ADVERTISEMENT

ಚಿತ್ರದುರ್ಗ | ಮಾಡು ಇಲ್ಲವೇ ಮಡಿಯಂತೆ ಕಾರ್ಯ ನಿರ್ವಹಿಸಿ: ಸಚಿವ ಡಿ.ಸುಧಾಕರ್‌

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 10 ನೇ ಸ್ಥಾನವೇ ಗುರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:00 IST
Last Updated 6 ಸೆಪ್ಟೆಂಬರ್ 2025, 5:00 IST
ಚಿತ್ರದುರ್ಗದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಉದ್ಘಾಟಿಸಿದರು
ಚಿತ್ರದುರ್ಗದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಉದ್ಘಾಟಿಸಿದರು   

ಚಿತ್ರದುರ್ಗ: ‘ಬಯಲುಸೀಮೆಯ ಮಕ್ಕಳಿಗೆ ಶಿಕ್ಷಣವೇ ಶಕ್ತಿ. ಆದ್ದರಿಂದ ಶಿಕ್ಷಕರು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗಣನೀಯ ಪ್ರಗತಿ ಸಾಧಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ನಿಮ್ಮ ಬೇಡಿಕೆಗಳನ್ನು ನಾನು ಈಡೇರಿಸುತ್ತೇನೆ. ಆದರೆ ಬದ್ಧತೆಯಿಂದ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶ ತರುವುದು ನಿಮ್ಮ ಕರ್ತವ್ಯ’ ಎಂದರು.

ADVERTISEMENT

‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆ ತೃಪ್ತಿಕರವಾಗಿಲ್ಲ. ಸಾಕಷ್ಟು ಏರಿಳಿತ ಕಾಣುತ್ತಿದೆ. ಈ ವಿಚಾರದಲ್ಲಿ ಶಿಕ್ಷಕರ ಮೇಲೆ ಗುರುತರ ಜವಾಬ್ದಾರಿಯಿದೆ. ಈ ಬಾರಿ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿದ್ದು, ರಾಜ್ಯಮಟ್ಟದಲ್ಲಿ 10ನೇ ಸ್ಥಾನದೊಳಗೆ ಜಿಲ್ಲೆ ಸ್ಥಾನ ಪಡೆಯಬೇಕು. ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ’ ಎಂದು ತಿಳಿಸಿದರು.

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಆಗಬೇಕು ಎಂದು ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಆದರೆ ಅವರ ಸಮಸ್ಯೆ ಆಲಿಸುತ್ತಿಲ್ಲ. ಬಿಸಿಯೂಟ, ಸಮೀಕ್ಷೆ ಸೇರಿದಂತೆ ಯಾವುದೇ ಕೆಲಸವಿದ್ದರೂ ನಮ್ಮ ಕಣ್ಣಿಗೆ ಕಾಣುವುದು ಮಾತ್ರ ಶಿಕ್ಷಕರು. ಪಾಠ ಬಿಟ್ಟು ಬೇರೆ ಎಲ್ಲ ಕೆಲಸವನ್ನು ಮಾಡಿಸುತ್ತಿದ್ದೇವೆ. ಬೋಧನೆ ಹೊರತು ಇತರೆ ಕಾರ್ಯಭಾರವನ್ನು ಕಡಿಮೆ ಮಾಡುವ ಕಾರ್ಯ ಆಗಬೇಕಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಅಭಿಪ್ರಾಯಪಟ್ಟರು. 

2025-26ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಮತ್ತು ವಿಶೇಷ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಆಕಾಶ್, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್‌.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್‌, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‌ಪೀರ್ ಇದ್ದರು.

ಜಿಲ್ಲೆಯಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಹೈಟೆಕ್‌ ಗುರುಭವನಕ್ಕೆ ನಿರ್ಮಾಣಕ್ಕೆ ₹ 2 ಕೋಟಿ ಬದಲು ₹ 5 ಕೋಟಿ ಅನುದಾನ ನೀಡಿ. ಈ ಕಾರ್ಯಕ್ಕೆ ನಾವು ಸಹಕರಿಸುತ್ತೇವೆ
ಕೆ.ಎಸ್‌.ನವೀನ್‌ ವಿಧಾನ ಪರಿಷತ್‌ ಸದಸ್ಯ

ಗುರುಭವನ ನಿರ್ಮಾಣಕ್ಕೆ ₹2 ಕೋಟಿ:

ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿರ್ಮಿಸಿದ್ದ ಗುರುಭವನ ನಾನಾ ಕಾರಣಗಳಿಂದ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಚುನಾವಣಾ ಕಾರ್ಯಕ್ಕೆ ಇಡೀ ಕಟ್ಟಡವನ್ನು ಬಳಸಿಕೊಂಡ ಬಳಿಕ ಶಿಕ್ಷಕರಿಂದ ದೂರವಾಯಿತು. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗುರುಭವನ ನಿರ್ಮಿಸಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಸಚಿವ ಡಿ.ಸುಧಾಕರ್‌ ಅವರಿಗೆ ಮನವಿ ಸಲ್ಲಿಸಿತು. ಮನವಿಗೆ ಸ್ಪಂದಿಸಿದ ಸಚಿವರು ‘ಕಳೆದ ವರ್ಷವೇ ಗಮನಕ್ಕೆ ತಂದಿದ್ದರೆ ಈ ಸಮಯಕ್ಕೆ ಕಟ್ಟಡ ಕಾಮಗಾರಿ ಪ್ರಾರಂಭಿಸಬಹುದಾಗಿತ್ತು. ಸದ್ಯ ಈ ಬಾರಿ ಆದರೂ ಗಮನಕ್ಕೆ ತರುವ ಕೆಲಸ ಮಾಡಿದ್ದೀರಾ. ಸುಸಜ್ಜಿತ ಗುರುಭವನ ನಿರ್ಮಾಣಕ್ಕೆ ₹2 ಕೋಟಿ ಅನುದಾನ ನೀಡಿ ಮುಂದಿನ ವರ್ಷದೊಳಗೆ ಅತ್ಯುತ್ತಮ ಭವನ ನಿರ್ಮಾಣ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.