ADVERTISEMENT

ಚಿತ್ರದುರ್ಗ| ಮೌಲ್ಯಯುತ ಭಾರತಕ್ಕೆ ಶರಣರ ತತ್ವಗಳು ಸಹಕಾರಿ: ಉಪವಿಭಾಗಾಧಿಕಾರಿ

ಕಾಯಕ ಶರಣರ ಜಯಂತಿ; ಉಪವಿಭಾಗಾಧಿಕಾರಿ ವೆಂಕಟೇಶ್‌ ನಾಯ್ಕ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:46 IST
Last Updated 11 ಫೆಬ್ರುವರಿ 2026, 7:46 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಆಚರಿಸಲಾಯಿತು   

ಚಿತ್ರದುರ್ಗ: ‘12ನೇ ಶತಮಾನದ ಶರಣರ ಸಂದೇಶಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಮೌಲ್ಯಯುತ ಭಾರತ ನಿರ್ಮಾಣ ಸಾಧ್ಯ’ ಎಂದು ಉಪವಿಭಾಗಾಧಿಕಾರಿ ವೆಂಕಟೇಶ್‌ ನಾಯ್ಕ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಯುವ ಪೀಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಮಾರುಹೋಗದೆ, ಇತಿಹಾಸ ಮತ್ತು ಶರಣರು ಹಾಕಿಕೊಟ್ಟ ಬದುಕಿನ ದಾರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ಕಾಯಕವೇ ಕೈಲಾಸ ಎಂಬ ತತ್ವ ಕೇವಲ ಘೋಷಣೆಯಾಗಬಾರದು. ಸ್ವಾರ್ಥ ಜೀವನದ ಜತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೌಲಭ್ಯ ತಲುಪಬೇಕು. ಈ ನಿಟ್ಟಿನಲ್ಲಿ ಏನಾದರೂ ಬೇಡಿಕೆಗಳಿದ್ದರೆ ಜಿಲ್ಲಾಡಳಿತ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಿದೆ’ ಎಂದು ತಿಳಿಸಿದರು.

ADVERTISEMENT

‘900 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆಯ ವಿರುದ್ಧ ಕಾಯಕ ಶರಣರು ಕ್ರಾಂತಿ ಮಾಡಿದರು. ಭಕ್ತಿಯಲ್ಲಿ ಮೇಲು-ಕೀಳಿಲ್ಲ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದ ಅವರ ವಿಚಾರಧಾರೆಗಳು ಆಧುನಿಕ ಸಮಾಜಕ್ಕೆ ಅತ್ಯಗತ್ಯವಾಗಿವೆ’ ಎಂದು ಸಾಹಿತಿ ಎಚ್‌.ಆನಂದ ಹೇಳಿದರು.

‘ಶರಣರು ಬೋದಿಸಿದ ಕಾಯಕವೇ ಕೈಲಾಸ ಎನ್ನುವ ತತ್ವ, ಶ್ರಮಜೀವಿಗಳ ಬದುಕು ಮತ್ತು ಪ್ರಾಮಾಣಿಕ ಕಾಯಕವೇ ಶ್ರೇಷ್ಠವೆಂಬುದನ್ನು ಸಾರುತ್ತದೆ. ಭಕ್ತಿಯು ಕೇವಲ ಆಚರಣೆಯಾಗದೆ, ಮೂಢನಂಬಿಕೆಗಳನ್ನು ಪ್ರಶ್ನಿಸುವ ಅರಿವಿನ ಹಾದಿಯಾಗಬೇಕು’ ಎಂದರು.

‘ಪ್ರತಿಯೊಬ್ಬರಲ್ಲೂ ವೈಚಾರಿಕ ಮನೋಭಾವ ಮೂಡಬೇಕು. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ವ್ಯಕ್ತಿಯ ಗುಣ ಮತ್ತು ಸಮಾಜಮುಖಿ ಚಿಂತನೆಗಳು ಅವನನ್ನು ಉನ್ನತ ಸ್ಥಾನಕ್ಕೇರಿಸುತ್ತವೆ. ವಚನ ಸಾಹಿತ್ಯವು ಕೇವಲ ಸಾಹಿತ್ಯವಲ್ಲ, ಅದು ಅಸಮಾನತೆ ಮತ್ತು ಮೂಲಭೂತವಾದಕ್ಕೆ ಇರುವ ಮದ್ದಾಗಿದೆ’ ಎಂದು ಹೇಳಿದರು.

‘ಶರಣರ ತತ್ವಗಳು ಮತ್ತು ಸಂದೇಶಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೆ ಅವುಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದು ಅತ್ಯಗತ್ಯ. ಈ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶರಣರ ವಚನಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಎಲ್ಲಾ ಕಾಲೇಜು ಹಾಗೂ ಗ್ರಂಥಾಲಯಗಳಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಮುಂದಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ ಛಲವಾದಿ ತಿಳಿಸಿದರು.

ಲಲಿತ ಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್‌, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಶಿವಣ್ಣ, ಉಪಾಧ್ಯಕ್ಷ ಡಿ.ಎನ್‌.ಮೈಲಾರಪ್ಪ, ತಹಶೀಲ್ದಾರ್‌ ಬಿ.ಎಂ.ಗೋವಿಂದರಾಜು, ದಲಿತ ಮುಖಂಡರಾದ ಹನುಮಂತಪ್ಪದುರ್ಗ, ರಾಜಪ್ಪ, ಎಂ.ತಿಪ್ಪೇಸ್ವಾಮಿ ಇದ್ದರು.

ಜಯಂತಿಗಳು ಕೇವಲ ಸಾಂಕೇತಿಕ ಆಚರಣೆಯಾಗಬಾರದು. ಅವು ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಸುಧಾರಣೆ ತರಬೇಕು
ವೆಂಕಟೇಶ್‌ ನಾಯ್ಕ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.