ADVERTISEMENT

ಚಿತ್ರದುರ್ಗ: ಫಲಿತಾಂಶ ಸುಧಾರಿಸಲು ಹಾಸ್ಟೆಲ್‌ಗಳಲ್ಲಿ ವಿಶೇಷ ಕಲಿಕೆ

ಸಮಾಜ ಕಲ್ಯಾಣ ಇಲಾಖೆಯಿಂದ ವಿನೂತನ ಪ್ರಯತ್ನ; ವಿಜ್ಞಾನ ವಿದ್ಯಾರ್ಥಿಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:41 IST
Last Updated 24 ಡಿಸೆಂಬರ್ 2025, 7:41 IST
<div class="paragraphs"><p>ಚಿತ್ರದುರ್ಗದ ಡಾ.ಬಿ.ಆರ್.ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ‘ಸಿ’ ವಿದ್ಯಾರ್ಥಿ ನಿಲಯದಲ್ಲಿ ನಡೆದ ವಿಶೇಷ ತರಗತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು&nbsp;</p></div>

ಚಿತ್ರದುರ್ಗದ ಡಾ.ಬಿ.ಆರ್.ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ‘ಸಿ’ ವಿದ್ಯಾರ್ಥಿ ನಿಲಯದಲ್ಲಿ ನಡೆದ ವಿಶೇಷ ತರಗತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು 

   

ಚಿತ್ರದುರ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ 67 ದಿನಗಳು ಬಾಕಿ ಉಳಿದಿದ್ದು, ಫಲಿತಾಂಶ ಸುಧಾರಣೆಗೆ ಪದವಿಪೂರ್ವ ಕಾಲೇಜುಗಳಲ್ಲಿ ನಾನಾ ಕಸರತ್ತು ನಡೆಸಲಾಗುತ್ತಿದೆ. ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ವಿಶೇಷ ತರಗತಿಗಳನ್ನು ಆಯೋಜಿಸಲಾಗುತ್ತಿದೆ. 

ಜಿಲ್ಲೆಯಲ್ಲಿ 30 ಸರ್ಕಾರಿ, 45 ಅನುದಾನಿತ, 44 ಅನುದಾನರಹಿತ, ವಸತಿ ಶಿಕ್ಷಣ ಸಂಸ್ಥೆ, ಕೆಪಿಎಸ್‌ ಹಾಗೂ ಆದರ್ಶ ಸಂಸ್ಥೆ ಸೇರಿ ಒಟ್ಟು 135 ಪದವಿಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 3,829, ವಿಜ್ಞಾನ ವಿಭಾಗದಲ್ಲಿ 6,207 ಹಾಗೂ ವಾಣಿಜ್ಯ ವಿಭಾಗದಲ್ಲಿ 3,305 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 

ADVERTISEMENT

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸಂಜೆ ತರಗತಿ ನಡೆಸುತ್ತಿದೆ. ಕಳೆದ ವರ್ಷದ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ 28ನೇ ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ಫಲಿತಾಂಶ ಸುಧಾರಣೆಗೆ ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕಾ ಜಾಗೃತಿ ಮೂಡಿಸಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಡಿಸೆಂಬರ್‌ ಮೊದಲ ವಾರದಿಂದ ವಿಶೇಷ ತರಗತಿ ನಡೆಸಲಾಗುತ್ತಿದೆ. 

ದೂರದ ಊರುಗಳ ಬಡ ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿ ನೆಲೆಸಿರುವವರಲ್ಲಿ ಹೆಚ್ಚಿನವರು ಕಳೆದ ಬಾರಿ ಫಲಿತಾಂಶ ಕುಸಿತ ಕಂಡಿದ್ದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು. ಇವರ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಇಲಾಖೆಯು ಖಾಸಗಿ ಸಂಸ್ಥೆಗಳ ಉಪನ್ಯಾಸಕರಿಂದ ಬೋಧನೆ ಮಾಡಿಸುತ್ತಿದೆ. ಇದಕ್ಕಾಗಿ ಅವರಿಗೆ ಗೌರವಧನವನ್ನೂ ನೀಡುತ್ತಿದೆ. 

ಸಂಜೆಯ ಅವಧಿಯಲ್ಲಿ ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್‌ ವಿಷಯಗಳನ್ನು ಕಲಿಸಲಾಗುತ್ತಿದೆ. ನಿತ್ಯ ಸಂಜೆ 5ರಿಂದ 7 ಗಂಟೆ ಹಾಗೂ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಮತ್ತು ಸಂಜೆ 6 ಗಂಟೆಗೆ ತರಗತಿ ನಡೆಸಲಾಗುತ್ತಿದೆ. ಕಾಲೇಜಿನಲ್ಲಿ ಕಲಿತ ವಿಷಯವನ್ನು ಈ ಅವಧಿಯಲ್ಲಿ ಪುನರ್‌ ಮನನ ಮಾಡಿಸಲಾಗುತ್ತದೆ. ಕಿರು ಪರೀಕ್ಷೆ, ಸೂತ್ರಗಳನ್ನು ಸರಳವಾಗಿ ಬಿಡಿಸುವುದು ಸೇರಿದಂತೆ ಅಂಕ ವೃದ್ಧಿಗೆ ನೆರವಾಗುವ ಹಲವು ತಂತ್ರಗಳನ್ನು ಕಲಿಸಲಾಗುತ್ತದೆ.  

ಹಿಂದಿನ ವರ್ಷಗಳ ವಾರ್ಷಿಕ ಪರೀಕ್ಷೆಗಳಲ್ಲಿ ಪುನರಾವರ್ತನೆಯಾಗಿರುವ ಪ್ರಶ್ನೆಗಳನ್ನು ಹೆಕ್ಕಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಯ ಕಲಿಕಾ ಪ್ರಗತಿಯನ್ನು ಸಕಾಲಕ್ಕೆ ಮೌಲ್ಯಮಾಪನ ಮಾಡಿ ಹೆಚ್ಚಿನ ಮಾರ್ಗದರ್ಶನ ನೀಡಲಾಗುತ್ತಿದೆ.

ಮೊದಲ ಹಂತದಲ್ಲಿ ನಗರ ವ್ಯಾಪ್ತಿಯ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಬೋಧನೆ ನಡೆಯುತ್ತಿದೆ. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿರುವ ಕಾರಣ ಉತ್ತಮ ಸ್ಪಂದನೆ ದೊರೆತಿದೆ. ಇದರಿಂದ ಪ್ರೇರಣೆಗೊಂಡಿರುವ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿನ 41 ವಿದ್ಯಾರ್ಥಿ ನಿಲಯಗಳಲ್ಲೂ ವಿಶೇಷ ತರಗತಿ ಕಾರ್ಯಕ್ರಮ ವಿಸ್ತರಿಸಲು ಚಿಂತನೆ ನಡೆಸಿದ್ದಾರೆ.  

ಫಲಿತಾಂಶ ಕುಸಿತ ಕಂಡ ಕಾಲೇಜುಗಳು

ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಬಾಪೂಜಿ ಸಂಯಕ್ತ ಪದವಿಪೂರ್ವ ಕಾಲೇಜು ಹೊಸದುರ್ಗದ ಸರ್ಕಾರಿ ಪದವಿಪೂರ್ವ ಕಾಲೇಜು ಸಿದ್ದರಾಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಮೊಳಕಾಲ್ಮುರು ಸರ್ಕಾರಿ ಪದವಿಪೂರ್ವ ಕಾಲೇಜು ಹಿರಿಯೂರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಹೊಳಲ್ಕೆರೆಯ ಸರ್ಕಾರಿ ಪದವಿ‌‌‌‌‌‌‌‌‌‌‌‌ಪೂರ್ವ ಕಾಲೇಜು. 

ನಿತ್ಯ ಸಂಜೆ 2 ಗಂಟೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಕಾಲೇಜಿನಲ್ಲಿ ಕೇಳಿದ ಪಾಠವನ್ನು ಪುನಃ ಕಲಿಸುತ್ತಿರುವುದರಿಂದ ವಿಷಯದ ಮೇಲೆ ಹಿಡಿತ ಸಿಗುತ್ತಿದೆ. ಜತೆಗೆ ಸಿಇಟಿ ನೀಟ್‌ ಜೆಇಇ ಪರೀಕ್ಷೆಗೂ ಸಿದ್ಧತೆ ನಡೆದಿದೆ
ಜೆ.ಲಕ್ಷ್ಮಿ, ವಿದ್ಯಾರ್ಥಿನಿ
ಪಿಯುಸಿ ಫಲಿತಾಂಶ ಸುಧಾರಿಸಲಿ ಎಂಬ ಕಾರಣಕ್ಕೆ ಸ್ವಯಂ ಪ್ರೇರಿತರಾಗಿ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಜನವರಿಯಿಂದ ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ತರಗತಿ ಪ್ರಾರಂಭಿಸಲಾಗುತ್ತದೆ
ಬಿ.ಮಲ್ಲಿಕಾರ್ಜುನ್‌, ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.