
ಚಿತ್ರದುರ್ಗ: ವರ್ಷಾಂತ್ಯದ ಕೊನೆಯ ಕ್ಷಣದ ಬೆಳವಣಿಗೆಗಳು ಕೊಂಚ ಮನಸ್ಸು ಕದಡಿದರು ಸಹ ನಾಳೆ ಒಳಿತಾಗಲಿದೆ ಎಂಬ ವಿಶ್ವಾಸ, ಹೊಸ ಹುರುಪು, ಭರವಸೆಯೊಂದಿಗೆ 2026 ಅನ್ನು ಕೋಟೆನಾಡಿನ ಜನ ಸ್ವಾಗತಿಸಿದರು.
ಬುಧವಾರ ಸಂಜೆಯಾಗುತ್ತಿದ್ದಂತೆ ದೀಪಾಲಂಕೃತಗೊಂಡಿದ್ದ ನಗರದ ಬೇಕರಿ, ಹೋಟೆಲ್‌ಗಳಲ್ಲಿ ಯುವ ಸಮುದಾಯ ನಿಧಾನಗತಿಯಲ್ಲಿ ಜಮಾಯಿಸಿದರು. ಕೆಲವರು ಹೊಸ ಬಟ್ಟೆಗಳನ್ನು ಧರಿಸಿ ಮಾರುಕಟ್ಟೆಗೆ ಹೆಜ್ಜೆ ಹಾಕಿದರು. ಬೇಕರಿಗಳಲ್ಲಿ ಸಿದ್ಧಪಡಿಸಿದ್ದ ಕೇಕ್‌ಗಳನ್ನು ಖರೀದಿಸಿ ಮನೆ ಹಾಗೂ ಸಂತೋಷ ಕೂಟದ ಸ್ಥಳಗಳಿಗೆ ಸಂಭ್ರಮದಿಂದ ಹೆಜ್ಜೆ ಹಾಕಿದರು.
ನಗರದ ಬೇಕರಿಗಳಲ್ಲಿ ನಡೆಸಿದ್ದ ವಿಶೇಷ ಸಿದ್ಧತೆಗೆ ಯುವಕ– ಯುವತಿಯರು ಆಕರ್ಷಿತರಾದರು. ವಿವಿಧ ವರ್ಣಗಳಿಂದ ತಯಾರಿಸಿದ್ದ ಒಂದು, ಎರಡು ಮತ್ತು ಮೂರು ಕೆ.ಜಿ.ಯ ಕೇಕ್‌ಗಳು ಕಣ್ಮನ ತಣಿಸಿದವು. ‘ಹ್ಯಾಪಿ ನ್ಯೂ ಇಯರ್’ ಅಕ್ಷರಗಳನ್ನು ಜೋಡಿಸಿದ ಕೇಕ್‌ಗಳು ಆಕರ್ಷಿಸಿದವು. ಮುಂಗಡ ಬುಕಿಂಗ್ ಮಾಡಿದವರಿಗ ಕೇಕ್‌ಗಳನ್ನು ಕಾಯ್ದಿರಿಸಲಾಗಿತ್ತು.
ಬೇಕರಿಗಳಲ್ಲಿ ಕೇಕ್ ಪ್ರಿಯರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗಿತ್ತು. ಆಕರ್ಷಕ ಬ್ಯಾನರ್‌ಗಳನ್ನು ಹಾಕಿ ಗ್ರಾಹಕರನ್ನು ಸೆಳಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಂದೊಂದು ಬೇಕರಿಯವರು ಅಂದಾಜು 500 ರಿಂದ 700 ಕೆ.ಜಿ. ಕೇಕ್‌ಗಳನ್ನು ಹೆಚ್ಚಾಗಿ ಸಿದ್ಧಗೊಳಿಸಿದ್ದರು. ಅದರಲ್ಲೂ ಐಸ್ ಕೇಕ್, ಕೋಲ್ಡ್ ಕೇಕ್, ರೆಡ್‌ಬುಲ್ ಕೇಕ್, ಚಾಕೊಲೆಟ್ ಕೇಕ್, ಬ್ರೆಡ್ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು.
ಬಹುತೇಕ ಅಂಗಡಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಕೇಕ್, ತಂಪು ಪಾನೀಯ, ಚಾಕೊಲೆಟ್‌ಗಳನ್ನು ಖರೀದಿಸಿದರು. ಕೆಲವೆಡೆ ರಸ್ತೆಗೆ ಶಾಮಿಯಾನ ಹಾಕಿ ಕೇಕ್ ಬಾಕ್ಸ್‌ಗಳನ್ನು ಇಟ್ಟು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಬಾರ್ ಅಂಡ್ ರೆಸ್ಟೋರೆಂಟ್, ಡಾಬಾಗಳು ತುಂಬಿದ್ದವು.
ರಾತ್ರಿ 7ರಿಂದಲೇ ಆರಂಭವಾದ ಸಂತೋಷ ಕೂಟಗಳು ರಾತ್ರಿ 12ರವರೆಗೂ ನಿರಂತರವಾಗಿ ಸಾಗಿದವು. ಹಾಡು, ನೃತ್ಯ, ಅಂತ್ಯಾಕ್ಷರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೆಡೆ ಸಾಮಾನ್ಯವಾಗಿದ್ದವು. ಯುವ ಸಮುದಾಯ ಹೋಟೆಲ್, ತೋಟದ ಮನೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ರಾತ್ರಿ 12ಗಂಟೆ ಸಮೀಪಿಸುತ್ತಿದ್ದಂತೆ ಕಡೆಯ ಹತ್ತು ಸೆಕೆಂಡ್‌ಗಳನ್ನು ಕೌಂಟ್‌ಡೌನ್ ಮಾಡುತ್ತ, 12 ಗಂಟೆಯಾದ ಕೂಡಲೇ ಹರ್ಷೋದ್ಘಾರದೊಂದಿಗೆ 2026ಅನ್ನು ವೈಭವದಿಂದ ಸ್ವಾಗತಿಸಿದರು. ಕೇಕ್ ಕತ್ತರಿಸಿ ಜತೆಯಲ್ಲಿದ್ದವರಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧ ಕಾರ್ಯಕ್ರಮಗಳಲ್ಲಿ ಯುವಕರು ಕುಣಿದು ಸಂಭ್ರಮಿಸಿದರು. ಪೊಲೀಸರು ಗಸ್ತು ತಿರುಗುತ್ತಾ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿದ್ದರು.
ಹಾಡು ಹರಟೆ ನಡೆಸಿ ರಾತ್ರಿ 12 ಗಂಟೆಗೆ ಸರಿಯಾಗಿ ಕೇಕ್ ಕತ್ತರಿಸಿ ಕುಟುಂಬದ ಜತೆ 2025ಕ್ಕೆ ವಿದಾಯ ಹೇಳುತ್ತ 2026 ಹೊಸ ವರ್ಷವನ್ನು ಸ್ವಾಗತಿಸಿದ್ದು ನಿಜಕ್ಕೂ ಖುಷಿ ತಂದಿತು.– ಸಂದೀಪ್ ಶಾಂತಕುಮಾರ್, ಐಟಿ ಉದ್ಯೋಗಿ
2025ರ ಸಂಭ್ರಮ ನೋವು ನೆನಪುಗಳೊಂದಿಗೆ ಹೊಸ ವರ್ಷವನ್ನು ಭರವಸೆಯೊಂದಿಗೆ ಸ್ವಾಗತಿಸಲಾಯಿತು. ಮನೆಯಂಗಳದಲ್ಲಿ ಹಿರಿಯರ ಜತೆ ಹಾಡು ಹೇಳುತ್ತಾ ವಿಶೇಷವಾಗಿ ಸಂಭ್ರಮಿಸಲಾಯಿತು.- ಸ್ವಾತಿ ಗೌಡ, ಗೃಹಿಣಿ
ಮೃಗಾಲಯಕ್ಕೆ ಸುಮಾರು 5 ಸಾವಿರ ಜನ ಭೇಟಿ ನೀಡುವ ನಿರೀಕ್ಷೆಯಿದ್ದು ಅಧಿಕ ಜನದಟ್ಟಣೆ ಹಿನ್ನೆಲೆಯಲ್ಲಿ ಬೀಟ್ ಫಾರೆಸ್ಟರ್ಸ್ ಹಾಗೂ ಹೆಚ್ಚುವರಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.- ಐ.ಬಿ.ಅಕ್ಷತಾ, ಆರ್‌ಎಫ್‌ಒ
ಹೊಸ ವರ್ಷಕ್ಕೆ ಪ್ರವಾಸಿ ತಾಣಗಳು
ಸಜ್ಜು ಹೊಸ ವರ್ಷಾಚರಣೆಗೆ ಪ್ರವಾಸಿಗರ ಸ್ವಾಗತಕ್ಕೆ ನಗರ ಸಜ್ಜುಗೊಂಡಿದೆ. ಏಳು ಸುತ್ತಿನ ಕೋಟೆ ಆಡು ಮಲ್ಲೇಶ್ವರ ಕಿರು ಮೃಗಾಲಯ ಜೋಗಿಮಟ್ಟಿ ವನ್ಯಧಾಮ ಚಂದ್ರವಳ್ಳಿ ಮುರುಘಾಮಠ ಮುಂತಾದ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹೊಸ ವರ್ಷದ ಸಂಭ್ರಮಾಚರಣೆಗೆ ಜಿಲ್ಲೆ ಸೇರಿ ರಾಜ್ಯದ ನಾನಾ ಭಾಗಗಳ ಜನರು ಕಲ್ಲಿನ ಕೋಟೆಗೆ ಆಗಮಿಸುವುದು ವಿಶೇಷ. ಒನಕೆ ಓಬವ್ವನ ಕಿಂಡಿ ಸೇರಿ ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರಮುಖ ದೇವಾಲಯಗಳ ವೀಕ್ಷಣೆ ನಡೆಸಲಿದ್ದಾರೆ. ಗುರುವಾರ ಕೋಟೆ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ನೂಕುನುಗ್ಗಲು ತಪ್ಪಿಸಲು ಕೋಟೆಯ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 9 ಸಿಸಿ ಕ್ಯಾಮೆರಾಗಳು ನಿಗಾವಹಿಸಲಿವೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಕೋಟೆಯ ಅಕ್ಕ-ತಂಗಿಯರ ಹೊಂಡ ಏಕನಾಥೇಶ್ವರಿ ದೇವಸ್ಥಾನ ಹಾಗೂ ಮೂರನೇ ಬಾಗಿಲು ಬಳಿ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಶೌಚಗೃಹಗಳು ಸಹ ಇವೆ. ಜನರನ್ನು ನಿಯಂತ್ರಿಸಲು ಅಗತ್ಯ ಎಸ್‌ಐಎಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಆಡು ಮಲ್ಲೇಶ್ವರ ಕಿರು ಮೃಗಾಲಯ ಮಕ್ಕಳ ಆಕರ್ಷಣೀಯ ಪ್ರವಾಸಿ ತಾಣವಾಗಿದ್ದು ಬೆಳಗ್ಗೆ 9.30 ರಿಂದ ಸಂಜೆ 5.30ರ ವರೆಗೆ ವೀಕ್ಷಣೆಗೆ ಅವಕಾಶವಿದೆ.
ಮೃಗಾಲಯ ಪ್ರವೇಶ ಹಾಗೂ ವಾಹನಗಳ ಪಾರ್ಕಿಂಗ್‌ಗಾಗಿ ಪ್ರತ್ಯೇಕ ಎರಡು ಟಿಕೆಟ್ ಕೌಂಟರ್ ತೆರೆಯುವ ಜತೆಗೆ ಎರಡು ಕಡೆ ಪೆಂಡಾಲ್ ಹಾಕಲಾಗುತ್ತಿದೆ. ಕುಡಿಯುವ ನೀರು ಹಾಗೂ ಶೌಚಗೃಹಗಳ ವ್ಯವಸ್ಥೆಯೂ ಇದೆ. ಗುಟ್ಕಾ ಮತ್ತಿತರೆ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಇನ್ನು ಜೋಗಿಮಟ್ಟಿ ವನ್ಯಧಾಮ ವೀಕ್ಷಣೆಗೆ ಬೆಳಗ್ಗೆ 6.30 ರಿಂದ ಮಧ್ಯಾಹ್ನ 1ರವರೆಗೆ ಅವಕಾಶ ಕಲ್ಪಿಸಲಾಗಿದೆ. ಚಂದ್ರವಳ್ಳಿ ಮುರುಘಾಮಠದ ವೀಕ್ಷಣೆಗೂ ಜನಸಾಗರ ಹರಿದುಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.