ADVERTISEMENT

ಚಿತ್ರದುರ್ಗ | ಕ್ಷೇತ್ರದಲ್ಲಿ ಯಾವುದೇ ಬಂಡಾಯ ಇಲ್ಲ: ಗೋವಿಂದ ಕಾರಜೋಳ

28 ಲೋಕಸಭಾ ಕ್ಷೇತ್ರಗಳಲ್ಲಿಯೂ ಎನ್‌ಡಿಎ ಗೆಲುವು: ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 16:19 IST
Last Updated 29 ಮಾರ್ಚ್ 2024, 16:19 IST
ಹಿರಿಯೂರಿನಲ್ಲಿ ಶುಕ್ರವಾರ ತೇರುಮಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಸುದ್ದಿಗಾರರ ಜೊತೆ ಮಾತನಾಡಿದರು
ಹಿರಿಯೂರಿನಲ್ಲಿ ಶುಕ್ರವಾರ ತೇರುಮಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಸುದ್ದಿಗಾರರ ಜೊತೆ ಮಾತನಾಡಿದರು   

ಹಿರಿಯೂರು: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾದ ನಂತರ ಜಿಲ್ಲಾ ಕೇಂದ್ರಕ್ಕೆ ತೆರಳುವ ಮೊದಲು ಶುಕ್ರವಾರ ನಗರದ ತೇರು ಮಲ್ಲೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್ ಜೊತೆ ಬಿಜೆಪಿ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದ್ದು, ಸಮನ್ವಯದೊಂದಿಗೆ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ 28 ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಹಿಂದಿನ ಲೋಕಸಭಾ ಚುನಾವಣೆಗಿಂತ ಈ ಬಾರಿ ನಮ್ಮ ಶಕ್ತಿ ವೃದ್ಧಿಸಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆಗಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದ್ದಾರೆ ಎಂಬ ಕಾರಣಕ್ಕೆ ತಮ್ಮ ವಿರುದ್ಧ ಕ್ಷೇತ್ರದಲ್ಲಿ ಬಂಡಾಯ ಎದ್ದಿದೆಯಲ್ಲವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಬಂಡಾಯ ಇಲ್ಲ’ ಎಂದು ಚುಟುಕಾಗಿ ಉತ್ತರಿಸಿ ಹೊರಟು ಹೋದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮುಖಂಡರಾದ ಲಿಂಗಮೂರ್ತಿ, ಎನ್.ಆರ್. ಲಕ್ಷ್ಮೀಕಾಂತ್, ರವೀಂದ್ರಪ್ಪ, ಡಿ.ಯಶೋಧರ, ಎಂ. ಜಯಣ್ಣ, ವಿ. ವಿಶ್ವನಾಥ್, ಹನುಮಂತಪ್ಪ, ಎಚ್.ವೆಂಕಟೇಶ್, ಎಂ.ಎಸ್.ರಾಘವೇಂದ್ರ, ಎಂ.ವಿ.ಹರ್ಷ, ಎ. ರಾಘವೇಂದ್ರ, ಟಿ. ಚಂದ್ರಹಾಸ, ಕೆ.ಶಂಕರಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.