
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150ಎ ನಿರ್ಮಾಣಗೊಂಡ ನಂತರ ಪಿಳ್ಳೇಕೆರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳ ಪ್ರಾಣಕ್ಕೆ ಕಂಟಕ ಎದುರಾಗಿದೆ. ವಿದ್ಯಾರ್ಥಿಗಳು ಶಾಲೆಗೆ ತಲುಪಲು ಅಪಾಯಕಾರಿ ಹೆದ್ದಾರಿ ದಾಟಿ ಬರಬೇಕಾದ ಅನಿವಾರ್ಯತೆ ಇದ್ದು, ಪ್ರಾಣ ಭೀತಿ ಎದುರಿಸುತ್ತಿದ್ದಾರೆ.
6 ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡ ನಂತರ ಪಿಳ್ಳೇಕೆರೇಹಳ್ಳಿ ಎರಡು ಭಾಗವಾಗಿ ಹೋಳಾಗಿದೆ. ಹಳೇ ಊರಿನ ಮಕ್ಕಳು ಹೊಸ ಭಾಗದಲ್ಲಿರುವ ಶಾಲೆಗೆ ಬರುತ್ತಾರೆ. ಅವರು ಹೆದ್ದಾರಿ ದಾಟಲು ಮೇಲ್ಸೇತುವೆ ಅಥವಾ ಕೆಳಸೇತುವೆ ಸೌಲಭ್ಯ ಒದಗಿಸಿಲ್ಲ. ಹೆದ್ದಾರಿ ನಿರ್ಮಾಣವಾದ ದಿನದಿಂದಲೂ ಗ್ರಾಮಸ್ಥರು ಕೆಳಸೇತುವೆ ನಿರ್ಮಿಸಿಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಅವರ ಬೇಡಿಕೆ ಈಡೇರಿಲ್ಲ.
ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 46 ವಿದ್ಯಾರ್ಥಿಗಳು, ಅಂಗನವಾಡಿಯಲ್ಲಿ 15 ಚಿಣ್ಣರು ಕಲಿಯುತ್ತಿದ್ದಾರೆ. ಬಹುತೇಕ ಇವರೆಲ್ಲರೂ ರಸ್ತೆಯ ಇನ್ನೊಂದು ಕಡೆಯಿರುವ ಮನೆಗಳಿಂದಲೇ ಬರುತ್ತಾರೆ. ಶಾಲೆಗೆ ಬರಲು ಅನ್ಯ ಮಾರ್ಗವೇ ಇಲ್ಲದೇ ಇರುವುದರಿಂದ ಅನಿವಾರ್ಯವಾಗಿ ಹೆದ್ದಾರಿ ದಾಟಿಕೊಂಡೇ ಬರಬೇಕಾಗಿದೆ. ಕಬ್ಬಿಣದ ಅದಿರು ತುಂಬಿದ ಗಣಿ ಲಾರಿಗಳು, ಟ್ರಕ್ ಸೇರಿದಂತೆ ನಿತ್ಯ ಸಾವಿರಾರು ವಾಹನಗಳು ಈ ಹೆದ್ದಾರಿಯಲ್ಲಿ ಓಡಾಡುತ್ತವೆ. ಹೀಗಾಗಿ ಪುಟಾಣಿಗಳ ಪ್ರಾಣ ಅಪಾಯದಲ್ಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.
ಪ್ರತಿದಿನ ಬೆಳಿಗ್ಗೆ ಪೋಷಕರ ನಿಗಾದಲ್ಲೇ ವಿದ್ಯಾರ್ಥಿಗಳು ಹೆದ್ದಾರಿ ದಾಟಿ ಶಾಲೆಗೆ ಬರುತ್ತಾರೆ. ಬೆಳಿಗ್ಗೆ ಅವಧಿಯಲ್ಲಿ ರಸ್ತೆಯಲ್ಲಿ ಹೆಚ್ಚು ವಾಹನಗಳ ಓಡಾಟವಿರುತ್ತದೆ. ಶಾಲೆ ಮುಖ್ಯ ಸರ್ಕಲ್‌ನಿಂದ ಕೊಂಚ ದೂರದಲ್ಲಿರುವ ಕಾರಣ ಅಲ್ಲಿ ಟ್ರಾಫಿಕ್ ಪೊಲೀಸರು ಇರುವುದಿಲ್ಲ. ಪೋಷಕರು ಎಚ್ಚರಿಕೆಯಿಂದಲೇ ಮಕ್ಕಳನ್ನು ದಾಟಿಸಬೇಕಾಗಿದೆ.
ಸಂಜೆ ಶಾಲೆ ಮುಗಿದ ನಂತರ ಪೋಷಕರು ಅವರನ್ನು ಕರೆದುಕೊಂಡು ಹೋಗುವುದಿಲ್ಲ. ಆಗ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವ ಜವಾಬ್ದಾರಿ ಶಿಕ್ಷಕರ ಮೇಲೆ ಬೀಳುತ್ತದೆ. ಶಿಕ್ಷಕರು ಹೆದ್ದಾರಿಯಲ್ಲೇ ನಿಂತು ವಾಹನಗಳ ಕಡೆಗೆ ಕೈ ತೋರಿಸುತ್ತಾ ಎಚ್ಚರಿಕೆಯಿಂದ ರಸ್ತೆ ದಾಟಿಸುತ್ತಾರೆ. ಮಕ್ಕಳು ರಸ್ತೆ ದಾಟಿ ಮನೆಗೆ ತಲುಪುವವರೆಗೂ ಜೀವವನ್ನು ಕೈಯಲ್ಲಿ ಹಿಡಿದು ಕರ್ತವ್ಯ ನಿರ್ವಹಿಸುತ್ತಾರೆ.
‘ಶಾಲೆ ಬಿಡುವ ವೇಳೆಗೆ ನಾವು ಕೂಲಿ ಕೆಲಸಕ್ಕೆ, ಕೃಷಿ ಕೆಲಸಕ್ಕೆ ತೆರಳಿರುತ್ತೇವೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಬರಲು ಆಗುವುದಿಲ್ಲ. ನಮ್ಮ ಮಕ್ಕಳನ್ನು ಶಿಕ್ಷಕರೇ ಹೆದ್ದಾರಿ ದಾಟಿಸಿ ಕಳುಹಿಸುತ್ತಾರೆ. ಯಾವಾಗ ಕೆಳ ಸೇತುವೆ ಮಾಡುತ್ತಾರೋ ಗೊತ್ತಿಲ್ಲ. ಆದರೆ, ತಕ್ಷಣಕ್ಕೆ ಒಂದು ಸ್ಕೈವಾಕ್ ಆದರೂ ನಿರ್ಮಿಸಬೇಕು’ ಎಂದು ಪೋಷಕರೊಬ್ಬರು ಒತ್ತಾಯಿಸಿದರು.
ಪಿಳ್ಳೇಕೆರೇನಹಳ್ಳಿ ಗ್ರಾಮದ ಶಾಲೆಯಷ್ಟೇ ಅಲ್ಲದೇ ಹೆದ್ದಾರಿ ಬದಿಯಲ್ಲಿ ಇನ್ನೂ 3 ಖಾಸಗಿ ಶಾಲೆ, ಕಾಲೇಜುಗಳಿವೆ. ಬಳ್ಳಾರಿ ಕಡೆ ತೆರಳುವ ಹೆದ್ದಾರಿಯ ಎಡಭಾಗದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಿವೆ. ಬಲಭಾಗಕ್ಕೆ ಚಿನ್ಮೂಲಾದ್ರಿ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಿವೆ. ಪಿಳ್ಳೇಕೆರೇನಹಳ್ಳಿ ಸರ್ಕಾರಿ ಶಾಲೆಯ ಎದುರಿನಲ್ಲೇ ರಸ್ತೆಯ ಬಲಭಾಗಕ್ಕೆ ಎಸ್‌ಆರ್‌ಎಸ್ ಸಂಸ್ಥೆಯ ಶಾಲಾ, ಕಾಲೇಜುಗಳಿವೆ.
‘ಶಾಲೆಗಳಿಗೆ ಹಲವು ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಬರುತ್ತಾರೆ. ಕೆಲ ಪೋಷಕರು ತಮ್ಮ ವೈಯಕ್ತಿಕ ವಾಹನಗಳಲ್ಲೇ ಶಾಲೆಗಳಿಗೆ ತಂದು ಬಿಡುತ್ತಾರೆ. ಆರೇಳು ತಿಂಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿಯೊಬ್ಬ ರಸ್ತೆ ದಾಟುವಾಗ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ. ನಂತರ ಈ ಭಾಗದಲ್ಲಿ ರಸ್ತೆ ದಾಟುವುದು ಭಯದ ವಿಚಾರವಾಗಿದೆ. ಮಕ್ಕಳ ಪ್ರಾಣ ಸಂರಕ್ಷಿಸುವ ಸಲುವಾಗಿ ಇಲ್ಲೊಂದು ಸ್ಕೈವಾಕ್ ನಿರ್ಮಾಣಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಕೊಳಕು ನೀರಿನ ದುರ್ವಾಸನೆ
ಪಿಳ್ಳೇಕೆರೇನಹಳ್ಳಿ ಶಾಲೆ ಗೋನೂರು ಕೆರೆಗೆ ಹೊಂದಿಕೊಂಡಂತಿದ್ದು ಕೆರೆಗೆ ಸೇರುವ ನಗರದ ಕೊಳಕು ನೀರು ಮಕ್ಕಳಿಗೆ ರೋಗಭೀತಿ ತರುತ್ತಿದೆ. ಹೆಚ್ಚು ಮಳೆ ಬಂದಾಗ ಪ್ರವಾಹ ಬಂದಾಗ ಕೆರೆ ನೀರು ನೇರವಾಗಿ ಶಾಲಾ ಆವರಣಕ್ಕೂ ಬರುತ್ತಿತ್ತು. ಆದರೆ ಈಗ ತಡೆಗೋಡೆ ನಿರ್ಮಾಣ ಮಾಡಿರುವ ಕಾರಣ ನೀರು ಬರುತ್ತಿಲ್ಲ. ಆದರೆ ದುರ್ವಾಸನೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಕಾಡುತ್ತಿದೆ. ‘ನೀರನ್ನು ಶುದ್ಧೀಕರಣ ಮಾಡದೇ ನೇರವಾಗಿ ಕೆರೆಗೆ ಹರಿಸುತ್ತಿರುವ ಕಾರಣ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ಕುರಿತು ಹಲವು ಬಾರಿ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮವಾಗಿಲ್ಲ’ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.
ನಿತ್ಯ ಯಾವ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಹೆದ್ದಾರಿ ದಾಟಿಸಿ ಮನೆಗೆ ಕಳುಹಿಸುವುದನ್ನು ಮಾತ್ರ ಮರೆಯುವುದಿಲ್ಲ. ನಾನೇ ರಸ್ತೆಯಲ್ಲಿ ನಿಂತು ಅವರನ್ನು ರಸ್ತೆ ದಾಟಿಸುತ್ತೇನೆ–ಎನ್.ಬಿ.ನಂದಾ, ಮುಖ್ಯಶಿಕ್ಷಕಿ ಪಿಳ್ಳೇಕೆರೇನಹಳ್ಳಿ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.