದಸ್ಯರ ವಿರೋಧದ ನಡುವೆಯೂ ನಗರಸಭೆ ಸಿಬ್ಬಂದಿ ರಸ್ತೆ, ಚರಂಡಿ ಮೇಲೆ ಆಹಾರ ಮಳಿಗೆ ನಿರ್ಮಿಸುವುದನ್ನು ಮುಂದುವರಿಸಿದ್ದಾರೆ. ಈಗ ಚರಂಡಿ ಪಕ್ಕ, ಕಸ ಸಂಗ್ರಹಣಾ ಸ್ಥಳದ ಕೂಗಳತೆ ದೂರದಲ್ಲಿ ಮಳಿಗೆ ನಿರ್ಮಿಸುತ್ತಿರುವುದು ಕೂಡ ಅಸಮಾಧನಕ್ಕೆ ಕಾರಣವಾಗಿದೆ.
ನಗರದಲ್ಲಿ ಸಂಗ್ರಹವಾಗುವ ಕಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಮೀಪದಲ್ಲೇ ವಿಂಗಡಣೆ ಮಾಡಲಾಗುತ್ತದೆ. ಪಕ್ಕದಲ್ಲೇ ತುರುವನೂರಿಗೆ ತೆರಳುವ ಮುಖ್ಯರಸ್ತೆ ಇದೆ. ಮುಖ್ಯರಸ್ತೆಯ ಮೇಲೆಯೇ ನಗರಸಭೆ ವತಿಯಿಂದ ಆಹಾರ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. 2 ಮೀಟರ್ ದೂರದಲ್ಲೇ ತೆರೆದ ರಾಜಕಾವೆ ಇದ್ದು, ಅಲ್ಲಿ ಆಹಾರ ಮಳಿಗೆ ಆರಂಭವಾದರೆ ತಿಂಡಿ ಸೇವಿಸಿದವರ ಆರೋಗ್ಯ ಏನಾಗಬಹುದು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸಿಮೆಂಟ್ ರಸ್ತೆಯ ಮೇಲೆಯೇ ಕಬ್ಬಿಣದ ಸರಳು, ಶೀಟ್ ಹಾಕಿ ತರಾತುರಿಯಲ್ಲಿ ಕಾರ್ಮಿಕರು ಮಳಿಗೆ ನಿರ್ಮಿಸುತ್ತಿದ್ದಾರೆ. ದಾರಿ ಹೋಕರು ‘ರಸ್ತೆ ಮೇಲೆ ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರೆ, ‘ನಗರಸಭೆ ಅಧಿಕಾರಿಗಳ ಸೂಚನೆ ಮೇರೆಗೆ ಮಳಿಗೆ ನಿರ್ಮಿಸುತ್ತಿದ್ದೇವೆ’ ಎಂದು ಕಾರ್ಮಿಕರು ಉತ್ತರಿಸುತ್ತಿದ್ದಾರೆ. ಇದರಿಂದ ಅಸಮಾಧಾನ ವ್ಯಕ್ತಪಡಿಸುತ್ತಿರುವ ಜನ ‘ನಾವು ರಸ್ತೆ ಮೇಲೆ ಏನಾದರೂ ಮಾಡಿದರೆ ತೆರವು ಮಾಡುತ್ತಾರೆ. ನಗರಸಭೆ ಅಧಿಕಾರಿಗಳು ಏನು ಬೇಕಾದರು ಮಾಡಬಹುದಾ’ ಎಂದು ಪ್ರಶ್ನಿಸುತ್ತಿದ್ದಾರೆ.
ಮೊದಲ ಹಂತದಲ್ಲಿ ನಗರದ ಸ್ಟೇಡಿಯಂ ರಸ್ತೆಯಲ್ಲಿ 6 ಮಳಿಗೆ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮೀಪವೂ ಮಳಿಗೆ ನಿರ್ಮಾಣ ಮಾಡಲಾಗಿದೆ. ಈಗ ಮತ್ತೊಂದು ಹಂತದಲ್ಲಿ ತುರುವನೂರು ರಸ್ತೆಯಲ್ಲಿ ಮಳಿಗೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಎರಡೇ ದಿನದಲ್ಲಿ ರಾತ್ರೋರಾತ್ರಿ ಮಳಿಗೆಗಳು ತಲೆ ಎತ್ತುತ್ತಿರುವುದು ಅನಮಾನಕ್ಕೆ ಕಾರಣವಾಗಿದೆ.
ಮಳಿಗೆ ನಿರ್ಮಾಣಕ್ಕೆ ನಗರಸಭೆ ₹ 30 ಲಕ್ಷ ವೆಚ್ಚ ಮಾಡುತ್ತಿದೆ. ಫುಡ್‌ಪಾರ್ಕ್ ಹೆಸರಿನಲ್ಲಿ ನಗರಸಭೆ ಅಧಿಕಾರಿಗಳು ಆಹಾರ ಮಳಿಗೆ ನಿರ್ಮಿಸುತ್ತಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಪಾರ್ಕಿಂಗ್ ಸೌಲಭ್ಯ ನೀಡದೇ, ಆಹಾರ ಸೇವನೆಗೆ ಸ್ಥಳವಿಲ್ಲದ ಕಡೆಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
‘ಈಗಾಗಲೇ ನಿರ್ಮಿಸಿರುವ ನಗರಸಭೆ ಮಳಿಗೆಗಳಲ್ಲಿ ಸರಿಯಾಗಿ ಬಾಡಿಗೆ ವಸೂಲಿ ನಡೆಯುತ್ತಿಲ್ಲ. ಕೆಲವರು ಅಕ್ರಮವಾಗಿ ಮಳಿಗೆಗಳನ್ನು ಬಾಡಿಗೆ ಬಿಟ್ಟಿದ್ದಾರೆ. ಈಗ ಅವೈಜ್ಞಾನಿಕ ರೀತಿಯಲ್ಲಿ ಮಳಿಗೆ ನಿರ್ಮಿಸುತ್ತಿರುವುದು ಯಾವ ಪುರುಷಾರ್ಥಕ್ಕೆ? ನಗರಸಭೆ ಅಧಿಕಾರಿಗಳೇ ನಿಯಮಗಳನ್ನು ಗಾಳಿಗೆ ತೂರಿ ಚರಂಡಿ, ರಸ್ತೆಯ ಮೇಲೆ ಮಳಿಗೆ ನಿರ್ಮಿಸುತ್ತಿರುವುದು ಸರಿಯಲ್ಲ’ ಎಂದು ಸಾಮಾಜಿಕ ಹೋರಾಟಗಾರ ಎಸ್.ಬಿ. ಕುಮಾರಸ್ವಾಮಿ ಹೇಳಿದರು.
ದೂರು ದಾಖಲು: ಸ್ಟೇಡಿಯಂ ರಸ್ತೆಯಲ್ಲಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾಂಪೌಂಡ್ ತೆರವುಗೊಳಿಸಿ ನಗರಸಭೆ ಅಧಿಕಾರಿಗಳು ಮಳಿಗೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಕಾಲೇಜು ಪ್ರಾಚಾರ್ಯ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಜೊತೆಗೆ ಶಿಕ್ಷಣ ಇಲಾಖೆ ಆಯುಕ್ತರಿಗೂ ಪತ್ರ ಬರೆದಿದ್ದಾರೆ.
‘ಬಾಡಿಗೆ ದಂಧೆಗಾಗಿ ಈ ಅವೈಜ್ಞಾನಿಕ ಮಳಿಗೆ ಕಟ್ಟಲಾಗುತ್ತಿದೆ. ಶೀಘ್ರ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ರಸ್ತೆ, ಚರಂಡಿ ಮೇಲೆ ನಿರ್ಮಿಸುತ್ತಿರುವ ಮಳಿಗೆ ಕಾಮಗಾರಿಯನ್ನು ತಡೆಯಬೇಕು’ ಎಂದು ವಕೀಲ ಜಿ. ಮಂಜುನಾಥ್ ಒತ್ತಾಯಿಸಿದರು.
ತುರುವನೂರು ರಸ್ತೆಯಲ್ಲಿ ಕಸ ವಿಂಗಡಣೆ ಕಾರ್ಯವನ್ನು ಸ್ಥಗಿತಗೊಳಿಸಲಾಗುವುದು. ತುರುವನೂರು ರಸ್ತೆಯ ಮಳಿಗೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲಾಗುವುದು.- ಎಸ್.ಲಕ್ಷ್ಮಿ ನಗರಸಭೆ ಪೌರಾಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.