ADVERTISEMENT

ಚಿತ್ರದುರ್ಗ | ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ: ಟಿ.ವೆಂಕಟೇಶ್

ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:59 IST
Last Updated 25 ಫೆಬ್ರುವರಿ 2026, 5:59 IST
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಚಿತ್ರದುರ್ಗ: ‘ಜಿಲ್ಲೆಯ ವಿವಿಧ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕವಾಗಿ ಸ್ಥಳ (ಹಾಕರ್ ಜೋನ್) ಗುರುತಿಸಿ ಪಿ.ಎಂ. ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಕೌಶಲ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಇರುವ ಆತ್ಮನಿರ್ಭರ ನಿಧಿ ಯೋಜನೆ ಕುರಿತು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಐಇಸಿ ಚಟುವಟಿಕೆಗಳ ಅಡಿ ಇರುವ ಅನುದಾನ ಬಳಸಿಕೊಳ್ಳಬೇಕು. ಬೀದಿ ನಾಟಕ, ಕರಪತ್ರ ವಿತರಣೆ ಮತ್ತು ಬ್ಯಾನರ್‌ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಆ ಮೂಲಕ ಜನರಿಗೆ ಪಿ.ಎಂ. ಸ್ವನಿಧಿ ಯೋಜನೆಯ ಸೌಲಭ್ಯ ದೊರೆಯುವಂತೆ ಕ್ರಮ ವಹಿಸಬೇಕು’ ಎಂದರು.

ADVERTISEMENT

‘ಜಿಲ್ಲೆಯ ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಅವರಿಗೆ ಉದ್ಯೋಗ ದೊರಕಿಸಿಕೊಡುವುದು ಸಂಸ್ಥೆಗಳ ಮುಖ್ಯ ಜವಾಬ್ದಾರಿಯಾಗಬೇಕು. ಜಿಲ್ಲೆಯ ಪ್ರತಿ ಐಟಿಐ ಮತ್ತು ಪಾಲಿಟೆಕ್ನಿಕ್‌ಗಳಿಂದ ಪ್ರತಿ ವರ್ಷ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಅವರಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂಬ ನಿಖರವಾದ ‘ಅಂಕಿ-ಅಂಶ‘ ಇರಬೇಕು. ಎಸ್‍ಎಸ್‍ಎಲ್‍ಸಿ ಮುಗಿಸಿ ತಕ್ಷಣದ ಉದ್ಯೋಗಕ್ಕಾಗಿ ಐಟಿಐ ಸೇರುವ ಬಡ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸುವುದು ಇಲಾಖೆಯ ಆದ್ಯತೆಯಾಗಬೇಕು’ ಎಂದರು.

‘ಜಿಲ್ಲಾ ಕೌಶಲ ಮಿಷನ್‍ಗೆ ಪೂರಕವಾಗಿ ವಿವಿಧ 8 ಉಪ ಸಮಿತಿ ಸೃಜಿಸಲಾಗಿದ್ದು ಈ ಎಲ್ಲ ಉಪಸಮಿತಿಗಳ ಸಂಬಂಧಿಸಿದ ಅಧ್ಯಕ್ಷರು, ಸದಸ್ಯರು ಕಾಲಕಾಲಕ್ಕೆ ಸಭೆ ನಡೆಸಬೇಕು. ಮುಂದಿನ 10 ದಿನದೊಳಗಾಗಿ ಎಲ್ಲ ಉಪ ಸಮಿತಿಗಳು ಸಭೆಗಳನ್ನು ನಡೆಸಿದ ನಡಾವಳಿಗಳನ್ನು ನಮಗೆ ಸಲ್ಲಿಸಬೇಕು’ ಎಂದರು.

‘ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ 5,597 ಫಲಾನುಭವಿಗಳಲ್ಲಿ ಶೇ 25ರಷ್ಟು ಅಂದರೆ 2,118 ಯುವನಿಧಿ ಫಲಾನುಭವಿಗಳ ನೈಜತೆ ಪರಿಶೀಲನೆ ಕಾರ್ಯ ಪೂರ್ಣಗೊಂಡಿರುತ್ತದೆ. ಅವರನ್ನು ತರಬೇತಿಗೆ ಸಜ್ಜುಗೊಳಿಸಲ ಕ್ರಮ ಕೈಗೊಳ್ಳಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಸಮೀಪದ ಸರ್ಕಾರಿ ಐಟಿಐ ಮತ್ತು ಜಿಟಿಟಿಸಿ ಕಾಲೇಜುಗಳಲ್ಲಿ ತರಬೇತಿ ಪಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ‘ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ತಿಳಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕೌಶಲಾಭಿವೃದ್ಧಿ ಇಲಾಖೆಯ ಎಸ್‍ಎಸ್‍ಒ ವೇಮಣ್ಣ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ರೇಖಾ, ಉದ್ಯೋಗಾಧಿಕಾರಿ ರವಿಚಂದ್ರ ಇದ್ದರು.

ಆತ್ಮನಿರ್ಭರ ನಿಧಿ ಯೋಜನೆಯ ಅರಿವು ಅವಶ್ಯ ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗ ತರಬೇತಿ ಉಪ ಸಮಿತಿಗಳ ಸಭೆ ನಡೆಸಲು ಸೂಚನೆ

ಐಟಿಐ ಅಪ್ರೆಂಟಿಶಿಪ್‌ ಕುಂಠಿತ

‘ಜಿಲ್ಲೆಯ ಐಟಿಐ ಕಾಲೇಜುಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಪ್ರೆಂಟಿಶಿಪ್ ಪ್ರಗತಿ ಕುಂಠಿತವಾಗಿದೆ. ಕಾಲೇಜುಗಳಿಂದ ವಾರ್ಷಿಕವಾಗಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಆದರೆ ಈ ಪೈಕಿ ಕೇವಲ 181 ವಿದ್ಯಾರ್ಥಿಗಳು ಮಾತ್ರ ಅಪ್ರೆಂಟಿಶಿಪ್‍ಗೆ ನೋಂದಾಯಿಸಿಕೊಂಡಿರುವುದು ವಿಷಾದನೀಯ. ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ. 50ರಷ್ಟು ಮಂದಿಯನ್ನಾದರೂ ಅಪ್ರೆಂಟಿಶಿಪ್‍ಗೆ ಸೇರಿಸುವ ಗುರಿ ಹೊಂದಬೇಕು’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.