ADVERTISEMENT

ಚಿತ್ರದುರ್ಗ: ‘ನಗರ ಸಾರಿಗೆ’ಗೆ ಬಡಿದಿದೆ ‘ಗರ’

‘ಶಕ್ತಿ’ ಯೋಜನೆಗೆ 2 ವರ್ಷ; ದುರ್ಗದ ಜನರಿಗಿಲ್ಲ ಸೌಲಭ್ಯ; ಆಟೊಗಳಲ್ಲೇ ಪ್ರಯಾಣ

ಕೆ.ಪಿ.ಓಂಕಾರಮೂರ್ತಿ
Published 12 ಜೂನ್ 2025, 6:38 IST
Last Updated 12 ಜೂನ್ 2025, 6:38 IST
<div class="paragraphs"><p>ಚಿತ್ರದುರ್ಗ ನಗರದಲ್ಲಿ ‘ಸೀಟ್‌’ ಆಟೊದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸುತ್ತಿರುವ ವಿದ್ಯಾರ್ಥಿನಿಯರು </p></div>

ಚಿತ್ರದುರ್ಗ ನಗರದಲ್ಲಿ ‘ಸೀಟ್‌’ ಆಟೊದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣಿಸುತ್ತಿರುವ ವಿದ್ಯಾರ್ಥಿನಿಯರು

   

ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ

ಚಿತ್ರದುರ್ಗ: ‘ಶಕ್ತಿ’ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಚಿತ್ರದುರ್ಗ ವಿಭಾಗಕ್ಕೆ ₹ 177.33 ಕೋಟಿ ಆದಾಯ ಬಂದಿದೆ. ಆದರೆ ಬಸ್‌ ಕೊರತೆಯ ಸಬೂಬು ಕೋಟೆನಾಡಲ್ಲಿ ನಗರ ಸಾರಿಗೆಯ ಶಕ್ತಿ ಕುಂದಿಸಿದೆ.

ADVERTISEMENT

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಜೂನ್ 11ಕ್ಕೆ ಎರಡು ವರ್ಷ ಪೂರ್ಣಗೊಂಡಿದೆ. ಈ ಯೋಜನೆಯಡಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 4.36 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ₹ 177.33 ಕೋಟಿ ಆದಾಯ ದೊರೆತಿದೆ. ಆದರೆ ಈ ಯೋಜನೆಯಿಂದ ನಗರದಲ್ಲಿ ಸಂಚರಿಸುವ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರಿಗೆ ಯಾವುದೇ ಪ್ರಯೋಜನವಾಗಿಲ್ಲ.

ಒಂದೂವರೆ ದಶಕದಲ್ಲಿ ನಗರ ಸಾರಿಗೆ ಸೇವೆಯು ನಾಲ್ಕು ಬಾರಿ ಉದ್ಘಾಟನೆಗೊಂಡ ಹೆಗ್ಗಳಿಕೆ ಇದೆ. ಒಂದೆರಡು ದಿನ ಸಂಚರಿಸಿ ಪುನಃ ದಾರಿ ಮರೆಯುವುದು ಮಾಮೂಲಿಯಾಗಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಆಸ್ಪತ್ರೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆಗೆ ಬರುವವರು, ಗ್ರಾಮೀಣ ಭಾಗದಿಂದ ನಿತ್ಯ ದುಡಿಮೆಗೆ ಬರುವ ಮಹಿಳೆಯರು, ಶಾಲೆ– ಕಾಲೇಜುಗಳ ವಿದ್ಯಾರ್ಥಿಗಳು ಗೂಡ್ಸ್‌, ಲಗೇಜ್, ಸೀಟ್‌ ಆಟೊ ಅವಲಂಬಿಸಿದ್ದಾರೆ.

ನಗರದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ. ಕರುಣಾಕರ ರೆಡ್ಡಿ ವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ನಗರ ಸಾರಿಗೆ ಸೇವೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಕೆಲ ದಿನಕ್ಕೆ ಸೇವೆ ನಿಲ್ಲಿಸಿತ್ತು. ಹೀಗೆ ಮೂರು ಬಾರಿ ಮರು ಚಾಲನೆಗೊಂಡು ನಿಂತಿದ್ದ ಸೇವೆ ಕೋವಿಡ್‌ ಬಳಿಕ ಪ್ರಾರಂಭವಾಗಿತ್ತು. ಸರ್ಕಾರ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದಾಗ ಆಶಾ ಭಾವ ಮೂಡಿತ್ತು. ಆದರೆ ನಗರ ಸಾರಿಗೆ ಬಸ್‌ಗಳು ಹಳ್ಳಿಗಳತ್ತ ಮುಖ ಮಾಡಿದ ಕಾರಣ ಆಟೊಗಳೇ ಗತಿಯಾದವು.

ಕೋವಿಡ್‌ಗೆ ಮುನ್ನ ನಗರದಲ್ಲಿ 19 ಬಸ್‌ಗಳು ನಿತ್ಯ 20 ಮಾರ್ಗಗಳಲ್ಲಿ ನಿತ್ಯ ನಗರದಲ್ಲಿ ಸಂಚರಿಸುತ್ತಿದ್ದವು. ಐಯುಡಿಪಿ ಲೇಔಟ್‌, ಕೆಎಸ್‌ಆರ್‌ಟಿಸಿ ಬಡಾವಣೆ, ಜೋಗಿಮಟ್ಟಿ, ಚಳ್ಳಕೆರೆ ಟೋಲ್‌ ಗೇಟ್‌, ಜೆಎಂಐಟಿ ವೃತ್ತ, ಮಾಳಪ್ಪನಹಟ್ಟಿ, ಕನಕ ವೃತ್ತ, ಹೊಳಲ್ಕೆರೆ ರಸ್ತೆ, ಬಿ.ಡಿ ರಸ್ತೆ ಮಾರ್ಗದಲ್ಲಿ ಸಂಚಾರ ಹೆಚ್ಚಾಗಿತ್ತು. ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಸೇವೆ ಲಭ್ಯವಿತ್ತು. ಜನರೂ ಈ ವ್ಯವಸ್ಥೆಗೆ ಹೊಂದಿಕೊಂಡಿದ್ದರು.

ಲಾಕ್‌ಡೌನ್‌ ವೇಳೆ ಶೇ 50ರಷ್ಟು ಪ‍್ರಯಾಣಿಕರ ಸಂಚಾರಕ್ಕೆ ಅನುಮತಿ ಕಲ್ಪಿಸಿದಾಗ ನಗರ ಸಾರಿಗೆ ಬಸ್‌ಗಳು ಗ್ರಾಮಗಳ ಹಾದಿ ತುಳಿದವು. ಕೊನೆಗೆ ಬಸ್‌ಗಳ ಸಂಖ್ಯೆ 4ರಿಂದ 1ಕ್ಕೆ ಇಳಿದಿದೆ. ಇರುವ ಒಂದು ಬಸ್‌, ಐಯುಡಿಪಿ ಲೇಔಟ್‌ ಹಾಗೂ ಕೋಡನಹಟ್ಟಿ ಮಾರ್ಗದಲ್ಲಿ ಸಂಚರಿಸುತ್ತಿದೆ. ಆದರೆ, ಸಮಯ ಮಾತ್ರ ಕೇಳಬೇಡಿ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ.

ನಗರ ಸಾರಿಗೆ ಬಸ್‌ಗಳ ಅವ್ಯವಸ್ಥೆಯ ಲಾಭವನ್ನು ಆಟೊ ಚಾಲಕರು ಪಡೆಯುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಸೀಟುಗಳ ಲೆಕ್ಕದಲ್ಲಿ ಪ್ರಯಾಣಿಕರಿಗೆ ದರ ನಿಗದಿಪಡಿಸಿವೆ. ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿಯೇ ಆಟೊಗಳು ಓಡಾಡುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದ ಜನರು, ಜಿಲ್ಲಾ ಆಸ್ಪತ್ರೆಗೆ ಬರುವವರು, ಕೂಲಿ ಕಾರ್ಮಿಕರು, ಶಾಲೆ– ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದೆ.

ಐಯುಡಿಪಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ಮಠದ ಕುರುಬರಹಟ್ಟಿ ಮತ್ತು ಮೆದೇಹಳ್ಳಿಯಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಗೆ ಆಟೊ ಪ್ರಯಾಣ ಅನಿವಾರ್ಯವಾಗಿದೆ. ವೈಶಾಲಿ ವೃತ್ತ, ಚಳ್ಳಕೆರೆ ಟೋಲ್‌ ಗೇಟ್‌, ಗಾಂಧಿ ವೃತ್ತ, ಸಂತೆಹೊಂಡದ ಬಳಿ ಆಟೊಗಳು ಸಾಲುಗಟ್ಟಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.

ನಗರ ವ್ಯಾಪ್ತಿಯಲ್ಲಿನ ‍ಪ್ರವಾಸಿ ತಾಣಗಳಾದ ಕೋಟೆ, ಆಡುಮಲ್ಲೇಶ್ವರ, ಮುರುಘಾ ಮಠ ಹಾಗೂ ಚಂದ್ರವಳ್ಳಿ ಕೆರೆಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಸ್‌ ವ್ಯವಸ್ಥೆಯಿಲ್ಲದ ಕಾರಣ ಪ್ರವಾಸಿಗರು ಆಟೊ, ದ್ವಿಚಕ್ರ ವಾಹನ ಆಶ್ರಯಿಸಿದ್ದಾರೆ.

ರಿಯಾಯಿತಿ ದರದ ಬಸ್‌ ಪಾಸ್‌ ಶಕ್ತಿ ಯೋಜನೆಯಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ನಗರದಿಂದ 10–15 ಕಿ.ಮೀ ವ್ಯಾಪ್ತಿಯಲ್ಲಿರುವ ಹಳ್ಳಿಗಳಿಗೂ ಸ್ಥಳೀಯ ಬಸ್‌ ಸಂಚಾರ ಒದಗಿಸಬೇಕು.
ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಆರ್‌.ಉಮಾ ವಿದ್ಯಾರ್ಥಿನಿ
ನಗರ ಸಾರಿಗೆ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ವಿದ್ಯಾರ್ಥಿಗಳು ಆಟೊಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಐದಾರು ಜನ ಪ್ರಯಾಣಿಸಬೇಕಾದ ಆಟೊಗಳು 10–15 ಜನರನ್ನು ತುಂಬಿಕೊಂಡು ಓಡಾಡುತ್ತಿವೆ
ಆರ್‌.ಗೋಪಿ ವಿದ್ಯಾರ್ಥಿ
ನಗರ ಸಾರಿಗೆಗೆ ಬೇಡಿಕೆ ಹೆಚ್ಚಿದೆ. ಸದ್ಯ ಒಂದು ಮಾರ್ಗದಲ್ಲಿ ಬಸ್‌ ಸಂಚಾರ ನಡೆಸುತ್ತಿದೆ. ಹೆಚ್ಚುವರಿ ಸಿಬ್ಬಂದಿ ನೇಮಕಾತಿಗೊಂಡು ಬಸ್‌ಗಳ ಸಂಖ್ಯೆ ಹೆಚ್ಚಾದರೆ ಮಾತ್ರ ಸೌಲಭ್ಯ ಕಲ್ಪಿಸಲಾಗುತ್ತದೆ
ಕೆ.ವೆಂಕಟೇಶ್‌ ವಿಭಾಗೀಯ ನಿಯಂತ್ರಣಾಧಿಕಾರಿ ರಾಜ್ಯ ರಸ್ತೆ ಸಾರಿಗೆ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.