
ಚಿತ್ರದುರ್ಗ: ಜಿಲ್ಲೆಯಾದ್ಯಂತ ಅಳವಡಿಸಲಾಗಿರುವ ನೀರು ಶುದ್ಧೀಕರಣದ ಬಹುತೇಕ ಘಟಕಗಳು ಕೆಟ್ಟು ಹೋಗಿರುವ ಕಾರಣ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇದರಿಂದಾಗಿ ಖಾಸಗಿ ಆರ್.ಒ ಘಟಕಗಳ ಗುಣಮಟ್ಟ ಪರೀಕ್ಷೆ ನಡೆಸದ ಕ್ಯಾನ್ ನೀರು, ಟ್ಯಾಂಕರ್ ನೀರಿನ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ನಂತರ ಗುತ್ತಿಗೆದಾರ ಕಂಪನಿಗಳು ನಿರ್ವಹಣೆ ಮಾಡದೇ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡುತ್ತಿವೆ. ಪಂಪ್ ಸೇರಿದಂತೆ ಯಂತ್ರೋಪಕರಣಗಳು ಕೆಟ್ಟು ಹೋಗಿದ್ದು ರಿಪೇರಿ ಮಾಡಿಸಿಲ್ಲ. ಜೊತೆಗೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣ ಘಟಕಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ನೂರಾರು ಘಟಕಗಳು ಕೆಟ್ಟು ಹೋಗಿದ್ದು ಪರಿಕರಗಳು ತುಕ್ಕು ಹಿಡಿಯುತ್ತಿವೆ.
ಇದನ್ನೇ ವರವಾಗಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು ತಮ್ಮದೇ ಆರ್‌ಒ ಘಟಕ ತೆರೆದಿದ್ದಾರೆ. ಸರ್ಕಾರ ನಿಗದಿಪಡಿಸಿದ ಮೊತ್ತವನ್ನೇ (25 ಲೀಟರ್ ನೀರಿಗೆ ₹ 5) ಪಡೆಯುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಹಲವರು ಟ್ಯಾಂಕರ್ ಮೂಲಕ ಮನೆಮನೆಗೆ ನೀರು ಮಾರಾಟ ಮಾಡುತ್ತಿದ್ದಾರೆ. ಹೋಟೆಲ್, ಕ್ಯಾಂಟೀನ್, ಅಂಗಡಿಗಳಿಗೆ ತೆರಳಿ ನೀರು ಪೂರೈಸುತ್ತಾರೆ. ಬೀದಿಬೀದಿಯಲ್ಲಿ ಮೈಕ್ ಮೂಲಕ ಘೋಷಿಸಿ ಈ ಟ್ಯಾಂಕರ್‌ಗಳು ಮನೆ ಬಾಗಿಲಿಗೇ ನೀರು ಸರಬರಾಜು ಮಾಡುತ್ತಿವೆ.
ಇಂಥ ನೀರಿನ ಗುಣಮಟ್ಟದ ಬಗ್ಗೆ ಕೆಲವರಲ್ಲಿ ಅನುಮಾನ ಆರಂಭವಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀರಿನ ಗುಣಮಟ್ಟವನ್ನು ಪರೀಕ್ಷೆ ನಡೆಸುತ್ತದೆ. ಸಮರ್ಪಕವಾಗಿ ಪಿಎಚ್ (ಜಲಜನಕದ ಶಕ್ತಿ) ಮಟ್ಟವನ್ನು ನಿಗದಿ ಮಾಡುತ್ತದೆ. ವೈಜ್ಞಾನಿಕವಾಗಿ ಶುದ್ಧ ಕುಡಿಯುವ ನೀರಿನ ಪಿಎಚ್ ಮಟ್ಟವು 6.5 ರಿಂದ 8.5ರ ನಡುವೆ ಇರಬೇಕು. ಪಿಎಚ್ ಮಟ್ಟ 6.5ಕ್ಕಿಂತ ಕಡಿಮೆ ಇದ್ದರೆ ಆಮ್ಲೀಯ (ಆ್ಯಸಿಡ್), 8.5ಕ್ಕಿಂತ ಹೆಚ್ಚು ಪಿಎಚ್ ಇದ್ದರೆ ಕ್ಷಾರೀಯ (ಅಲ್ಕಲೈನ್) ಎಂದು ಪರಿಗಣಿಸಲಾಗುತ್ತದೆ. ನಿಗದಿತ ಮಟ್ಟಕ್ಕಿಂತ ಕುಗ್ಗಿದ, ಮಿತಿ ಮೀರಿದ ನೀರು ಆರೋಗ್ಯಕ್ಕೆ ಹಾನಿಕಾರಕ.
ಖಾಸಗಿ ಘಟಕಗಳ ನೀರಿನಲ್ಲಿ ಆಮ್ಲೀಯ ಹಾಗೂ ಕ್ಷಾರೀಯ ಗುಣ ವ್ಯತ್ಯಾಸದಿಂದ ಕೂಡಿರುತ್ತದೆ. ರುಚಿ ಹೆಚ್ಚಬೇಕು, ಗ್ರಾಹಕರನ್ನು ಸೆಳೆಯಬೇಕು ಎಂಬ ಉದ್ದೇಶದಿಂದ ಪಿಎಚ್ ಮಟ್ಟ ವ್ಯತ್ಯಾಸವಿರುವ ನೀರು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ. ನೀರಿನ ಗುಣಮಟ್ಟವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕಾಯ್ದೆ– 2006ರ ಅನುಸಾರ ನೀರಿನ ಪರೀಕ್ಷೆ ನಡೆಸಬೇಕು.
ಗುಣಮಟ್ಟ ಸುರಕ್ಷತಾ ಪ್ರಾಧಿಕಾರಕ್ಕೆ ಜಿಲ್ಲಾ ಮಟ್ಟದಲ್ಲಿ ಅಂಕಿತ ಅಧಿಕಾರಿ ಇರುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಗುಣಮಟ್ಟ ಸುರಕ್ಷತಾ ಅಧಿಕಾರಿಗಳು ಇರುತ್ತಾರೆ. ಆದರೆ, ಜಿಲ್ಲೆಯಲ್ಲಿ ಜಿಲ್ಲಾ ಅಂಕಿತ ಅಧಿಕಾರಿ ಹುದ್ದೆ ಖಾಲಿ ಉಳಿದಿದೆ. ಅದರ ಪ್ರಭಾರ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗೆ ನೀಡಲಾಗಿದೆ. ಉಪ ವಿಭಾಗಾಧಿಕಾರಿಗೆ ಬೇರೆ ಜವಾಬ್ದಾರಿಗಳೇ ಸಾಕಷ್ಟು ಇರುವ ಕಾರಣ ನೀರಿನ ಗುಣಮಟ್ಟ ಪರೀಕ್ಷಿಸುವ ಕೆಲಸ ಮಾಡುತ್ತಿಲ್ಲ.
ತಾಲ್ಲೂಕು ಮಟ್ಟದಲ್ಲಿ ಆಹಾರ ಗುಣಮಟ್ಟ ಸುರಕ್ಷತಾ ಅಧಿಕಾರಿ ಹುದ್ದೆಗಳು ಕೂಡ ಖಾಲಿ ಉಳಿದಿದ್ದು, ಅದರ ಜವಾಬ್ದಾರಿಯನ್ನು ಆಯಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೀಡಲಾಗಿದೆ. ಬಹುತೇಕ ತಾಲ್ಲೂಕುಗಳಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಹುದ್ದೆಯೂ ಪ್ರಭಾರದಲ್ಲಿರುವ ಕಾರಣ ನೀರಿನ ಗುಣಮಟ್ಟದ ಪರೀಕ್ಷಾ ಕಾರ್ಯ ಮರೀಚಿಕೆಯಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕುಡಿಯುವ ನೀರಿನ ಪರೀಕ್ಷಾ ಕಾರ್ಯ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
1,056 ಶುದ್ಧ ನೀರಿನ ಘಟಕ:
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಅನುಸಾರ ಜಿಲ್ಲೆಯಲ್ಲಿ 1,056 ಶುದ್ಧ ನೀರಿನ ಘಟಕಗಳಿವೆ. ಅವುಗಳಲ್ಲಿ 828 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 228 ಘಟಕಗಳು ಹಾಳಾಗಿವೆ. ಇವುಗಳಲ್ಲಿ 59 ಶಾಶ್ವತವಾಗಿ ಸ್ಥಗಿತಗೊಂಡಿವೆ. ವಾಸ್ತವವಾಗಿ ಜಿಲ್ಲೆಯಲ್ಲಿರುವ ಶುದ್ಧ ನೀರಿನ ಘಟಕಗಳಲ್ಲಿ ಶೇ 60ರಷ್ಟು ಘಟಕಗಳು ಶಾಶ್ವತವಾಗಿ ಬಂದ್ ಆಗಿವೆ. ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲೇ ಸುಳ್ಳು ಸೇರಿಕೊಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನೀಡಿದ ಮಾಹಿತಿಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೊಸ ಘಟಕಗಳ ಸ್ಥಾಪನೆ ಆಗದ ಕಾರಣ ಖಾಸಗಿ ನೀರು ಸರಬರಾಜುದಾರರು ಹುಟ್ಟಿಕೊಳ್ಳುತ್ತಿದ್ದಾರೆ ಎಂದೂ ಆರೋಪಿಸಿದ್ದರು.
ದುರಸ್ತಿ ಮಾಡಿಸಲು ವಿಫಲ:
ಜಿಲ್ಲೆಯ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಘಟಕಗಳಿಗೆ ಕಳಪೆ ಗುಣಮಟ್ಟದ ಯಂತ್ರೋಪಕರಣ ಅಳವಡಿಸದ ಕಾರಣ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಏಜೆನ್ಸಿಗಳ ಮೇಲ್ವಿಚಾರಣೆ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಘಟಕಗಳು ಯಾವಾಗಲೂ ಹಾಳಾದ ಸ್ಥಿತಿಯಲ್ಲೇ ಇರುತ್ತವೆ. ಅಧಿಕಾರಿಗಳು ಏಜೆನ್ಸಿಗಳ ಮೇಲೆ ದೂರುತ್ತಾರೆ, ಏಜೆನ್ಸಿಯವರನ್ನು ಕೇಳಿದರೆ ಅಧಿಕಾರಿಗಳ ಮೇಲೆ ದೂರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
‘ಘಟಕಗಳ ನಿರ್ವಹಣೆಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಏಜೆನ್ಸಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ನಿಯಮಾನುಸಾರ ಸ್ಥಳೀಯ ಗ್ರಾಮ ಪಂಚಾಯಿತಿಗಳು ಆರ್.ಒ ಘಟಕಗಳನ್ನು ಹಸ್ತಾಂತರ ಮಾಡಿಸಿಕೊಂಡು ನಿರ್ವಹಣೆ ಮಾಡಬೇಕು. ಆದರೆ, ಇಲ್ಲಿವರೆಗೂ ಯಾವ ಗ್ರಾಮ ಪಂಚಾಯಿತಿಯೂ ಘಟಕಗಳನ್ನು ಸುಪರ್ದಿಗೆ ಪಡೆದಿಲ್ಲ’ ಎಂದು ವಕೀಲರೊಬ್ಬರು ಆರೋಪಿಸಿದರು.
ಖಾಸಗಿಯಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್‌ಗಳ ನೀರು ಪರೀಕ್ಷೆ ಮಾಡಲಾಗುವುದು. ಮಾದರಿ ಸಂಗ್ರಹ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆಡಾ.ಬಿ.ವಿ.ಗಿರೀಶ್ ಆಹಾರ ಸುರಕ್ಷತಾ ಅಧಿಕಾರಿ
ಹೋಟೆಲ್ ಅಂಗಡಿಗಳಿಗೆ ಪೂರೈಕೆ
-ಸುವರ್ಣಾ ಬಸವರಾಜು
ಹಿರಿಯೂರು: ತಾಲ್ಲೂಕಿನಲ್ಲಿ 201 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಅವುಗಳಲ್ಲಿ ಅರ್ಧದಷ್ಟು ಘಟಕಗಳು ದುರಸ್ತಿಯಲ್ಲಿರುವ ಕಾರಣ ಸಾರ್ವಜನಿಕರು ಖಾಸಗಿ ಆರ್.ಒ ಘಟಕಗಳ ನೀರನ್ನೇ ಅವಲಂಬಿಸಿದ್ದಾರೆ. ನಗರದಲ್ಲಿ ಒಂದು ವಾಣಿವಿಲಾಸಪುರದಲ್ಲಿ ಮತ್ತೊಂದು ಖಾಸಗಿ ಶುದ್ಧ ನೀರಿನ ಘಟಕಗಳಿದ್ದು ಕ್ಯಾನ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಾರೆ. ಹೋಟೆಲ್ ಕಲ್ಯಾಣಮಂಟಪ ಬೀದಿಬದಿಯ ಅಂಗಡಿಗಳು ಪ್ರಮುಖ ಬೀದಿಗಳಲ್ಲಿನ ಅಂಗಡಿಗಳಿಗೆ ಸ್ಥಳಕ್ಕೇ ಬಂದು ₹ 20ಕ್ಕೆ ಪ್ರತಿ ಕ್ಯಾನ್ ನೀರು ಕೊಡುತ್ತಾರೆ. ಹೀಗಾಗಿ ವರ್ತಕರು ಬಹುತೇಕ ಖಾಸಗಿಯವರನ್ನೇ ಅವಲಂಬಿಸಿದ್ದಾರೆ. ‘ನೀರು ತುಂಬ ಮೃದು (ಸಾಫ್ಟ್) ಆಗಿರುತ್ತದೆ. ಆಹಾರ ಧಾನ್ಯ ಬೇಗ ಬೇಯುತ್ತವೆ. ಹೀಗಾಗಿ ಅವರಿಂದಲೇ ಖರೀದಿಸುತ್ತೇವೆ’ ಎನ್ನುತ್ತಾರೆ ಹೋಟೆಲ್ ಮಾಲೀಕರು. ನಗರದಲ್ಲಿ 8 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಇವುಗಳಲ್ಲಿ ನಾಲ್ಕನ್ನು ಗ್ರಾಹಕರು ಬಳಸುತ್ತಲೇ ಇಲ್ಲ. ಉಳಿದ ನಾಲ್ಕನ್ನು ಅಲ್ಪಪ್ರಮಾಣದಲ್ಲಿ ಬಳಸುತ್ತಿದ್ದು ಕೊಳವೆ ಬಾವಿ ನೀರಿನಿಂದ ನಡೆಯುತ್ತಿರುವ ಈ ಘಟಕಗಳ ನೀರಿನ ಬದಲಿಗೆ ಶುದ್ಧೀಕರಣಗೊಂಡು ಬರುವ ಮಾರಿಕಣಿವೆ ಅಣೆಕಟ್ಟೆಯ ನೀರನ್ನು ಬಹುತೇಕ ನಾಗರಿಕರು ಅವಲಂಬಿಸಿದ್ದಾರೆ.
ಆಂಧ್ರದಿಂದ ಬರುತ್ತಿದೆ ಪ್ಯಾಕೇಟ್ ನೀರು
-ಕೊಂಡ್ಲಹಳ್ಳಿ ಜಯಪ್ರಕಾಶ್
ಮೊಳಕಾಲ್ಮುರು: ವಿವಿಧ ಕಂಪನಿಗಳ ಹೆಸರಿನಲ್ಲಿ ತಾಲ್ಲೂಕಿನ ಅಂಗಡಿಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾನ್ ಬಾಟಲಿ ಮತ್ತು ಪ್ಯಾಕೇಟ್ ನೀರಿನ ಗುಣಮಟ್ಟದ ಪರೀಕ್ಷೆ ಅಗತ್ಯವಿದೆ ಎಂದು ಸಾರ್ವಜನಿಕರು ಹೇಳುತ್ತಾರೆ. ಆಂಧ್ರಪ್ರದೇಶ ಹಾಗೂ ನೆರೆಯ ಬಳ್ಳಾರಿ ಜಿಲ್ಲೆಯಿಂದ ಕುಡಿಯುವ ನೀರಿನ ಬಾಟಲಿ ಪ್ಯಾಕೇಟ್ ಸರಬರಾಜು ಆಗುತ್ತಿದೆ. ಪರಿಚಯವೇ ಇಲ್ಲದ ಬ್ರ್ಯಾಂಡ್‌ಗಳ ನೀರನ್ನು ತರಿಸಲಾಗುತ್ತಿದೆ. ಅನಿವಾರ್ಯವಾಗಿ ಕೊಂಡು ಕುಡಿಯಬೇಕಿದೆ. ಕೆಲವೊಂದು ಸಲ ನೀರು ವಾಸನೆಯಿಂದ ಕೂಡಿರುತ್ತದೆ. ಕೇಳಿದರೆ ಪ್ಲಾಸ್ಟಿಕ್ ಬಾಟಲಿಯ ವಾಸನೆ ಎಂಬ ಸಬೂಬು ಬರುತ್ತದೆ. ಇನ್ನು ಪ್ಯಾಕೇಟ್ ನೀರಿನ ಬಣ್ಣವೂ ಬದಲಿರುತ್ತದೆ. ಪ್ಲಾಸ್ಟಿಕ್ ಪ್ಯಾಕೇಟ್ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಶಾಲೆ ಮುಂಭಾಗ ವೈನ್ ಶಾಪ್‌ಗಳಲ್ಲಿ ಪ್ಯಾಕೇಟ್ ನೀರು ಬಳಸಲಾಗುತ್ತದೆ. ಬಾಟಲಿ ಕೊಳ್ಳಲು ಆಗದದವರು ₹ 2 ಕೊಟ್ಟು ಪ್ಯಾಕೆಟ್ ನೀರು ಕೊಳ್ಳುತ್ತಾರೆ. ಬಹುತೇಕ ಪ್ಯಾಕೇಟ್ ನೀರನ್ನು ನೆರೆಯ ಆಂಧ್ರದ ರಾಯದುರ್ಗದಿಂದ ತಂದು ಮಾರಾಟ ಮಾಡಲಾಗುತ್ತಿದೆ. ಫುಟ್‌ಪಾತ್ ಶಾಲೆ ಮುಂಭಾಗದಲ್ಲಿ ಪಾನಿಪೂರಿ ಗೋಬಿ ಮಂಚೂರಿ ಮಾರಾಟ ಮಾಡುವವರು ಪ್ಯಾಕೇಟ್ ನೀರು ಮತ್ತು ಕಡಿಮೆ ಗುಣಮಟ್ಟದ ಬಾಟಲಿ ನೀರು ಮಾರಾಟ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.