ADVERTISEMENT

ಕವಾಡಿಗರಹಟ್ಟಿಯಲ್ಲಿ ಜೆಸಿಬಿಗಳ ಘರ್ಜನೆ: ರಸ್ತೆ ತಡೆ ನಡೆಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:29 IST
Last Updated 14 ಜನವರಿ 2026, 7:29 IST
ಕಾವಾಡಿಗರಹಟ್ಟಿಯಲ್ಲಿ ಒತ್ತುವರಿ ತೆರವಿಗಾಗಿ ಅಧಿಕಾರಿಗಳು ಬಂದಾಗ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು
ಕಾವಾಡಿಗರಹಟ್ಟಿಯಲ್ಲಿ ಒತ್ತುವರಿ ತೆರವಿಗಾಗಿ ಅಧಿಕಾರಿಗಳು ಬಂದಾಗ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು   

ಚಿತ್ರದುರ್ಗ: ಸೊಲ್ಲಾಪುರ– ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ– 369 ನಿರ್ಮಾಣಕ್ಕೆ ತೊಡಕಾಗಿದ್ದ ಕವಾಡಿಗರಹಟ್ಟಿಯ ರಸ್ತೆಬದಿ ಒತ್ತುವರಿ ಮನೆಗಳ ತೆರವು ಕಾರ್ಯ ಮಂಗಳವಾರ ನಡೆಯಿತು. ಬೆಳಿಗ್ಗೆ ಜೆಸಿಬಿಗಳು ಸ್ಥಳಕ್ಕೆ ಬರುತ್ತಿದ್ದಂತೆ ರಸ್ತೆಗಿಳಿದ ಸ್ಥಳೀಯರು ಮೊದಲು ಬದಲಿ ನಿವೇಶನದ ಹಕ್ಕುಪತ್ರ ನೀಡಿ, ಪರಿಹಾರ ತಾರತಮ್ಯ ಸರಿಪಡಿಸಿ ಬಳಿಕ ಕಾರ್ಯಾಚರಣೆ ನಡೆಸಿ ಎಂದು ಆಗ್ರಹಿಸಿದರು.

ರಸ್ತೆಯ ಒಂದು ಬದಿ ತೆರವು ಕಾರ್ಯ ನಡೆಸಲು ಮುಂದಾಗುತ್ತಿದ್ದಂತೆ ಆಕ್ರೋಶಗೊಂಡ ನಿವಾಸಿಗಳು ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಮಾಡಬಾರದು. ಮಾತಿನಂತೆ ನಮಗೆ ಮೊದಲು ಪರಿಹಾರ, ವಸತಿ ಸೌಲಭ್ಯ ಕಲ್ಪಿಸಿ ಎಂದು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಾರ್ಯಾಚರಣೆಗೆ ತಾತ್ಕಾಲಿಕ ವಿರಾಮ ನೀಡಲಾಯಿತು.

ದಲಿತ ಸಂಘರ್ಷ ಸಮಿತಿ ಮುಖಂಡರು ಅರೆಬೆತ್ತಲೆಯಾಗಿ ನಿಂತು ಪಾದರಕ್ಷೆಗಳಿಂದ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನೀಡಿರುವ ಪರಿಹಾರ ಅತ್ಯಂತ ಕಡಿಮೆ ಆಗಿದೆ. ಕೂಡಲೇ ಅದನ್ನು ವಾಪಸ್‌ ಕೊಡುತ್ತೇವೆ. ನಮಗೆ ನಿವೇಶನ, ಮನೆ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಾವು ಮನೆ ಖಾಲಿ ಮಾಡಲು ಸಿದ್ಧರಿದ್ದೇವೆ. ಆದರೆ, ಈಗಾಗಲೇ ಗುರುತಿಸಿರುವ ಸ್ಥಳದ ನಿವೇಶನದ ಹಕ್ಕು ಪತ್ರ ನೀಡಬೇಕು. ಜತೆಗೆ ಪರಿಹಾರ ತಾರತಮ್ಯ ಸರಿಪಡಿಸಬೇಕು. ಅಲ್ಲಿಯವರೆಗೂ ನಾವು ಈ ಸ್ಥಳದಿಂದ ಬಿಟ್ಟು ಹೋಗುವುದಿಲ್ಲ. ಮನೆಗಳನ್ನು ನೆಲಸಮಗೊಳಿಸಿದರೆ ನಾವು ಬೀದಿಗೆ ಬೀಳುತ್ತೇವೆ’ ಎಂದು ಅಳಲು ತೋಡಿಕೊಂಡರು.

‘ಅಧಿಕಾರಿಗಳು ಸಮಸ್ಯೆ ಪರಿಹರಿಸಿದರೆ ನಾವುಗಳೇ ಸ್ವಯಂ ಪ್ರೇರಣೆಯಿಂದ ಮನೆ ಖಾಲಿ ಮಾಡುತ್ತೇವೆ. ಇಲ್ಲವಾದರೆ ಯಾವುದೇ ಕಾರಣಕ್ಕೂ ಇಲ್ಲಿಂದ ನಾವು ತೆರಳುವುದಿಲ್ಲ’ ಎಂದು ಪಟ್ಟು ಹಿಡಿದರು.

‘ರಸ್ತೆ ವಿಸ್ತರಣೆಗೆ ಕವಾಡಿಗರಹಟ್ಟಿಯಲ್ಲಿ 39 ಮನೆಗಳನ್ನು ತೆರೆವುಗೊಳಿಸಲು ಗುರುತಿಸಲಾಗಿದೆ. ಈಗಾಗಲೇ ಕವಾಡಿಗರಹಟ್ಟಿ 1ನೇ ಹಂತದಲ್ಲಿ 102 ಆಶ್ರಯ ನಿವೇಶನಗಳು ಸಿದ್ಧಗೊಂಡಿವೆ. ಆದರೆ, ಈವರೆಗೂ ಹಕ್ಕುಪತ್ರ ಮಾತ್ರ ನೀಡಿಲ್ಲ. ಒಂದು ವೇಳೆ ಹಕ್ಕುಪತ್ರ ನೀಡದಿದ್ದರೆ ನಾವು ಬೀದಿಗೆ ಬೀಳುತ್ತೇವೆ. ಅದಕ್ಕಾಗಿ ಹಕ್ಕುಪತ್ರ ವಿತರಣೆ ಮಾಡುವವರೆಗೂ ತೆರವು ಕಾರ್ಯ ಮುಂದೂಡಬೇಕು. ಹಕ್ಕುಪತ್ರ ನಮ್ಮ ಕೈ ಸೇರುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ಮನೆಗಳನ್ನು ಖಾಲಿ ಮಾಡುತ್ತೇವೆ’ ಎಂದು ತಿಳಿಸಿದರು.

ನಿವಾಸಿಗಳ ಸಮಸ್ಯೆ ಆಲಿಸಿದ ಅಧಿಕಾರಿಗಳು, ‘ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸುತ್ತೇವೆ’ ಎಂದು ಭರವಸೆ ನೀಡಿದರು. ಇದಕ್ಕೆ ಸ್ಪಂದಿಸಿದ ನಿವಾಸಿಗಳು ಕಾರ್ಯಾಚರಣೆ ನಡೆಸಬಾರದು ಎಂಬ ಷರತ್ತಿನೊಂದಿಗೆ ಪ್ರತಿಭಟನೆ ಕೈಬಿಟ್ಟು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮುರುಘಾ ಮಠದ ಮುಂಭಾಗದಿಂದ ಹೊಳಲ್ಕೆರೆ ರಸ್ತೆವರೆಗೆ ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 5 ಕಿ.ಮೀ ಸಾಗುತ್ತದೆ. ನಗರದಿಂದ ಶಿವಮೊಗ್ಗದವರೆಗೂ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೆಲವೆಡೆ ಅಲ್ಪಸ್ವಲ್ಪ ಕಾಮಗಾರಿ ಬಾಕಿ ಉಳಿದಿದೆ.

ವಿಳಂಬವೇ ಸಮಸ್ಯೆಗೆ ಕಾರಣ

‘ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಸಕರು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಹಂಗಾಮಿಯಾಗಿ ಮನೆ ಕಟ್ಟಿಕೊಂಡಿದ್ದ ನಿವಾಸಿಗಳಿಗೆ ಅಡಿಗೆ ₹ 2000 ಹಕ್ಕುಪತ್ರ– ಖಾತೆ ಹೊಂದಿರುವ ಜನರಿಗೆ ಅಡಿಗೆ ₹ 6000 ಪರಿಹಾರ ನಿಗದಿ ಮಾಡಲಾಗಿದೆ. ನಿವಾಸಿಗಳಿಗೆ ₹ 4 ಲಕ್ಷದಿಂದ ₹ 40 ಲಕ್ಷದವರೆಗೆ ಪರಿಹಾರ ಒಂದೂವರೆ ವರ್ಷದ ಹಿಂದೆಯೇ ನೀಡಲಾಗಿದೆ. ಜೊತೆಗೆ ಆಶ್ರಯ ನಿವೇಶನ ಕೊಟ್ಟು ಮನೆ ಕಟ್ಟಿಸಿಕೊಳ್ಳಲು ₹ 4 ಲಕ್ಷ ಸಾಲ ಸೌಲಭ್ಯ ಕೊಡಿಸುವುದಾಗಿ ತಿಳಿಸಲಾಗಿದೆ. ಆದ್ದರಿಂದ ಈ ವಿಷಯದಲ್ಲಿ ಎಲ್ಲರೂ ನಮ್ಮ ಪರವಾಗಿದ್ದಾರೆ. ಆದರೆ ಹಕ್ಕುಪತ್ರ ವಿತರಣೆ ವಿಳಂಬ ಸಮಸ್ಯೆಗೆ ಕಾರಣವಾಗಿದೆ’ ಎಂದು ಸ್ಥಳೀಯ ನಿವಾಸಿ ರಾಜೇಶ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.