ಚಿತ್ರದುರ್ಗ: ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ಬಿ.ಡಿ. ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರೈತರು ಮತ್ತು ವಿದ್ಯಾರ್ಥಿಗಳು, ‘ಇದೊಂದು ಅವೈಜ್ಞಾನಿಕ ಕ್ರಮವಾಗಿದೆ’ ಎಂದು ದೂರಿದ್ದು, ‘ಸಂಚಾರ ಸ್ಥಗಿತ ಬೇಡ’ ಎಂದು ಒತ್ತಾಯಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಬಿ.ಡಿ. ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸುವ ವಿಷಯ ಪ್ರಸ್ತಾಪಿಸಿದರು. ‘ಗಾಂಧಿ ವೃತ್ತ, ಪ್ರವಾಸಿ ಮಂದಿರ, ಮದಕರಿ ವೃತ್ತ, ಚಳ್ಳಕೆರೆ ಸರ್ಕಲ್‌ನಲ್ಲಿ ಸಂಚಾರ ನಿರ್ವಹಣೆಗಾಗಿ ಈ ಕ್ರಮ ಅನಿವಾರ್ಯ’ ಎಂದು ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಒಪ್ಪಿಗೆ ಸೂಚಿಸಿದ ಕಾರಣ ಈ ಕುರಿತು ಶೀಘ್ರ ಆದೇಶ ಹೊರಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಗರ ಪ್ರವೇಶಿಸುವ ವಾಹನಗಳು ಚಳ್ಳಕೆರೆ ಗೇಟ್ ಮೂಲಕ ಹಳೇ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ, ಮುರುಘಾ ಮಠ, ದಾವಣಗೆರೆ ರೈಲ್ವೆ ಗೇಟ್ ಮೂಲಕ ಬಸ್ ನಿಲ್ದಾಣ ಪ್ರವೇಶಿಸಬೇಕು ಎಂಬ ಬದಲಿ ಮಾರ್ಗವನ್ನು ಸಭೆಯಲ್ಲಿ ಸೂಚಿಸಲಾಯಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಈ ಕ್ರಮವನ್ನು ಎರಡು ವರ್ಷಗಳ ಹಿಂದೆಯೇ ಕೈಗೊಳ್ಳಲಾಗಿತ್ತು. ಸಾರ್ವಜನಿಕರ ವಿರೋಧದ ನಂತರ ಕೈಬಿಡಲಾಯಿತು. ಈಗಲೂ ಅಂಥದ್ದೇ ವಿರೋಧ ವ್ಯಕ್ತವಾಗುತ್ತದೆ ಎಂದರು. ಇದನ್ನು ಪರಿಗಣಿಸದ ಎಸ್‌ಪಿ, ‘ಸ್ಥಳೀಯವಾಗಿ ನಗರ ಸಾರಿಗೆ ಬಸ್ ಓಡಿಸಬೇಕು’ ಎಂದು ಸೂಚಿಸಿದರು.
ಚಳ್ಳಕೆರೆ ಗೇಟ್‌ನಿಂದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದವರೆಗೆ 10ಕ್ಕೂ ಹೆಚ್ಚು ಕಾಲೇಜುಗಳಿವೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಕಾಲೇಜು ಸರ್ಕಲ್‌ನಲ್ಲಿ ಇಳಿದುಕೊಳ್ಳುತ್ತಾರೆ. ಇಲ್ಲಿ ಸಾರಿಗೆ ಸಂಸ್ಥೆ ಬಸ್ ಬಾರದಿದ್ದರೆ ಚಳ್ಳಕೆರೆ ಗೇಟ್‌ನಲ್ಲಿ ಇಳಿದು ಕಾಲೇಜುವರೆಗೆ ಆಟೊದಲ್ಲಿ ಅಥವಾ ನಡಿಗೆಯಲ್ಲಿ ಬರಬೇಕಾಗುತ್ತದೆ.
ಮುಖ್ಯವಾಗಿ ಜಿಲ್ಲಾ ಆಸ್ಪತ್ರೆ ಇದೇ ಮಾರ್ಗದಲ್ಲಿದ್ದು ಆಸ್ಪತ್ರೆ ಮುಂಭಾಗದಲ್ಲೇ ಎಲ್ಲಾ ಬಸ್‌ಗಳು ನಿಲ್ಲುತ್ತವೆ. ಗ್ರಾಮೀಣ ಭಾಗದಿಂದ ಬರುವ ರೋಗಿಗಳು, ಅವರ ಸಂಬಂಧಿಕರಿಗೆ ಈ ಮಾರ್ಗ ಅನುಕೂಲಕರವಾಗಿದೆ. ನಗರಕ್ಕೆ ಬರುವ ರೈತರು ತಮ್ಮ ಉತ್ಪನ್ನಗಳನ್ನು ಗಾಂಧಿ ವೃತ್ತದ ಆಸುಪಾಸಿನಲ್ಲಿರುವ ಮಾರುಕಟ್ಟೆಗಳಲ್ಲಿ ಮಾರುತ್ತಾರೆ. ಮಾರ್ಗ ಬದಲಾದರೆ ರೋಗಿಗಳಿಗೆ, ರೈತರಿಗೆ ತೀವ್ರ ತೊಂದರೆಯಾಗಲಿದೆ. ಆಟೊಗಳಿಗೆ ಹಣ ತೆರುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಖಾಸಗಿ ಬಸ್ ಮಾಲೀಕರ ಒತ್ತಡ:
‘ಬಿ.ಡಿ. ರಸ್ತೆಯಲ್ಲಿ ಈಗಾಗಲೇ ಖಾಸಗಿ ಬಸ್‌ಗಳ ಸಂಚಾರ ನಿಷೇಧಿಸಲಾಗಿದೆ. ಖಾಸಗಿ ಬಸ್ ಮಾಲೀಕರು, ಚಾಲಕರು ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನೂ ಸ್ಥಗಿತಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನೂ ನಿಲ್ಲಿಸಬೇಕು’ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಾರ್ವಜನಿಕರು, ‘ಪೊಲೀಸರು ಖಾಸಗಿ ವಾಹನಗಳ ಮಾಲೀಕರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಸಿಬ್ಬಂದಿ ನಿಯೋಜಿಸಿ ವಾಹನ ದಟ್ಟಣೆ ನಿಯಂತ್ರಿಸಲು ವಿಫಲವಾಗಿರುವ ಅವರು, ಬಿ.ಡಿ. ರಸ್ತೆಯಲ್ಲಿ ಬಸ್ ಸಂಚಾರವನ್ನೇ ನಿಲ್ಲಿಸಿ ತಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳುವ ಮಾರ್ಗ ಹುಡುಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ವಾಸ್ತವವಾಗಿ ಖಾಸಗಿ ಬಸ್‌ಗಳು ಬಿ.ಡಿ. ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿಲ್ಲ. ಗಾಂಧಿ ವೃತ್ತಕ್ಕೆ ಬಾರದೆ ಸಂತೆ ಹೊಂಡ, ಎಸ್‌ಬಿಐ ಸರ್ಕಲ್ ಮೂಲಕ ಬಿ.ಡಿ. ರಸ್ತೆಯಲ್ಲೇ ಸಂಚರಿಸುತ್ತಿವೆ. ಆ ಮೂಲಕ ಚಾಲಕರು ಪೊಲೀಸರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಪೊಲೀಸರು ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದು ಅವೈಜ್ಞಾನಿಕ ಕ್ರಮ’ ಎಂದು ಸ್ಥಳೀಯರೊಬ್ಬರು ಆರೋಪಿಸಿದರು.
ಬಿ.ಡಿ. ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತಕ್ಕೆ ಈ ಹಿಂದೆಯೂ ಆಸ್ಪದ ನೀಡಿಲ್ಲ ಮುಂದೆಯೂ ಬಿಡುವುದಿಲ್ಲ. ಪೊಲೀಸರು ವೈಜ್ಞಾನಿಕ ರೀತಿಯಲ್ಲಿ ಸಂಚಾರ ನಿರ್ವಹಣೆ ಮಾಡಿದರೆ ಸಮಸ್ಯೆ ಆಗದುಧನಂಜಯ ರೈತ ಮುಖಂಡ
ಬಿ.ಡಿ. ರಸ್ತೆ ವಿಸ್ತರಿಸಿದರೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಬಸ್ ಸಂಚಾರ ಸ್ಥಗಿತಗೊಂಡರೆ ವಿದ್ಯಾರ್ಥಿಗಳೆಲ್ಲರೂ ಸೇರಿ ಹೋರಾಟ ನಡೆಸುತ್ತೇವೆಎನ್.ಗೋಪಾಲ್ ಎಬಿವಿಪಿ
2 ರೈಲ್ವೆ ಗೇಟ್ ದಾಟುವ ಅನಿವಾರ್ಯತೆ
ಬಿ.ಡಿ. ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದರೆ ಶಿವಮೊಗ್ಗ ಹೊಳಲ್ಕೆರೆ ಕಡೆಗೆ ತೆರಳಬೇಕಾದ ಬಸ್‌ಗಳು ದಾವಣಗೆರೆ ರೈಲ್ವೆ ಗೇಟ್ ಮಾಳಪ್ಪನಹಟ್ಟಿ ರೈಲ್ವೆಗೇಟ್ ದಾಟಬೇಕಾದ ಪರಿಸ್ಥಿತಿ ಉಂಟಾಗಲಿದೆ. ಅಲ್ಲಿ ರೈಲು ಬಂದಾಗ ಸಮಯವೂ ವ್ಯರ್ಥವಾಗಲಿದೆ. ‘ಬದಲಿ ಮಾರ್ಗದಲ್ಲಿ ಬಸ್ ಓಡಿಸಿದರೆ 5–6 ಕಿ.ಮೀ ಹೆಚ್ಚುವರಿಯಾಗಲಿದ್ದು ಉಪ ವಿಭಾಗಕ್ಕೆ ಹೊರೆಯಾಗಲಿದೆ. ಬಸ್ ವೇಳಾಪಟ್ಟಿಯೂ ಬದಲಾಗಲಿದೆ. ರಸ್ತೆ ಸುರಕ್ಷತಾ ಸಮಿತಿ ಸೂಚನೆಯನ್ನು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.