ADVERTISEMENT

ಚಿತ್ರದುರ್ಗ | ಸಮೀಕ್ಷೆ ನೆಪ: ನಗರಸಭೆ ಕೆಲಸ ಮರೆತ ಸಿಬ್ಬಂದಿ, ಜನರ ಪರದಾಟ

ಸಂಜೆ 5ರ ನಂತರವೂ ಕಚೇರಿಗೆ ಬಾರದ ಅಧಿಕಾರಿಗಳು

ಎಂ.ಎನ್.ಯೋಗೇಶ್‌
Published 25 ಅಕ್ಟೋಬರ್ 2025, 7:04 IST
Last Updated 25 ಅಕ್ಟೋಬರ್ 2025, 7:04 IST
ನಗರಸಭಾ ಕಚೇರಿ ಕಟ್ಟಡ
ನಗರಸಭಾ ಕಚೇರಿ ಕಟ್ಟಡ   

ಚಿತ್ರದುರ್ಗ: ನಗರಸಭೆ ಅಧಿಕಾರಿಗಳು, ಸಿಬ್ಬಂದಿಯನ್ನು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಒಂದೂವರೆ ತಿಂಗಳಿಂದ ನಗರಸಭೆಯ ಕೆಲಸಗಳನ್ನೇ ಮರೆತಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಮೀಕ್ಷೆಗೆ ಅಧಿಕಾರಿಗಳು ನೇಮಕಗೊಂಡಿದ್ದರೂ ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ತುರ್ತು ಕೆಲಸಗಳನ್ನು ಸಂಜೆ 5 ಗಂಟೆಯ ನಂತರ ಮಾಡಬೇಕು. ಜನರಿಗೆ ಅವಶ್ಯವಿರುವ ಇ– ಸ್ವತ್ತು ಹಾಗೂ ಇತರ ದಾಖಲೆಗಳ ವಿತರಣೆಯಲ್ಲಿ ತಡ ಮಾಡಬಾರದು ಎಂದು ಸರ್ಕಾರ ಸೂಚಿಸಿದೆ. ಅದರಂತೆ ನಗರಸಭೆ ಕಚೇರಿ ಆವರಣದಲ್ಲಿ ‘ನಗರಸಭೆ ಕೆಲಸಗಳನ್ನು ಸಂಜೆ 5ರ ನಂತರ ಮಾಡಲಾಗುವುದು’ ಎಂದು ಪ್ರಕಟಣೆ ಅಂಟಿಸಲಾಗಿದೆ.

ಆದರೂ ಅಧಿಕಾರಿಗಳು, ಇತರ ಸಿಬ್ಬಂದಿ ಸಮೀಕ್ಷೆ ನಂತರ ಮನೆಗೆ ತೆರಳುತ್ತಿದ್ದು, ದಾಖಲೆಗಳಿಗಾಗಿ ಕಾಯುತ್ತಿರುವ ಸಾರ್ವಜನಿಕರು ಪರದಾಡುತ್ತಿದ್ದಾರೆ. ಅಗತ್ಯವಾಗಿ ಬೇಕಾದ ಇ– ಖಾತೆ ಸ್ವತ್ತು ಪಡೆಯಲಾಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ನಿವೇಶನ, ಕಟ್ಟಡಗಳ ಮಾರಾಟ, ಸಾಲ ಪಡೆಯಲು ಇ–ಸ್ವತ್ತು ಅಗತ್ಯವಾಗಿದೆ. ದಾಖಲೆ ದೊರೆಯದ ಕಾರಣ ಜನರು ನಿತ್ಯವೂ ಕಚೇರಿಗೆ ಅಲೆದಾಡುವಂತಾಗಿದೆ.

ADVERTISEMENT

‘ಸಾಲ ಮಾಡಿ ಮನೆ ಕಟ್ಟಲು ಪೂಜೆ ನೆರವೇರಿಸಿದ್ದೇವೆ. ಬ್ಯಾಂಕ್‌ ಸಾಲ ಪಡೆಯುವುದಕ್ಕಾಗಿ ಇ–ಸ್ವತ್ತಿಗೆ ಅರ್ಜಿ ಸಲ್ಲಿಸಿ 6 ತಿಂಗಳಾಗಿದೆ. ಇಲ್ಲಿಯವರೆಗೂ ನಮಗೆ ದಾಖಲೆ ಸಿಗದ ಕಾರಣ ಮನೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. ನಿತ್ಯವೂ ನಗರಸಭೆ ಕಚೇರಿಗೆ ಅಲೆಯುವಂತಾಗಿದೆ. ಈಗಂತೂ ಜಾತಿ ಗಣತಿ ಹೆಸರು ಹೇಳುತ್ತಿದ್ದಾರೆ. ಅಧಿಕಾರಿಗಳೇ ಕೈಗೆ ಸಿಗುತ್ತಿಲ್ಲ’ ಎಂದು ನಗರದ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಕೋಟೆನಗರಿಯಲ್ಲಿ 45,000ಕ್ಕೂ ಹೆಚ್ಚು ಆಸ್ತಿಗಳಿದ್ದು, ಇಲ್ಲಿಯವರೆಗೂ ಎಲ್ಲ ಆಸ್ತಿಗಳಿಗೆ ಇ–ಸ್ವತ್ತು ನೀಡಿಲ್ಲ. ಇಲ್ಲಿಯವರೆಗೂ 25,000 ಸ್ವತ್ತುಗಳಿಗೆ ಮಾತ್ರ ಇ–ಸ್ವತ್ತು ವಿತರಣೆಯಾಗಿದ್ದು, ಇನ್ನೂ 20,000 ಆಸ್ತಿಗಳಿಗೆ ಇ–ಸ್ವತ್ತು ವಿತರಿಸುವ ಕಾರ್ಯ ಬಾಕಿ ಉಳಿದಿದೆ. ಎ ಖಾತೆ, ಬಿ ಖಾತೆ ಪಡೆದ ಸ್ವತ್ತುಗಳಿಗೆ ಇ– ಸ್ವತ್ತು ಪಡೆಯಲು ನಗರಸಭೆಯಲ್ಲಿ ಅಪಾರ ಅರ್ಜಿಗಳು ಬಾಕಿ ಉಳಿದಿವೆ.

ಸೆ. 16ರಿಂದ ರಾಜ್ಯದಾದ್ಯಂತ ಸಮೀಕ್ಷೆ ಆರಂಭಗೊಂಡಿದೆ. ಪೌರಾಯುಕ್ತರು ಸೇರಿದಂತೆ ಎಂಜಿನಿಯರ್‌, ಆರೋಗ್ಯ ನಿರೀಕ್ಷಕರು, ಬಿಲ್‌ ಕಲೆಕ್ಟರ್‌ಗಳನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಸಮೀಕ್ಷೆ ನಡೆದಿದ್ದು, ರಾಜ್ಯ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ಈಗ ಮತ್ತೆ ಸಮೀಕ್ಷಾ ದಿನವನ್ನು ಅ. 31ರವರೆಗೂ ವಿಸ್ತರಿಸಲಾಗಿದೆ. ಸಮೀಕ್ಷೆ ನೆಪದಲ್ಲೇ ಅಧಿಕಾರಿಗಳು ಕಾಲ ದೂಡುತ್ತಿದ್ದು ಜನರ ಕೆಲಸಗಳು ಸ್ಥಗಿತಗೊಳ್ಳುವಂತಾಗಿದೆ ಎಂದು ಅನೇಕರು ದೂರಿದರು.

‘ನ. 5ರವರೆಗೂ ಕಚೇರಿ ಕಡೆ ಬರದಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ರಜೆ ಮುಗಿಯುವವರೆಗೂ ಯಾವುದೇ ದಾಖಲೆ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಇ–ಸ್ವತ್ತಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರು ದೂರಿದರು.

ಮಧ್ಯವರ್ತಿಗಳ ಮೂಲಕವೇ ಕೆಲಸ

ಸಮೀಕ್ಷೆಯ ನೆಪದ ನಡುವೆಯೂ ಇ– ಸ್ವತ್ತು ನೀಡಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕೆಲ ನಗರಸಭೆ ಸದಸ್ಯರೇ ಮಧ್ಯವರ್ತಿಗಳಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ‘ನೇರವಾಗಿ  ಅರ್ಜಿ ಸಲ್ಲಿಸಿದವರಿಗೆ ಸಮೀಕ್ಷೆ ನೆಪ ಹೇಳಿ ಅಧಿಕಾರಿಗಳು ದಿನ ದೂಡುತ್ತಿದ್ದಾರೆ. ಬಿಲ್‌ ಕಲೆಕ್ಟರ್‌ಗಳು ಕಂಪ್ಯೂಟರ್‌ನಲ್ಲಿ ಲಾಗಿನ್‌ ಆಗಬೇಕು. ಹೆಬ್ಬೆಟ್ಟಿನ ಗುರುತು ನೀಡಬೇಕು ಎನ್ನುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಮೂಲಕ ಅರ್ಜಿ ಹಾಕಿದವರಿಗೆ ಇ–ಸ್ವತ್ತು ದೊರೆಯುತ್ತಿದೆ. ₹ 30000ದವರೆಗೂ ಲಂಚ ಕೇಳುತ್ತಿದ್ದಾರೆ’ ಎಂದು ವಕೀಲ ಮಂಜುನಾಥ್‌ ದೂರಿದರು.

ಅ. 31ರವರೆಗೆ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಗಡುವು ನೀಡಿದ್ದೇನೆ. ಬೆಳಿಗ್ಗೆ 2 ಗಂಟೆ ಮಾತ್ರ ಸಮೀಕ್ಷೆ ಕೆಲಸ ಇರುತ್ತದೆ. ಮಧ್ಯಾಹ್ನ ಸಂಜೆ ಇ–ಸ್ವತ್ತು ವಿತರಣೆಗೆ ಆದ್ಯತೆ ನೀಡಲು ಸೂಚಿಸಿದ್ದೇನೆ
–ಎಸ್‌.ಲಕ್ಷ್ಮಿ ಪೌರಾಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.