ADVERTISEMENT

ಚಿತ್ರದುರ್ಗ: ಪ್ರತ್ಯೇಕ ತಾಣವಿಲ್ಲ... ಜನರ ಪಡಿಪಾಟಲು ತಪ್ಪಿಲ್ಲ

ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ; ಸಂಚಾರ ದಟ್ಟಣೆಯಿಂದ ಸವಾರರು ಹೈರಾಣ: ಪಾದಚಾರಿ ಮಾರ್ಗಗಳನ್ನು ಹುಡುಕುವ ಸ್ಥಿತಿ

ಎಂ.ಎನ್.ಯೋಗೇಶ್‌
Published 17 ನವೆಂಬರ್ 2025, 7:26 IST
Last Updated 17 ನವೆಂಬರ್ 2025, 7:26 IST
ಚಿತ್ರದುರ್ಗದ ಲಕ್ಷ್ಮಿ ಬಜಾರ್‌ ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿರುವ ಕಾರಣ ವಾಹನ ದಟ್ಟಣೆ ಉಂಟಾಗಿರುವುದು 
ಚಿತ್ರದುರ್ಗದ ಲಕ್ಷ್ಮಿ ಬಜಾರ್‌ ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿರುವ ಕಾರಣ ವಾಹನ ದಟ್ಟಣೆ ಉಂಟಾಗಿರುವುದು    

ಚಿತ್ರದುರ್ಗ: ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ತಾಣವಿಲ್ಲದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಗೆ ಇಳಿದರೆ ವಾಹನ ಎಲ್ಲಿ ನಿಲ್ಲಿಸಬೇಕೆಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ನಗರದ ಹೃದಯ ಭಾಗವಾಗಿರುವ ಬಿ.ಡಿ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವುದೇ ಕಷ್ಟ. ಇಲ್ಲಿ ರಸ್ತೆ ವಿಸ್ತರಣೆ ಮಾಡಬೇಕೆಂಬ ಬಹುಕಾಲದ ಬೇಡಿಕೆ ಇಂದಿಗೂ ಈಡೇರಿಲ್ಲ. ಇಲ್ಲಿಯ ವರ್ತಕರ ಲಾಬಿಗೆ ಮಣಿಯುತ್ತಿರುವ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ವಿಸ್ತರಣೆ ಕಾರ್ಯ ಮುಂದಕ್ಕೆ ಹಾಕುತ್ತಲೇ ಬರುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ತಮ್ಮ ಬೈಕ್‌, ಕಾರ್‌ ನಿಲ್ಲಿಸಲು ಪರದಾಡಬೇಕಾಗಿದೆ.

ಬಿ.ಡಿ ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮಾಲೀಕರು, ಪಾದಚಾರಿ ಮಾರ್ಗವನ್ನೂ ಆಕ್ರಮಿಸಿಕೊಂಡಿದ್ದು, ಅಲ್ಲೂ ಅಂಗಡಿ ಸಾಮಾನುಗಳನ್ನು ಇಟ್ಟುಕೊಂಡಿದ್ದಾರೆ.  ಇದರಿಂದ ಪಾದಚಾರಿಗಳ ಓಡಾಟಕ್ಕೆ ಜಾಗವೇ ಇಲ್ಲವಾಗಿದೆ. ಅಂಗಡಿ ಮಾಲೀಕರು, ಕೆಲಸಗಾರರು ರಸ್ತೆ ಇಕ್ಕೆಲಗಳಲ್ಲಿ ತಮ್ಮ ವಾಹನಗಳನ್ನೇ ನಿಲ್ಲಿಕೊಳ್ಳುತ್ತಿರುವ ಕಾರಣ ಗ್ರಾಹಕರು ತಮ್ಮ ವಾಹನದ ನಿಲುಗಡೆಗೆ ಜಾಗ ಹುಡುಕುವ ಸ್ಥಿತಿ ಎದುರಾಗಿದೆ. 

ADVERTISEMENT

ಲಕ್ಷ್ಮಿ ಬಜಾರ್‌ ಹಾಗೂ ಪೇಟೆ ಬೀದಿಯಲ್ಲಿ ಬೈಕ್‌ ಓಡಿಸುವುದು ಸಾಹಸವೇ ಸರಿ. ಇಲ್ಲಿ ಕಾರ್‌ ಚಾಲನೆ ದೂರದ ಮಾತು. ಲಕ್ಷ್ಮಿ ಬಜಾರ್‌ನ ಕಿಷ್ಕಿಂಧೆಯಂತಹ  ರಸ್ತೆಯ ಬದಿಯಲ್ಲೂ ಬೈಕ್‌ಗಳನ್ನು ನಿಲ್ಲಿಸುವ ಕಾರಣ ಜನ ಸಂಚಾರ ಕಟ್ಟವಾಗಿದೆ. ಹಬ್ಬದ ಸಂದರ್ಭದಲ್ಲಿ ಈ ರಸ್ತೆಗಿಳಿದರೆ ಒಂದೋ ಗಾಡಿಗಳು ಹಾಳಾಗುತ್ತವೆ. ಇಲ್ಲವೇ ಮೈಕೈಗೆ ಗಾಯಗಳಾಗುತ್ತವೆ ಎಂಬ ಪರಿಸ್ಥಿತಿ ಇದೆ. 

ಹೊಳಲ್ಕೆರೆ ರಸ್ತೆ ಕೂಡ ವಿಸ್ತರಣೆಯಾಗದ ಕಾರಣ ವಾಹನ ಚಾಲನೆ ಮಾಡುವುದು ಕಷ್ಟದ ಕೆಲಸವಾಗಿದೆ. ಅಲ್ಲೂ ಅಂಗಡಿಗಳು ಫುಟ್‌ಪಾತ್‌ ಅನ್ನು ಆಕ್ರಮಿಸಿಕೊಂಡಿವೆ. ಕನಕ ವೃತ್ತದಿಂದ ಬಿ.ಡಿ. ರಸ್ತೆವರೆಗೂ ಅತ್ಯಂತ ಎಚ್ಚರಿಕೆಯಿಂದ ಗಾಡಿ ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ.ಡಿ ರಸ್ತೆಯಿಂದ ಮೆದೇಹಳ್ಳಿಗೆ ಹೋಗುವ ಮಾರ್ಗದಲ್ಲೂ ಇದೇ ಪರಿಸ್ಥಿತಿ ಇದೆ.

ಗಾಂಧಿ ವೃತ್ತದಲ್ಲಿ ನಗರಸಭೆ ವಾಹನ ನಿಲುಗಡೆಗಾಗಿಯೇ ಜಾಗ ಗುರುತು ಮಾಡಿದ್ದು, ಬಹುಮಹಡಿ ಕಟ್ಟಡ ನಿರ್ಮಿಸಲೂ ಉದ್ದೇಶಿಸಲಾಗಿತ್ತು. ಇದು ಸಾಕಾರಗೊಂಡಿದ್ದರೆ ಲಕ್ಷ್ಮಿ ಬಜಾರ್‌, ಬಿ.ಡಿ ರಸ್ತೆ, ಹೊಳಲ್ಕೆರೆ ರಸ್ತೆ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆಗೆ ಬರುವ ಗ್ರಾಹಕರ ವಾಹನ ನಿಲ್ಲಿಸಲು ಸಹಾಯಕವಾಗುತ್ತಿತ್ತು. ಆದರೆ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸುವ ನಗರಸಭೆ ಉದ್ದೇಶ ನನೆಗುದಿಗೆ ಬಿದ್ದಿರುವ ಕಾರಣ ಸಾರ್ವಜನಿಕರ ಗೋಳು ಹೇಳತೀರದಾಗಿದೆ.

‘ಬಿ.ಡಿ.ರಸ್ತೆಯಲ್ಲಿ ಹಲವು ಸ್ಟೇಷನರಿ ಅಂಗಡಿಗಳಿದ್ದು ನೋಟ್‌ ಪುಸ್ತಕ, ಪೆನ್‌, ಪೆನ್ಸಿಲ್‌ ಖರೀದಿಸಲು ಬಂದಾಗ ಗಾಡಿ ನಿಲ್ಲಿಸಲು ಜಾಗವೇ ಇರುವುದಿಲ್ಲ. ಅಂಗಡಿ ಒಂದೆಡೆ ಇದ್ದರೆ ಗಾಡಿಯನ್ನು ಅರ್ಧ ಕಿ.ಮೀ ದೂರದಲ್ಲಿ ನಿಲ್ಲಿಸಬೇಕಾಗಿದೆ. ಅಲ್ಲಿಗೆ ಬೈಕ್‌ ತೆಗೆದುಕೊಂಡು ಹೋಗಲೇಬಾರದು ಎಂಬ ಬೇಸರ ಉಂಟಾಗುತ್ತದೆ’ ಎಂದು ಜೆಸಿಆರ್‌ ಬಡಾವಣೆಯ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಜೆಸಿಆರ್‌ ಮುಖ್ಯರಸ್ತೆಯಲ್ಲಿ ಇನ್ನೊಂದು ರೀತಿಯ ಸಮಸ್ಯೆ ಇದೆ. ಈ ರಸ್ತೆಯುದ್ದಕ್ಕೂ ಆಹಾರ, ಚಾಟ್ಸ್‌ (ಜಂಕ್‌ ಫುಡ್‌) ಮಾರಾಟದ ಅಂಗಡಿ, ಕ್ಯಾಂಟೀನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಂಜೆಯಾಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಾರೆ. ಫುಟ್‌ಪಾತ್‌, ರಸ್ತೆಯ ಬದಿಯ ಒಂದಿಂಚೂ ಜಾಗ ಬಿಡದಂತೆ ಅಂಗಡಿಗಳು ಆವರಿಸಿಕೊಂಡಿರುತ್ತವೆ. 

ಗ್ರಾಹಕರಿಗೆ ವಾಹನ ನಿಲ್ಲಿಸಲು ಜಾಗವೇ ಇಲ್ಲದ ಕಾರಣ ಪರದಾಡಬೇಕಾಗಿದೆ. ರಸ್ತೆಯ ಬದಿಯಲ್ಲೇ ವಾಹನ ನಿಲ್ಲಿಸುತ್ತಿರುವ ಕಾರಣ ಬೇರೆ ವಾಹನಗಳ ಓಡಾಟ  ಕಷ್ಟಮಯವಾಗಿದೆ. ರಾತ್ರಿ 9 ಗಂಟೆಯವರೆಗೂ ಕ್ಯಾಂಟೀನ್‌ಗಳಲ್ಲಿ ಜನಸಂದಣಿ ಇರುತ್ತದೆ. ಅಲ್ಲಿಯವರೆಗೂ ಜೆ.ಸಿ.ಆರ್‌ ರಸ್ತೆಯಲ್ಲಿ ವಾಹನ ಓಡಿಸುವುದು ಸಾಹಸದ ಕೆಲಸವಾಗಿದೆ.

ಒಳ ರಸ್ತೆಯಲ್ಲೂ ಸಂಕಟ: ನಗರದ ಮುಖ್ಯರಸ್ತೆಗಳಷ್ಟೇ ಅಲ್ಲದೇ, ಒಳರಸ್ತೆಗಳಲ್ಲೂ ವಾಹನ ನಿಲುಗಡೆಗೆ ಜಾಗ ಇಲ್ಲದ ಕಾರಣ ಸವಾರರ ಪರದಾಟ ಹೇಳತೀರದಾಗಿದೆ. ರಂಗಯ್ಯನಬಾಗಿಲು ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರು ಪರದಾಡುತ್ತಾರೆ. ರಂಗಯ್ಯನ ಬಾಗಿಲಿನಿಂದ ಉಚ್ಛಂಗಿ ಯಲ್ಲಮ್ಮ ದೇವಾಲಯದವರೆಗೂ ಹಲವು ಹೋಟೆಲ್‌ಗಳಿದ್ದು, ರಸ್ತೆಯ ಎರಡೂ ಕಡೆಯ ಫುಟ್‌ಪಾತ್‌ಗಳನ್ನು ವಾಹನಗಳು ಆಕ್ರಮಿಸಿಕೊಳ್ಳುತ್ತವೆ. 

ಸವಿರುಚಿ, ಸತ್ಯನಾರಾಯಣ ಖಾನಾವಳಿ, ಬೆಣ್ಣೆದೋಸೆ ಹೋಟೆಲ್‌ಗಳಿಗೆ ಅಪಾರ ಸಂಖ್ಯೆಯ ಜನ ಬರುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರೂ ಈ ಹೋಟೆಲ್‌ಗಳಿಗೆ ಬರುತ್ತಾರೆ. ಹೋಟೆಲ್‌ ಮಾಲೀಕರು ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಾರೆ. ಆದರೆ, ಯಾವುದೇ ಪಾರ್ಕಿಂಗ್‌ ಸೌಲಭ್ಯ ನೀಡದ ಕಾರಣ ಗ್ರಾಹಕರು ಗಾಡಿ ನಿಲ್ಲಿಸಲು ಪರದಾಡುತ್ತಾರೆ.

ಫುಟ್‌ಪಾತ್‌ನ ಎರಡೂ ಕಡೆ ಬೈಕ್‌, ಕಾರ್‌ಗಳೇ ನಿಲ್ಲುವ ಕಾರಣ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೂ ತೊಂದರೆಯಾಗಿದೆ. ಆನೆ ಬಾಗಿಲು ರಸ್ತೆಯಲ್ಲೂ ಇದೇ ಪರಿಸ್ಥಿತಿ ಇದೆ. ರಸ್ತೆಯುದ್ದಕ್ಕೂ ಬಟ್ಟೆ ಅಂಗಡಿಗಳು, ಚಿನ್ನದಂಗಡಿಗಳಿವೆ. ಪಾರ್ಕಿಂಗ್‌ ಸೌಲಭ್ಯವಿಲ್ಲದ ಕಾರಣ ಗ್ರಾಹಕರು ಪರದಾಡಬೇಕಾಗಿದೆ.

ಚಿತ್ರದುರ್ಗ ಬಸ್‌ ನಿಲ್ದಾಣದ ಪಾರ್ಕಿಂಗ್‌ ತಾಣ ತುಂಬಿ ಹೊರಗೇ ಬೈಕ್‌ ನಿಲ್ಲಿಸಿರುವುದು
ಹೊಸದುರ್ಗದ ಗಾಂಧಿ ವೃತ್ತದ ಸಮೀಪ ನಿತ್ಯ ಕಂಡು ಬರುವ ವಾಹನ ದಟ್ಟಣೆ

ಇಕ್ಕಟ್ಟಾದ ಗಣಪತಿ ರಸ್ತೆ

ಸಾಂತೇನಹಳ್ಳಿ ಸಂದೇಶ್‌ಗೌಡ ಹೊಳಲ್ಕೆರೆ: ಕಂಬದ ದೇವರ ಹಟ್ಟಿ ಚೀರನಹಳ್ಳಿಯಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಗಣಪತಿ ರಸ್ತೆ ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಐತಿಹಾಸಿಕ ಜಡೆ ಗಣಪತಿ ದೇವಸ್ಥಾನ ಇದೇ ಮಾರ್ಗದಲ್ಲಿದ್ದು ದೇವಸ್ಥಾನಕ್ಕೆ ಬರುವ ಭಕ್ತರು ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ. ಪ್ರತೀ ತಿಂಗಳ ಸಂಕಷ್ಟಿಯಂದು ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು ಸಾವಿರಾರು ಭಕ್ತರು ಆಗಮಿಸುತ್ತಾರೆ. ರಸ್ತೆ ಕಿರಿದಾಗಿರುವುದರಿಂದ ಹೆಚ್ಚು ಸಮಸ್ಯೆ ಆಗುತ್ತಿದೆ. ಚೀರನಹಳ್ಳಿ ಕಂಬದ ದೇವರಹಟ್ಟಿಗೆ ಆಟೋ ರಿಕ್ಷಾಗಳು ಸಂಚರಿಸಲಿದ್ದು ಈ ಹಳ್ಳಿಗಳ ಪ್ರಯಾಣಿಕರಿಗೂ ತೊಂದರೆ ಆಗಿದೆ. ಈ ರಸ್ತೆಯಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಬೇಕು. ಕೆಎಸ್‌ಆರ್‌ಟಿಸಿ ಪುರಸಭೆ ಕಟ್ಟಡದಲ್ಲಿರುವ ಸೆಲ್ಲರ್‌ಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ದಿನಕ್ಕೆ ನೂರಾರು ಬಾರಿ ಟ್ರಾಫಿಕ್ ಜಾಮ್ ಸುವರ್ಣಾ ಬಸವರಾಜ್‌

ಹಿರಿಯೂರು: ನಗರದ ಪ್ರಧಾನ ರಸ್ತೆಯ ವೇದಾವತಿ ಸೇತುವೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ನಿತ್ಯ ನೂರಾರು ಬಾರಿ ಸಂಚಾರ ಅಸ್ತವ್ಯಸ್ತವಾಗುವುದು ಮಾಮೂಲಾಗಿದೆ. ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಗಾಂಧಿ ವೃತ್ತದಿಂದ ವೇದಾವತಿ ಸೇತುವೆವರೆಗೆ ವಾಹನದಲ್ಲಿ ಸಂಚರಿಸುವವರು ತಾಲ್ಲೂಕು ಹಾಗೂ ನಗರಸಭೆ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಾರೆ. ಒಮ್ಮೆಗೆ ಎರಡು ವಾಹನಗಳು ಸಂಚರಿಸುವಷ್ಟು ಮಾತ್ರ ರಸ್ತೆ ಅಗಲವಿರುವ ಕಾರಣ ಯಾವುದೋ ಕಾರಣಕ್ಕೆ ವಾಹನವೊಂದನ್ನು  ನಿಲುಗಡೆ ಮಾಡಿದರೆ ವಾಹನಗಳು ಸಾಲುಗಟ್ಟಿ ನಿಲ್ಲುವುದು ಖಚಿತ ಎಂಬ ಸ್ಥಿತಿ ಇದೆ. ಎಲ್ಲಿ ರಸ್ತೆ ವಿಸ್ತರಣೆ ಮಾಡಬೇಕಿತ್ತೋ ಅಲ್ಲಿ ಬಿಟ್ಟು ರಸ್ತೆ ಅಗಲ ಇರುವ ಕಡೆಯೇ ಇನ್ನಷ್ಟು ಅಗಲ ಮಾಡಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಪ್ರಧಾನ ರಸ್ತೆಯಲ್ಲಿ ಆಟೊ ಕಾರ್‌ಗಳಿಗೆ ಪ್ರತ್ಯೇಕ ಸ್ಥಳ ಹಾಗೂ ದಿನಾಂಕ ಇರುವ ನಾಮ ಫಲಕ ಅಳವಡಿಸಬೇಕು. ಅಂಗಡಿ ಮಾಲೀಕರು ಪಾದಚಾರಿ ರಸ್ತೆ ಆಕ್ರಮಿಸಿಕೊಳ್ಳದಂತೆ ತಡೆಯಬೇಕು. ನಗರ ಠಾಣೆ ಪೊಲೀಸರು ಶಾಲಾ–ಕಾಲೇಜು ಸಮಯದಲ್ಲಿ ಗಸ್ತು ತಿರುಗಬೇಕು ಎಂಬುದು ನಾಗರಿಕರ ಆಗ್ರಹ.

ಜಿಲ್ಲೆಯ ಪ್ರಮುಖ ನಗರ ಪಟ್ಟಣ ಪ್ರದೇಶಗಳ ಪ್ರಮುಖ ರಸ್ತೆಗಳ ವಿಸ್ತರಣೆಗೆ ಕ್ರಮ ವಹಿಸಲಾಗಿದೆ. ವಾಹನಗಳ ಪಾರ್ಕಿಂಗ್‌ಗಾಗಿಯೇ ಪ್ರತ್ಯೇಕ ಜಾಗ ಗುರುತು ಮಾಡಲಾಗುವುದು.
-ಟಿ.ವೆಂಕಟೇಶ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.