ADVERTISEMENT

ಚಿತ್ರದುರ್ಗ: ಹೆಸರಿಗಷ್ಟೇ ಸುಸಜ್ಜಿತ; ಶುದ್ಧೀಕರಣ ಘಟಕಕ್ಕೆ ತಲುಪದ ತ್ಯಾಜ್ಯ ನೀರು

ಎಂ.ಎನ್.ಯೋಗೇಶ್‌
Published 6 ಜನವರಿ 2025, 7:20 IST
Last Updated 6 ಜನವರಿ 2025, 7:20 IST
ಪಿಳ್ಳಕೇರನಹಳ್ಳಿ ಬಳಿ ಸುಸಜ್ಜಿತವಾಗಿ ನಿರ್ಮಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕ
ಪಿಳ್ಳಕೇರನಹಳ್ಳಿ ಬಳಿ ಸುಸಜ್ಜಿತವಾಗಿ ನಿರ್ಮಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕ   

ಚಿತ್ರದುರ್ಗ: ನಗರದ ಹೊರವಲಯದಲ್ಲಿ ಅತ್ಯಂತ ಸುಸಜ್ಜಿತವಾದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲೇ ಮಾದರಿ ಎನ್ನಬಹುದಾದ ರೀತಿಯಲ್ಲಿ ಘಟಕ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ನಗರದಾದ್ಯಂತ ಉತ್ಪತ್ತಿಯಾಗುವ ಕೊಳಚೆ ನೀರು ಸಮಗ್ರವಾಗಿ ಘಟಕಕ್ಕೆ ತಲುಪದ ಕಾರಣ ಈ ಘಟಕ ಇದ್ದೂ ಇಲ್ಲದಂತಾಗಿದೆ.

ಪಿಳ್ಳೆಕೇರನಹಳ್ಳಿ ಬಳಿ 5 ಎಕರೆಯಷ್ಟು ವಿಶಾಲ ಜಾಗದಲ್ಲಿ ಎಸ್‌ಟಿಪಿ ನಿರ್ಮಾಣ ಮಾಡಲಾಗಿದೆ. ನಗರದ ಸ್ಥಳೀಯ ಸಂಸ್ಥೆಯು ಭವಿಷ್ಯದಲ್ಲಿ ಪಾಲಿಕೆ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಯೂ ಇರುವ ಕಾರಣ ಮುಂದಾಲೋಚನೆಯಿಂದ 20 ಎಂಲ್‌ಡಿ (ಮಿಲಿಯನ್‌ ಲೀಟರ್‌ ಪರ್‌ ಡೇ) ಸಾಮರ್ಥ್ಯದ ಯಂತ್ರೋಪಕರಣ ಅಳವಡಿಸಲಾಗಿದೆ. ನಗರದ ಎಲ್ಲಾ ಒಳಚರಂಡಿ ನೀರನ್ನು ಈ ಘಟಕಕ್ಕೆ ತಿರುಗಿಸಿದರೆ ಕೊಳಚೆ ನೀರು ಸಮಸ್ಯೆಯೇ ಆಗುವುದಿಲ್ಲ. ದುರದೃಷ್ಟವಶಾತ್‌ ಈಗ ಅಲ್ಲಿಗೆ ಕೊಳಚೆ ನೀರೇ ತಲುಪುತ್ತಿಲ್ಲ!

ಇಲ್ಲಿಯವರೆಗೆ ಶೇ 25ರಷ್ಟೂ ಕೊಳಚೆ ನೀರು ಘಟಕ ಸೇರಿಲ್ಲ. ಕೇವಲ 4–5 ಎಂಎಲ್‌ಡಿಯುಷ್ಟು ಕೊಳಚೆ ನೀರು ಇಲ್ಲಿಗೆ ಸಾಗುತ್ತಿದೆ. ಉಳಿದಂತೆ ನಗರದೆಲ್ಲೆಡೆ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ನೀರು ಹೊರವಲಯದ ಜಲಮೂಲಗಳಿಗೆ ಹರಿಯುತ್ತಿದೆ. ಬಹುತೇಕ ನೀರು ಮಲ್ಲಾಪುರ ಕೆರೆ ಸೇರುತ್ತಿದ್ದು, ಅಲ್ಲಿಯ ಜಲಚರಗಳಿಗೆ ಮಾರಕವಾಗಿವೆ. ಇದರಿಂದ ಸುತ್ತಲಿನ ಬಡಾವಣೆ, ಹಳ್ಳಿಗಳ ಜನರಿಗೆ ರೋಗ ಭೀತಿ ಎದುರಾಗಿದೆ.

ADVERTISEMENT

2017ರಲ್ಲಿ ನಿರ್ಮಾಣವಾದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಘಟಕಕ್ಕೆ ಭೇಟಿ ನೀಡಿದರೆ ಹೈಟೆಕ್‌ ಎನಿಸಬಹುದಾದ ವಾತಾವರಣ ಕಾಣುತ್ತದೆ. ನೀರು ಪರೀಕ್ಷೆ ಮಾಡುವ ಪ್ರಯೋಗಾಲಯ ಸುಸಜ್ಜಿತವಾಗಿದೆ. ಕಚೇರಿ, ವಸತಿ ಗೃಹ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ. 10ಕ್ಕೂ ಹೆಚ್ಚು ಸಿಬ್ಬಂದಿ, ತಂತ್ರಜ್ಞರು ಘಟಕವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ಪಿಳ್ಳಕೇರನಹಳ್ಳಿ ಬಳಿಯಿರುವ ಕೊಳಚೆ ನೀರು ಶುದ್ಧೀಕರಣ ಘಟಕದ ಹೊರನೋಟ

ನಗರದ ಶುದ್ಧೀಕರಣ ಘಟಕ ಮಾದರಿಯಾಗಿದ್ದು, ವಿವಿಧ ಜಿಲ್ಲೆಗಳ ಸ್ಥಳೀಯ ಆಡಳಿತ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಇದೇ ರೀತಿ ನಿರ್ಮಾಣ ಮಾಡಲು ಅಲ್ಲಿಯೂ ಯೋಜನೆ ರೂಪಿಸಿದ್ದಾರೆ. ಆದರೆ, ಸ್ಥಳೀಯ ಆಡಳಿತ ಕೊಳಚೆ ನೀರನ್ನು ಘಟಕಕ್ಕೆ ಸರಬರಾಜು ಮಾಡಲು ವಿಫಲವಾಗಿದ್ದು, ಘಟಕವನ್ನು ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಘಟಕಕ್ಕೆ ಒಳಚರಂಡಿ ಮೂಲಕ ಕೊಳಚೆ ನೀರು ಹರಿಸಲು ಹರಿಸಲು ಮೂರು ಕಡೆ ಪ್ರತ್ಯೇಕವಾಗಿ ವೆಟ್‌ವೆಲ್‌ (ಪಂಪ್‌ಹೌಸ್‌) ನಿರ್ಮಿಸಲಾಗಿದೆ. ತಮಟಕಲ್ಲು ರಸ್ತೆ ಮಾರ್ಗದಲ್ಲಿ ಒಂದು ವೆಟ್‌ವೆಲ್ ಇದೆ. ಮಲ್ಲಾಪುರ ಕೆರೆ ಸಮೀಪ ಮತ್ತೊಂದು ವೆಟ್‌ವೆಲ್‌ ಇದೆ. ಕೊಳಚೆ ನೀರು ಹೆಚ್ಚಾಗಿ ಈ ವೆಟ್‌ವೆಲ್ ಕೆರೆಯೊಳಗೆ ಮುಳುಗಿ ಹೋಗಿದೆ. ಇದು ನಿರ್ಮಾಣವಾಗಿ ಹಲವು ವರ್ಷಗಳಾಗಿದ್ದರೂ ಉದ್ಘಾಟನೆ ಭಾಗ್ಯಕಂಡಿಲ್ಲ.

ತುರುವನೂರು ರಸ್ತೆ ಮತ್ತೊಂದು ವೆಟ್‌ವೆಲ್ ನಿರ್ಮಿಸಲಾಗಿದೆ. ಈ ಮೂರು ವೆಟ್‌ವೆಲ್‌ಗಳಿದ್ದರೂ ಪಿಳ್ಳೆಕೇರನಹಳ್ಳಿ ಘಟಕಕ್ಕೆ ಸಮರ್ಪಕವಾಗಿ ಕೊಳಚೆ ಹರಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಮಲ್ಲಾಪುರ ಕೆರೆ ವೆಟ್‌ವೆಲ್‌ನಿಂದ ಎಸ್‌ಟಿಪಿಗೆ ನೀರು ಸರಬರಾಜು ಮಾಡಲು ಪಿಳ್ಳೆಕೇರನಹಳ್ಳಿ ಗ್ರಾಮಸ್ಥರ ವಿರೋಧವಿದೆ. ಅಲ್ಲಿಂದ ವಿದ್ಯುತ್‌ ಒಊರೈಸಲೂ ಗ್ರಾಮಸ್ಥರು ಬಿಟ್ಟಿಲ್ಲ. ಗ್ರಾಮಸ್ಥರ ಮನವೊಲಿಸಿ ಘಟಕಕ್ಕೆ ಪೈಪ್‌ಲೈನ್‌ ಹಾಕಳವಡಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಬೃಹತ್‌ ಸಾಮರ್ಥ್ಯದ ಘಟಕವಿದ್ದರೂ ಅದರ ಸಂಪೂರ್ಣ ಲಾಭ ಪಡೆಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಲ್ಲಾಪುರ ಕೆರೆಗೆ ನಗರದ ಅಪಾರ ಪ್ರಮಾಣದ ಕೊಳಚೆ ನೀರು ನೇರವಾಗಿ ಸೇರಿಕೊಳ್ಳುತ್ತಿದೆ. ಬಳ್ಳಾರಿ ಹೆದ್ದಾರಿ ಬದಿ, ಬಾಪೂಜಿ ಶಾಲೆ ಬಳಿಯ ಸರ್ವೀಸ್‌ ರಸ್ತೆ ಬಳಿಯ ರಾಜಕಾಲುವೆ ಮೂಲಕ ಕೊಳಚೆ ನೀರು ಮಲ್ಲಾಪುರ ಕೆರೆ ಸೇರಿಕೊಳ್ಳುತ್ತಿದೆ. ಅಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ನೆಗಡಿ, ಕೆಮ್ಮು, ಜ್ವರ, ಚರ್ಮವ್ಯಾಧಿಯಿಂದ ಬಳಲುತ್ತಿದ್ದು, ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.

ಬಾಪೂಜಿ ವಿದ್ಯಾಸಂಸ್ಥೆ ಹಿಂಭಾಗದಲ್ಲಿ ರಾಜಕಾಲುವೆ ಮೂಲಕ ಮಲ್ಲಾಪುರ ಕೆರೆ ಸೇರುತ್ತಿರುವ ಕೊಳಚೆ ನೀರು

‘ಜಿಲ್ಲಾ ಆಸ್ಪತ್ರೆ ಭಾಗ, ದೊಡ್ಡಪೇಟೆ, ಬ್ಯಾಂಕ್‌ ಕಾಲೊನಿ, ಚಳ್ಳಕೆರೆ ಗೇಟ್‌ ಮುಂತಾದ ಭಾಗದ ಕೊಳಚೆ ನೀರು ಮಾತ್ರ ಪಿಳ್ಳೆಕೇರನಹಳ್ಳಿ ಕೊಳಚೆ ನೀರು ಶುದ್ಧೀಕರಣ ಘಟಕ ತಲುಪುತ್ತಿದೆ. ಉಳಿದ ಭಾಗಗಳ ಕೊಳಚೆ ನೀರು ನೇರವಾಗಿ ಮಲ್ಲಾಪುರ ಕೆರೆ ಸೇರುತ್ತಿದೆ. ಅಲ್ಲಿಂದ ಮುಂದೆ ಹರಿಯುವ ನೀರು ಗೋನೂರು ಕೆರೆ ಸೇರಿದಂತೆ ಸರಣಿ ಕೆರೆಗಳನ್ನೂ ಮಲಿನಗೊಳಿಸುತ್ತಿದೆ’ ಎಂದು ಸ್ಥಳೀಯರಾದ ತಿಪ್ಪೇಸ್ವಾಮಿ ಹೇಳಿದರು.

ನಗರದ 35 ವಾರ್ಡ್‌ಗಳ ಬಹುತೇಕ ಬಡಾವಣೆಗಳಲ್ಲಿ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ತ್ಯಾಜ್ಯದ ರಾಶಿಯೂ ತುಂಬಿಕೊಂಡು ಸರಾಗವಾಗಿ ಹರಿಯದಂತಹ ಸ್ಥಿತಿ ಇದೆ. ಇದರಿಂದ ಸಹಿಸಿಕೊಳ್ಳಲಾಗದ ದುರ್ವಾಸನೆಯ ಪರಿಸರದಲ್ಲಿ ಜನರು ವಾಸಿಸುವಂತಾಗಿದೆ. ಈ ಕೊಳಚೆಯನ್ನು ಎಸ್‌ಟಿಪಿಗೆ ಹರಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

ರಾಜ್ಯ ಸರ್ಕಾರದಿಂದ 2011ರಲ್ಲಿ ₹ 95 ಕೋಟಿ ವ್ಯಯಿಸಿ ಯುಜಿಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 264 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಆರಂಭಗೊಂಡಿತ್ತು. ಆದರೆ ಈವರೆಗೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಡಿಪಿಆರ್‌ ಪ್ರಕಾರ ಇನ್ನೂ 16,000 ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಚಳ್ಳಕೆರೆ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದು
ನಾನು ಇತ್ತೀಚೆಗಷ್ಟೇ ಎಸ್‌ಟಿಪಿ ಪರಿಶೀಲಿಸಿದ್ದೇನೆ. ನಗರದಲ್ಲಿ ಉತ್ಪತ್ತಿಯಾಗುವ ಎಲ್ಲಾ ಮಲಿನ ನೀರನ್ನು ಘಟಕಕ್ಕೆ ತಿರುಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು ಶೀಘ್ರ ಕಾರ್ಯರೂಪಕ್ಕೆ ಬರಲಿದೆ
ಟಿ. ವೆಂಕಟೇಶ್‌ ಜಿಲ್ಲಾಧಿಕಾರಿ
ಕೊಳಚೆ ನೀರು ಹರಿಯಲು ಪೈಪ್‌ಲೈನ್‌ ಅಳವಡಿಸುವಂತೆ ಮನವಿ ಮಾಡಿದ್ದೇವೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ. ಹಲವು ವರ್ಷಗಳಿಂದಲೂ ಕೊಳಚೆ ನೀರಿನಿಂದಾಗಿ ಹೈರಾಣಾಗಿದ್ದೇವೆ ಈಗಲಾದರೂ ಕೊಳಚೆ ನೀರಿನಿಂದ ನಮಗೆ ಮುಕ್ತಿ ಕೊಡಿ
ಮಂಜುನಾಥ್‌ ಸ್ಥಳೀಯರು
ಮಳೆ ಬಂದರೆ ಮಲ್ಲಾಪುರ ಕೆರೆ ಸಮೀಪದ ರಾಜಕಾಲುವೆ ಉಕ್ಕಿ ನಮ್ಮ ಮನೆ ಎದುರು ಕೊಳಚೆ ನೀರು ಬರುತ್ತದೆ. ಇದರಿಂದ ಮಕ್ಕಳಿಗೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ದುರ್ವಾಸನೆಯಿಂದ ಕಂಗಾಲಾಗಿದ್ದೇವೆ. ಯಾರೂ ನಮ್ಮ ಸಮಸ್ಯೆ ಕೇಳುತ್ತಿಲ್ಲ
ಕಣ್ಮಕ್ಕ ಸ್ಥಳೀಯರು

ಸ್ವಚ್ಛತೆ ಕಾಣದ ಚರಂಡಿಗಳು

ಹೊಳಲ್ಕೆರೆ: ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಗಣಪತಿ ದೇವಸ್ಥಾನದ ಹಿಂಭಾಗದ ಚೀರನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಚರಂಡಿ ತುಂಬಿ ವರ್ಷಗಳೇ ಕಳೆದರೂ ಸ್ವಚ್ಛಗೊಳಿಸಲಾಗಿಲ್ಲ. ಪಟ್ಟಣದ ಕೋಟೆ ಪ್ರದೇಶದ ನೀರೆಲ್ಲ ಇಲ್ಲಿ ಬಂದು ನಿಲ್ಲುತ್ತದೆ. ವರ್ಷಗಟ್ಟಲೇ ನೀರು ನಿಂತಿರುವುದರಿಂದ ದುರ್ವಾಸನೆ ಬೀರುತ್ತಿದೆ.

ಚರಂಡಿ ಪಕ್ಕದಲ್ಲೇ ಪ್ರೌಢಶಾಲೆ ಇದ್ದು ವಿದ್ಯಾರ್ಥಿಗಳೂ ಸಂಕಷ್ಟ ಅನುಭವಿಸುವಂತಾಗಿದೆ. ‘ಚರಂಡಿ ಆಳವಾಗಿರುವುದರಿಂದ ಇದರಲ್ಲಿ ಎಮ್ಮೆ ದನಗಳು ಬೀಳುತ್ತವೆ. ಜೆಸಿಬಿ ತರಿಸಿ ಅವುಗಳನ್ನು ಮೇಲಕ್ಕೆ ಎತ್ತಿಸಿದ್ದೇವೆ. ಚರಂಡಿ ಕಾಮಗಾರಿಯನ್ನು ಅರ್ಧಕ್ಕೇ ಬಿಟ್ಟಿರುವುದರಿಂದ ಈ ಸಮಸ್ಯೆ ಆಗಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಪಟ್ಟಣದ ವಿವಿಧ ಬಡಾವಣೆಗಳ ಸ್ಥಿತಿಯೂ ಇದೇ ರೀತಿ ಇದೆ.

ದಾವಣಗೆರೆ ರಸ್ತೆಯಲ್ಲಿರುವ ಹಿರೇಕೆರೆ ಕೋಡಿಗೆ ಚರಂಡಿ ನೀರು ಬಿಟ್ಟಿರುವುದರಿಂದ ಅವಳಿಹಟ್ಟಿ ರಸ್ತೆಯ ಅಯ್ಯನ ಕಟ್ಟೆಯಲ್ಲಿ ಕೊಳಚೆ ನೀರು ತುಂಬಿದೆ. ಪಟ್ಟಣದ ಬಸ್ ನಿಲ್ದಾಣ ಭಾಗದ ನೀರು ಶಿವನ ಕೆರೆ ಹೊರಭಾಗದಲ್ಲಿ ಹರಿಯುತ್ತಿದ್ದು ಕೆರೆ ಏರಿ ಕೆಳಗಿನ ಜಾಗ ಕೊಳಚೆ ಪ್ರದೇಶವಾಗಿದೆ. ಪಟ್ಟಣಕ್ಕೆ ಸುಸಜ್ಜಿತ ಚರಂಡಿ ವ್ಯವಸ್ಥೆ ಬೇಕು ಎಂಬುದು ಅವರ ಬೇಡಿಕೆ.

ಒಳಚರಂಡಿಯಲ್ಲಿ ಕಲ್ಲು ಮಣ್ಣು

ಚಳ್ಳಕೆರೆ: ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಮುಖ್ಯರಸ್ತೆ ಹೊರತುಪಡಿಸಿ ಯಾವ ಬಡಾವಣೆಯಲ್ಲೂ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ನಗರ ಪ್ರದೇಶದಲ್ಲಿ ಹಾದು ಹೋಗಿರುವ ರಾಜಕಾಲುವೆ ತುಂಬೆಲ್ಲಾ ಘನತ್ಯಾಜ್ಯ ಹಳೆಕಟ್ಟಡಗಳ ಕಲ್ಲು ಮಣ್ಣು ಸಿಮೆಂಟ್ ಚೂರುಗಳ ರಾಶಿ ಬಿದ್ದಿದೆ.

ಕೊಳಚೆನೀರು ಎಲ್ಲೆಂದರಲ್ಲಿ ಹರಿಯುವಂತಾಗಿದೆ. ಹಳೆ ಟೌನ್ ಗಾಂಧಿನಗರ ರಹಿಂ ನಗರ ಅಂಬೇಡ್ಕರ್‌ ನಗರ ಜನತಾ ಕಾಲೊನಿ ಇಂಜನಹಟ್ಟಿ ಮದಕರಿ ನಗರ ಸೇರಿದಂತೆ ಹಲವೆಡೆ ತೆರೆದ ಚರಂಡಿ ಮೇಲೆ ಅಕ್ರಮ ಕಾಂಪೌಂಡ್‌ ಶೌಚಾಲಯ ನಿರ್ಮಿಸಲಾಗಿದೆ. ಇದರಿಂದಾಗಿ ಹಂದಿ ಮತ್ತು ಸೊಳ್ಳೆಗಳ ಸಂಖ್ಯೆ ಅಧಿಕವಾಗಿದ್ದು ಕೆಲ ವಾರ್ಡ್‌ಗಳು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ದುಃಸ್ಥಿತಿಯಲ್ಲಿರುವ ಚರಂಡಿಗೆ ಹಳೆ ಪ್ಲಾಸ್ಟಿಕ್ ಪೇಪರ್ ಸೂಪರ್‌ಕವರ್ ಜತೆಗೆ ತ್ಯಾಜ್ಯ ಎಸೆಯಲಾಗಿದೆ. ಸ್ವಚ್ಛತೆ ಇಲ್ಲದ ಕಾರಣ ಅಲ್ಲಲ್ಲಿ ಚರಂಡಿ ಮುಚ್ಚಿಹೋಗಿವೆ.

‘ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಸ್ವಚ್ಛತೆಯ ಸಮಸ್ಯೆ ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ. ಜನರು ಬಳಸಿದ ನೀರು ಮತ್ತು ತ್ಯಾಜ್ಯ ನೇರವಾಗಿ ರಾಜಕಾಲುವೆ ಮೂಲಕ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ರಂಗಸ್ವಾಮಿ ಮನವಿ ಮಾಡಿದ್ದಾರೆ.

ಕೊನೆಗೂ ಕೂಡಿ ಬಂದ ಒಳಚರಂಡಿ

ಮೊಳಕಾಲ್ಮುರು: ಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಒಳಚರಂಡಿ ವ್ಯವಸ್ಥೆ ಅನುಷ್ಠಾನಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ಜನಸಂಖ್ಯೆ ಕಡಿಮೆ ಹಾಗೂ ತ್ಯಾಜ್ಯ ನೀರು ಹರಿವಿನ ಪ್ರಮಾಣದ ಕಾರಣದಿಂದಾಗಿ ಒಳಚರಂಡಿ ವ್ಯವಸ್ಥೆಗೆ ಅನುಮೋದನೆ ಸಿಕ್ಕಿರಲಿಲ್ಲ.

ದೊಡ್ಡಪೇಟೆ ಕೋಟೆ ಬಡಾವಣೆ ಮುಬಾರಕ್‌ ಮೊಹಲ್ಲಾ ಶ್ರೀನಿವಾಸ ನಾಯಕ ಬಡಾವಣೆ ಸೇರಿದಂತೆ ಹಲವು ಕಡೆ ಸಣ್ಣ ಚರಂಡಿಗಳಲ್ಲಿ ತ್ಯಾಜ್ಯ ನೀರು ಹರಿಯಬೇಕಿದೆ. ಇವು ತುಂಬಿ ರಸ್ತೆಮೇಲೆ ಬೇಕಾಬಿಟ್ಟಿ ನೀರು ಹರಿದು ನಿಲ್ಲುವುದು ಸಾಮಾನ್ಯವಾಗಿತ್ತು. 2023-204ನೇ ಸಾಲಿನಲ್ಲಿ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯು ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಗೆ ಅನುಮೋದನೆ ನೀಡಿದೆ. ಇದಕ್ಕಾಗಿ ₹ 13.40 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕೆಲ ಹೊಸ ಬಡಾವಣೆಗಳು ಈ ಕ್ರಿಯಾಯೋಜನೆಯಲ್ಲಿ ಬಿಟ್ಟು ಹೋಗಿವೆ ಎಂಬ ಆರೋಪವಿದ್ದು ಸೇರಿಸಲು ಸೂಚಿಸಲಾಗಿದೆ. ವರದಿ ನಂತರ ಅಗತ್ಯ ಅನುದಾನಕ್ಕೂ ಮನವಿ ಮಾಡಲಾಗುವುದು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿಯಲ್ಲೂ ಒಳಚರಂಡಿ ವ್ಯವಸ್ಥೆಗೆ ₹ 13.40 ಕೋಟಿ ಅನುದಾನ ಮಂಜೂರಾಗಿದೆ. ಎರಡೂ ಕಾಮಗಾರಿಗಳಿಗೆ ಈ ತಿಂಗಳು ಚಾಲನೆ ದೊರೆಯಲಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಪೂರಕ ಮಾಹಿತಿ: ಸಾಂತೇನಹಳ್ಳಿ ಸಂದೇಶ್ ಗೌಡ, ಶಿವಗಂಗಾ ಚಿತ್ತಯ್ಯ, ಕೊಂಡ್ಲಹಳ್ಳಿ ಜಯಪ್ರಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.