ಚಿತ್ರದುರ್ಗ: ಕಲ್ಲಿನಕೋಟೆ ಸಂರಕ್ಷಣೆ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಹಾಗೂ ರಾಜ್ಯ ಪುರಾತತ್ವ ಇಲಾಖೆ ನಡುವೆ ಗೊಂದಲಗಳಿರುವ ಕಾರಣ ಐತಿಹಾಸಿಕ ಸ್ಮಾರಕಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿವೆ. ಮುಖ್ಯವಾಗಿ ಲಾಲ್‌ಕೋಟೆ ಬಾಗಿಲಿನ ಉಪ ದ್ವಾರವೊಂದು ಹಲವು ವರ್ಷಗಳಿಂದ ‘ಕುಡುಕರ ಕಾರ್ನರ್’ ಆಗಿ ಬದಲಾಗಿದ್ದು, ಅಧಿಕಾರಿಗಳ ಕಣ್ಣಿಗೆ ಕಾಣದಾಗಿದೆ!
ತಿಮ್ಮಣ್ಣನಾಯಕನ ಕೆರೆ ರಸ್ತೆ ಭಾಗದಿಂದ ಲಾಲ್‌ಕೋಟೆ ಬಾಗಿಲು ಪ್ರವೇಶಿಸುತ್ತಿದ್ದಂತೆ ಸಣ್ಣದೊಂದು ಉಪ ದ್ವಾರ ಸಿಗುತ್ತದೆ. ಕೊಂಚ ಮುಂದೆ ಸಾಗಿದರೆ ಬಲಭಾಗಕ್ಕೆ ಇನ್ನೊಂದು ಉಪದ್ವಾರ ಸಿಗುತ್ತದೆ. ಅದು ಗಿಡಗಂಟಿಗಳಿಂದ ಮುಳುಗಿ ಹೋಗಿದ್ದು, ಪಾಳು ಬಿದ್ದಿದೆ ಎಂದೆನಿಸುತ್ತದೆ. ಆದರೆ, ಅದರ ಹತ್ತಿರ ಸಾಗಿದರೆ ಅಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು ಆಶ್ಚರ್ಯ ಮೂಡಿಸುತ್ತವೆ.
ಹಾವು, ಹಲ್ಲಿಗಳ ಭಯದ ನಡುವೆ ಗಿಡಗಂಟಿಗಳನ್ನು ಸರಿಸಿಕೊಂಡು ಮುಂದೆ ಸಾಗಿದಾಗ ತೆರೆದುಕೊಂಡಿದ್ದು ಸಾಕ್ಷಾತ್ ಬಾರ್ ಮತ್ತು ರೆಸ್ಟೋರೆಂಟ್. ದ್ವಾರದ ಜಗುಲಿಯ ಕೆಳಗೆ ಬಿದ್ದಿದ್ದ ಮದ್ಯದ ಬಾಟಲಿ, ಪ್ಯಾಕೆಟ್‌ಗಳ ದೃಶ್ಯ ಅಲ್ಲಿಯ ಕರಾಳತೆಯನ್ನು ತೆರೆದಿಡುತ್ತದೆ. ಜನಸಂಪರ್ಕವೇ ಇಲ್ಲದ ಆ ಜಾಗ ಕುಡುಕರಿಗೆ ಸ್ವರ್ಗದಂತಾಗಿದೆ.
ಇನ್ನೂ ವಿಚಿತ್ರವೆಂದರೆ ದ್ವಾರದ ಜಗುಲಿಯ ಮೇಲೆ ಒಲೆ ಕಟ್ಟಿಕೊಂಡು ಕಿಡಿಗೇಡಿಗಳು ಬಾಡೂಟ ಮಾಡಿಕೊಂಡು ಸೇವಿಸಿದ್ದಾರೆ. ಅಲ್ಲಿ ಮೂಳೆಗಳು ಚೆಲ್ಲಾಡುತ್ತಿವೆ. ನಾಯಿಗಳ ಹಾವಳಿಯೂ ಇದೆ. ಅದು ಕೇವಲ ಕುಡಿಯುವ ತಾಣ ಮಾತ್ರವಲ್ಲದೇ ಅಡುಗೆಯ ತಾಣವೂ ಆಗಿದೆ. ಅಲ್ಲಿಗೆ ಯಾರಾದರೂ ಬಂದರೆ ಕೆಲ ಕಿಡಿಗೇಡಿಗಳು ಅನುಮಾನದ ದೃಷ್ಟಿಕೋನದಿಂದ ನೋಡುತ್ತಾರೆ. ಬೇರೆಯವರಿಗೆ ಪ್ರವೇಶವಿಲ್ಲ ಎಂಬಂತೆ ಭಯ ಹುಟ್ಟಿಸುತ್ತಾರೆ.
ಏಳುಸುತ್ತಿನ ಕೋಟೆಗೆ ಸಾಕ್ಷಿಯಾಗಿ ನಗರ ವ್ಯಾಪ್ತಿಯಲ್ಲಿ ಐದು ಕೋಟೆ ಬಾಗಿಲುಗಳು ಈಗಲೂ ಜೀವಂತವಾಗಿ ನಿಂತಿವೆ. ಅವುಗಳಲ್ಲಿ ಲಾಲ್‌ಕೋಟೆ ಬಾಗಿಲು ಅತ್ಯಂತ ಸುಂದರವಾಗಿದೆ. ಆದರೆ ಅದನ್ನು ಪ್ರವಾಸಿಗರಿಗೆ ತೋರಿಸುವಂತಹ ಪ್ರಯತ್ನವನ್ನು ಎಎಸ್‌ಐ ಮತ್ತು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ಕಿಡಿಗೇಡಿಗಳು ಅಲ್ಲಿ ತಮ್ಮ ಚಟುವಟಿಕೆಯನ್ನು ಯಾವ ಭಯವೂ ಇಲ್ಲದೇ ನಡೆಸುತ್ತಿದ್ದಾರೆ.
‘ಲಾಲ್‌ಕೋಟೆ ಬಾಗಿಲ ಬಳಿ ಒಬ್ಬಂಟಿಯಾಗಿ ಯಾರೂ ಹೋಗಲು ಸಾಧ್ಯವಿಲ್ಲ. ಅಲ್ಲಿ ಡ್ರಗ್ಸ್ ಸೇವಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲೂ ಅವರು ಅಲ್ಲೇ ಮಲಗುತ್ತಾರೆ. ಆದಷ್ಟು ಬೇಗ ಅಲ್ಲಿಯ ಗಿಡಗಂಟಿ ತೆರವುಗೊಳಿಸಿ, ಸ್ವಚ್ಛ ಮಾಡಿ, ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಿದರೆ ಮಾತ್ರ ಅಲ್ಲಿಯ ಪರಿಸ್ಥಿತಿ ಸುಧಾರಿಸಬಹುದು’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
ತಿಮ್ಮಣ್ಣನಾಯಕನ ಕೆರೆ ರಸ್ತೆಯಲ್ಲಿ ಸ್ಮಶಾನವಿದ್ದು, ರಸ್ತೆಯ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಯುತ್ತದೆ. ರಸ್ತೆಯ ಎರಡೂ ಕಡೆ ಕಟ್ಟಡಗಳ ತ್ಯಾಜ್ಯ ಸುರಿಯಲಾಗಿದೆ. ಅಲ್ಲಿ ಜನರ ಓಡಾಟ ಕಡಿಮೆ ಇದೆ. ಹೀಗಾಗಿ ಆ ಪ್ರದೇಶವನ್ನು ಕಿಡಿಗೇಡಿಗಳು ತಮ್ಮ ತಾಣವನ್ನಾಗಿ ಮಾಡಿಕೊಂಡಿದ್ದಾರೆ.
ಲಾಲ್‌ಕೋಟೆಗೆ ಅಗಳು ಪ್ರದೇಶದ ಮೂಲಕವೂ ಪ್ರವೇಶಿಸಬಹುದು. ಅಲ್ಲಿಯೂ ಸ್ಮಶಾನ, ವಿದ್ಯುತ್ ಚಿತಾಗಾರವಿದ್ದು ಜನರು ಓಡಾಡಲು ಭಯಪಡುತ್ತಾರೆ. ಇಂತಹ ಜಾಗದಲ್ಲಿ ಲಾಲ್‌ಕೋಟೆ ಬಾಗಿಲು, ಎರಡು ಉಪದ್ವಾರಗಳಿದ್ದು ಜನಸಂಪರ್ಕ ಇಲ್ಲದ ಕಾರಣ ಕಿಡಿಗೇಡಿಗಳು ತಮ್ಮ ತಾಣ ಮಾಡಿಕೊಂಡಿದ್ದಾರೆ.
‘ನಾನು ಪ್ರತಿನಿತ್ಯ ಬೆಳಿಗ್ಗೆ ತಿಮ್ಮಣ್ಣನಾಯಕನ ಕೆರೆಗೆ ವಿಹಾರಕ್ಕಾಗಿ ತೆರಳುತ್ತೇನೆ. ರಸ್ತೆಯಲ್ಲಿ ಸಿಗುವ ಲಾಲ್‌ಕೋಟೆ ಬಾಗಿಲಿನ ಸ್ಥಿತಿ ಕಂಡು ಮರುಗುತ್ತೇನೆ. ಸ್ಮಾರಕಗಳ ಸಂರಕ್ಷಣೆ ಯಾರಿಗೂ ಬೇಡವಾಗಿದೆ. ಇಂದಿನ ಪೀಳಿಗೆಯ ಯುವಕರಾದರೂ ಕೋಟೆ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಸಾಹಿತಿ ಎಂ.ಮೃತ್ಯುಂಜಯಪ್ಪ ಹೇಳಿದರು.
ಕೋಟೆಬಾಗಿಲುಗಳ ದುರಸ್ತಿ ಹಾಗೂ ಸ್ವಚ್ಛತೆಗಾಗಿ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಪುರಾತತ್ವ ಸಂಗ್ರಹಾಲಯ ಹಾಗೂ ಪುರಾತತ್ವ ಇಲಾಖೆಯ ಸಂರಕ್ಷಣಾ ವಿಭಾಗಕ್ಕೆ ವರದಿ ನೀಡಲಾಗಿದೆಜಿ.ಪ್ರಹ್ಲಾದ್ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.