ADVERTISEMENT

ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ; ಆಕ್ಷೇಪ

ಮೆದೇಹಳ್ಳಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಆಹಾರ ಆಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:10 IST
Last Updated 1 ಜನವರಿ 2026, 7:10 IST
ಚಿತ್ರದುರ್ಗದ ಮೆದೇಹಳ್ಳಿಯ ಅಲ್ಪಸಂಖ್ಯಾತರ ಬಾಲಕ ಹಾಗೂ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೋಗ
ಚಿತ್ರದುರ್ಗದ ಮೆದೇಹಳ್ಳಿಯ ಅಲ್ಪಸಂಖ್ಯಾತರ ಬಾಲಕ ಹಾಗೂ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ರಾಜ್ಯ ಆಹಾರ ಆಯೋಗ   

ಚಿತ್ರದುರ್ಗ: ಜಿಲ್ಲಾ ಪ್ರವಾಸ ಕೈಗೊಂಡಿರುವ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್‌. ಕೃಷ್ಣ ಹಾಗೂ ಸದಸ್ಯರ ತಂಡ ಬುಧವಾರ ರಾತ್ರಿ ಮೆದೇಹಳ್ಳಿಯ ಅಲ್ಪಸಂಖ್ಯಾತರ ಬಾಲಕ ಹಾಗೂ ಬಾಲಕಿಯರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಭೇಟಿ ಪರಿಶೀಲಿಸಿತು.

ಈ ವೇಳೆ ಆಹಾರ ಪದಾರ್ಥಗಳ ಸರಬರಾಜಿನ ಅಸಮರ್ಪಕ ನಿರ್ವಹಣೆ ಹಾಗೂ ವಿದ್ಯಾರ್ಥಿಗಳಿಗೆ ಅರೆಹೊಟ್ಟೆಯ ಊಟ ನೀಡುತ್ತಿರುವುದಕ್ಕೆ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ವಸತಿ ಶಾಲೆಗೆ ಸರ್ಕಾರದಿಂದ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಗೋಧಿ, ತೊಗರಿ, ಎಣ್ಣೆ, ತರಕಾರಿ ಸೇರಿದಂತೆ ಉಳಿದ ಸಾಮಗ್ರಿಗಳನ್ನು ಟೆಂಡರ್‌ ಮೂಲಕ ಪಡೆದುಕೊಳ್ಳಬೇಕು. ಗುತ್ತಿಗೆ ಪಡೆದವರು ವಾಹನದ ಮೂಲಕ ನೇರವಾಗಿ ವಸತಿ ಶಾಲೆಗೆ ಈ ಸಾಮಗ್ರಿಗಳನ್ನು ಸರಬರಾಜು ಮಾಡಬೇಕು. ನಿಯಮಾನುಸಾರ ಗುತ್ತಿಗೆದಾರರು ನೀಡುವ ಸಾಮಗ್ರಿಗಳನ್ನು ಜಿ.ಪಿ.ಎಸ್. ಫೋಟೋ ಹಾಗೂ ತೂಕವನ್ನು ಪರಿಶೀಲಿಸಿ ವಾರ್ಡ್‌ನ್‌ ಪಡೆದುಕೊಳ್ಳಬೇಕು. ಆದರೆ, ಈ ನಿಯಮ ವಸತಿ ಶಾಲೆಯಲ್ಲಿ ಪಾಲನೆಯಾಗುತ್ತಿಲ್ಲ. ಹೆಸರಿಗೆ ಮಾತ್ರ ಟೆಂಡರ್ ಕರೆಯಲಾಗಿದೆ ಎಂದು ಕಿಡಿಕಾರಿದರು.

ADVERTISEMENT

ಅಡುಗೆ ತಯಾರಿಕೆಗೆ ಬೇಕಾದ ಆಹಾರ ಪದಾರ್ಥಗಳನ್ನು ವಾರ್ಡನ್‌ ಖರೀದಿ ಮಾಡಿಕೊಂಡು ಬರುತ್ತಾರೆ. ಹೀಗೆ ತಂದ ಸಾಮಗ್ರಿಗಳಿಗೆ ಯಾವುದೇ ತೂಕ, ಅಳತೆಯ ನಿಖರತೆಯಿಲ್ಲ. ಜಿಪಿಎಸ್‌ ಫೋಟೋ ಇಲ್ಲದಯೇ ಅಧಿಕಾರಿಗಳು ಟೆಂಡರ್‌ದಾರರಿಗೆ ಬಿಲ್‌ ಪಾವತಿಸಿದ್ದಾರೆ. ಆಯೋಗದ ಭೇಟಿಯ ವೇಳೆ ಈ ಲೋಪ ಕಂಡು ಬಂದಿದೆ.

ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ ಹಾಕಲಾಗುತ್ತಿದೆ. 2 ಚಪಾತಿ ಎನ್ನುವ ನಿಯಮ ಹೇರಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಚಪಾತಿ ಕೇಳಿದರೆ ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಕಡಿಮೆ ಪ್ರಮಾಣದ ಊಟ ನೀಡಲಾಗುತ್ತಿದೆ. ಆಹಾರ ಸಿದ್ಧಪಡಿಸುವಲ್ಲಿ ಯಾವುದೇ ಗುಣಮಟ್ಟ ಹಾಗೂ ಶುಚಿತ್ವನ್ನು ಕಾಪಾಡಿಕೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.

‘ಜಿಲ್ಲಾಮಟ್ಟದ ಅಧಿಕಾರಿ ತಿಂಗಳಿಗೊಮ್ಮೆ, ತಾಲ್ಲೂಕು ಮಟ್ಟದ ಅಧಿಕಾರಿ ಎರಡು ಬಾರಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ. ಆದರೆ ನಗರಕ್ಕೆ ಸಮೀಪವಿರುವ ಶಾಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಒಮ್ಮೆಯೂ ಭೇಟಿ ನೀಡಿಲ್ಲ. ಶಾಲೆಯಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನೂ ವಿತರಿಸಿಲ್ಲ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸಹ ನಿಯಮಿತವಾಗಿ ನಡೆಯುತ್ತಿಲ್ಲ’ ಎಂದು ಆಯೋಗದ ಸದಸ್ಯ ಮಾರುತಿ ಎಂ.ದೊಡ್ಡಲಿಂಗಣ್ಣವರ ದೂರಿದರು.

ಭೇಟಿ ವೇಳೆ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಕೆ.ಎಸ್.ವಿಜಯಲಕ್ಷ್ಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ ಉಪಸ್ಥಿತರಿದ್ದರು.

ಅಧಿಕಾರಿಗಳ ಸ್ಪಷ್ಟನೆ ಕೋರಿದ ಆಯೋಗ

ವಿದ್ಯಾರ್ಥಿಗಳಿಗೆ ಎರಡು ಚಪಾತಿ ಮಾತ್ರ ನೀಡಬೇಕು ಎಂಬ ನಿಯಮ ಎಲ್ಲೂ ಇಲ್ಲ. ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ಚಪಾತಿ ಹೇಳಿದರೆ ತಪ್ಪದೇ ನೀಡಬೇಕು. ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ ನೀಡಬಾರದು. ಆಹಾರ ಪದಾರ್ಥಗಳನ್ನು ಟೆಂಡರ್‌ದಾರರಿಂದಲೇ ಪಡೆದುಕೊಳ್ಳಬೇಕು. ಜಿ.ಪಿ.ಎಸ್ ಫೋಟೋ ಆಧರಿಸಿಯೇ ಗುತ್ತಿಗೆದಾರರ ಬಿಲ್ ಪಾವತಿ ಮಾಡಬೇಕು ಎಂದು ಆಯೋಗದಿಂದ ನಿರ್ದೇಶನ ನೀಡಲಾಗಿದೆ. ನ್ಯೂನ್ಯತೆಗಳ ಬಗ್ಗೆ ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರೇಖಾ ಸ್ಪಷ್ಟನೆ ಕೋರಲಾಗಿದೆ ಎಂದು ಆಹಾರ ಆಯೋಗದ ಅಧ್ಯಕ್ಷ ಎಚ್‌.ಕೃಷ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.