ADVERTISEMENT

ಚಿತ್ರದುರ್ಗ ನಗರಸಭೆ: BJPಯ ಹೆಚ್ಚು ಸದಸ್ಯರಿದ್ದರೂ ಕಾಂಗ್ರೆಸ್‌ಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 15:34 IST
Last Updated 26 ಆಗಸ್ಟ್ 2024, 15:34 IST
ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್‌.ಸುಮಿತಾ, ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಎಸ್‌.ಶ್ರೀದೇವಿ ಅವರನ್ನು ಶಾಸಕ ಕೆ.ಸಿ.ವೀರೇಂದ್ರ ಅವರು ಅಭಿನಂದಿಸಿದರು
ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎಸ್‌.ಸುಮಿತಾ, ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಎಸ್‌.ಶ್ರೀದೇವಿ ಅವರನ್ನು ಶಾಸಕ ಕೆ.ಸಿ.ವೀರೇಂದ್ರ ಅವರು ಅಭಿನಂದಿಸಿದರು   

ಚಿತ್ರದುರ್ಗ: ನಗರಸಭೆಯಲ್ಲಿ 17 ಸದಸ್ಯರು ಬಿಜೆಪಿ ಬೆಂಬಲಿತರಿದ್ದರೂ ಮತದಾನದ ವೇಳೆ ನಾಲ್ವರು ವಿಪ್‌ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ.

ಮೈತ್ರಿ ಪಕ್ಷ ಜೆಡಿಎಸ್‌ ಬೆಂಬಲಿತ ಸದಸ್ಯರೂ ಬಿಜೆಪಿಗೆ ಕೈಕೊಟ್ಟ ಕಾರಣ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್‌ ಪಾಲಾದವು. ಕಾಂಗ್ರೆಸ್‌ ಬೆಂಬಲಿತರಾದ ಬಿ.ಎನ್‌.ಸುಮಿತಾ ಅಧ್ಯಕ್ಷೆಯಾಗಿ, ಜಿ.ಎಸ್‌.ಶ್ರೀದೇವಿ ಉಪಾಧ್ಯಕ್ಷೆಯಾಗಿ ಗೆಲುವಿನ ನಗೆ ಬೀರಿದರು.

ನಗರಸಭೆ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

ADVERTISEMENT

ನಗರಸಭೆ 35 ಜನ ಚುನಾಯಿತ ಸದಸ್ಯ ಬಲ ಹೊಂದಿದ್ದು, ಒಬ್ಬರು ಮೃತಪಟ್ಟಿರುವ ಕಾರಣ ಸದಸ್ಯ ಬಲ 34ಕ್ಕೆ ಇಳಿದಿತ್ತು. ಬಿಜೆಪಿ ಬೆಂಬಲಿತರು ಅತಿ ಹೆಚ್ಚು 17 ಜನ ಇದ್ದರೆ ಜೆಡಿಎಸ್‌ ಬೆಂಬಲಿತರು 6, ಕಾಂಗ್ರೆಸ್‌ ಬೆಂಬಲಿತರು 5 ಹಾಗೂ 7 ಪಕ್ಷೇತರ ಸದಸ್ಯರಿದ್ದಾರೆ.

ನಗರಸಭೆ ಬಹುಮತಕ್ಕೆ 18 ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಬಿಜೆಪಿಗೆ 17 ಸದಸ್ಯರ ಬೆಂಬಲವಿದ್ದು, ಸಂಸದ, ಶಾಸಕರ ಮತದೊಂದಿಗೆ ಕಳೆದ ಬಾರಿ ಅಧಿಕಾರ ಹಿಡಿದಿತ್ತು. ಈ ಬಾರಿ 1 ಸಂಸದ ಸ್ಥಾನ, 1 ಎಂಎಲ್‌ಸಿ ಮತದ ಜೊತೆಗೆ ಜೆಡಿಎಸ್‌ ಬೆಂಬಲಿತರ ಬಲವೂ ಇದ್ದು ಮತ್ತೆ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂದೇ ಹೇಳಲಾಗಿತ್ತು.  

ಆದರೆ ಸೋಮವಾರ ನಡೆದ ಬೆಳವಣಿಗೆಯಲ್ಲಿ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರು, ಮೂವರು ಜೆಡಿಎಸ್‌ ಬೆಂಬಲಿತ ಸದಸ್ಯರು ಪಕ್ಷಗಳ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ ಬೆಂಬಲಿತರ ಪರ ಮತದಾನ ಮಾಡಿದರು. ಪಕ್ಷೇತರ ಸದಸ್ಯರೂ ಕಾಂಗ್ರೆಸ್‌ ಕಡೆ ವಾಲಿದರು. ಹೀಗಾಗಿ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ 22ನೇ ವಾರ್ಡ್‌ ಸದಸ್ಯೆ ಬಿ.ಎಂ. ಸುಮಿತಾ ಅಧ್ಯಕ್ಷೆಯಾಗಿ, 33ನೇ ವಾರ್ಡ್‌ ಸದಸ್ಯೆ ಜಿ.ಎನ್‌.ಶ್ರೀದೇವಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಬಿ.ಎಂ. ಸುಮಿತಾ ಜೊತೆಗೆ 32ನೇ ವಾರ್ಡ್‌ ಸದಸ್ಯೆ ಎಸ್‌.ಸಿ. ತಾರಕೇಶ್ವರಿ ನಾಮಪತ್ರ ಸಲ್ಲಿಸಿದ್ದರು. ಸುಮಿತಾ 22 ಮತ ಗಳಿಸಿ ಗೆಲುವು ಸಾಧಿಸಿದರೆ ತಾರಕೇಶ್ವರಿ 13 ಮತ ಗಳಿಸಿ ಸೋಲೊಪ್ಪಿಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎನ್‌.ಶ್ರೀದೇವಿ ಜೊತೆಗೆ 22ನೇ ವಾರ್ಡ್‌ನ ಬಿ.ಎಸ್‌. ರೋಹಿಣಿ ನಾಮಪತ್ರ ಸಲ್ಲಿಸಿದ್ದರು. ಶ್ರೀದೇವಿ ತಲಾ 22 ಮತ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಬಿಜೆಪಿ ಬೆಂಬಲಿತರಾದ ರೋಹಿಣಿ ಅವರು 13 ಮತ ಗಳಿಸಿ ಸೋತರು.

ಬಿಜೆಪಿ, ಜೆಡಿಎಸ್‌ ಬೆಂಬಲಿತರು ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಪಡೆಯಲು ಯಶಸ್ವಿಯಾದ ಕಾಂಗ್ರೆಸ್‌ ಮುಖಂಡರು ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು. ಶಾಸಕ ಕೆ.ಸಿ. ವೀರೇಂದ್ರ ಅವರ ಚುನಾವಣಾ ಕಾರ್ಯಸೂಚಿ ಪಕ್ಷಕ್ಕೆ ಅಧಿಕಾರ ತಂದುಕೊಡುವಲ್ಲಿ ಯಶಸ್ವಿಯಾಯಿತು.

ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಅಭಿನಂದಿಸಿ ಮಾತನಾಡಿದ ಶಾಸಕ ಕೆ.ಸಿ. ವೀರೇಂದ್ರ, ‘ಸುಮಿತಾ ಹಾಗೂ ಶ್ರೀದೇವಿ ಅವರು ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಐತಿಹಾಸಿಕ ನಗರದ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದರು.

‘ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಒತ್ತು ನೀಡಿ ಕಾರ್ಯ ನಿರ್ವಹಿಸುತ್ತೇನೆ. ಎಲ್ಲಾ ಬಡಾವಣೆಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಶ್ರಮಿಸುತ್ತೇನೆ’ ಎಂದು ನೂತನ ಅಧ್ಯಕ್ಷೆ ಬಿ.ಎನ್‌. ಸುಮಿತಾ ಹೇಳಿದರು.

‘ಶಾಸಕರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದೆಯೂ ಜನಪ್ರತಿನಿಧಿಗಳ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ಮಾಡುತ್ತೇನೆ’ ಎಂದು ಉಪಾಧ್ಯಕ್ಷೆ ಜಿ.ಎನ್‌. ಶ್ರೀದೇವಿ ಹೇಳಿದರು.

ಉಪ ವಿಭಾಗಾಧಿಕಾರಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಹಶೀಲ್ದಾರ್‌ ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ. ರೇಣುಕಾ ಇದ್ದರು.

ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಮರವಣಿಗೆ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ ವಿಜಯೋತ್ಸವ ಆಚರಿಸಿದರು

ಬಿಜೆಪಿ– ಜೆಡಿಎಸ್‌ನಲ್ಲಿ ಒಡಕು

ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರಲ್ಲಿ ಇರುವ ಒಡಕನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಯಿತು. ಎರಡೂ ಪಕ್ಷಗಳ ಬೆಂಬಲಿತ ಸದಸ್ಯರ ಮತ ಪಡೆಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್‌ ಸದಸ್ಯರು ಅಧಿಕಾರದ ಗದ್ದುಗೆ ಏರಿದರು.

ಬಿಜೆಪಿ ಜೆಡಿಎಸ್‌ನಲ್ಲಿರುವ ಒಡಕಿನ ಬಗ್ಗೆ ಅರಿವಿದ್ದ ಸಂಸದ ಗೋವಿಂದ ಕಾರಜೋಳ ಮತದಾನ ಮಾಡಲಿಲ್ಲ. ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮತದಾನ ಮಾಡಿದರೂ ಅದು ವ್ಯರ್ಥವಾಯಿತು.  ‘ಪಕ್ಷದ ವಿಪ್‌ ಉಲ್ಲಂಘಿಸಿದ ಸದಸ್ಯರ ವಿರುದ್ಧ ಕ್ರಮ ಜಗುರಿಸುವಂತೆ ವರಿಷ್ಠರಿಗೆ ದೂರು ನೀಡಲಾಗುವುದು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.